ಕೊಪ್ಪಳ:
ವಿವಿಧ ಕನ್ನಡಪರ ಸಂಘಟನೆಗಳು ನಗರದಲ್ಲಿ ಪ್ರತಿಭಟನೆ ನಡೆಸಿ, ರಾಜ್ಯದ ವಿರುದ್ಧ ಪದೇಪದೇ ತಗಾದೆ ತೆಗೆಯುವ ಮತ್ತು ಕನ್ನಡಿಗರ ಮೇಲೆ ದೌರ್ಜನ್ಯ ಎಸಗುವ ಎಂಇಎಸ್ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದವು.
ನಗರದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಕನ್ನಡಪರ ಸಂಘಟನೆಗಳು ನಂತರ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ತುಂಗಭದ್ರಾ ಜಲಾಶಯದ ಹೂಳೆತ್ತುವುದು, ಕನಕಗಿರಿ ತಾಲೂಕಿನ ನವಲಿ ಸಮಾನಾಂತರ ಜಲಾಶಯ ಕಾಮಗಾರಿ ಕೈಗೆತ್ತಿಕೊಳ್ಳುವುದು, ಅಂಜನಾದ್ರಿ ಬೆಟ್ಟವನ್ನು ತಿರುಪತಿ ಮಾದರಿ ಅಭಿವೃದ್ಧಿಪಡಿಸಿವುದು, ಕೊಪ್ಪಳ ನಗರದಲ್ಲಿ ಸ್ಟೀಲ್ ಕಾರ್ಖಾನೆ ಅನುಮತಿ ರದ್ದುಪಡಿಸುವುದು, ಕೃಷ್ಣಾ ಬಿ ಸ್ಕೀಂ, ಕೊಪ್ಪಳ ಏತ ನೀರಾವರಿ ಯೋಜನೆ ಪೂರ್ಣಗೊಳಿಸುವುದು, ರಾಯಚೂರಿಗೆ ಏಮ್ಸ್ ಆಸ್ಪತ್ರೆ, ಕೊಪ್ಪಳ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಕಠಿವಾಣ ಹಾಕುವಂತೆ ಮನವಿಯಲ್ಲಿ ತಿಳಿಸಲಾಗಿದೆ.
ಈ ವೇಳೆ ಕರವೇ (ಪ್ರವೀಣಶೆಟ್ಚಿಬಣ) ಜಿಲ್ಲಾಧ್ಯಕ್ಷ ಪಂಪಣ್ಣ ನಾಯಕ, ವೀರ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ವಿರೂಪಾಕ್ಷಿ ನಾಯಕ, ಚನ್ನಬಸವ ಜೇಕೀನ್, ಅರ್ಜುನ ನಾಯಕ, ಬಳ್ಳಾರಿ ರಾಮಣ್ಣ ನಾಯಕ, ರಾಜೇಶರೆಡ್ಡಿ, ಆರ್. ವಿಜಯಕುಮಾರ, ರಮೇಶ ಕೋಟಿ, ಮೊಹ್ಮದ್ ರಫೀ, ದೇವಣ್ಣ ಸಂಗಾಪುರ, ಶಫಿ ಬಿಸ್ತಿ, ಫೀರ ಮೊಹ್ಮದ್, ಖಾದರ್ ಬಾಷಾ, ಯಮನೂರ್ ಭಟ್, ಮಂಜು ಸಾಬಳೇ ಹಾಗೂ ತಾಲೂಕು ಪದಾಧಿಕಾರಿಗಳು ಹಾಜರಿದ್ದರು.