ಅನ್ನದಾತರನ್ನೇ ಕಡೆಗಣಿಸುವ ಜತೆಗೆ ಮುಸ್ಲಿಮರಿಗೆ ಹೆಚ್ಚು ಅನುದಾನ ನೀಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಅನ್ನೇ ಇಸ್ಲಾಮೀಕರಣಗೊಳಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಸದಸ್ಯರು ಟ್ರ್ಯಾಕ್ಟರ್ ಸಮೇತ ಪ್ರತಿಭಟನೆ ನಡೆಸಿದರು.
ಅನ್ನದಾತರನ್ನೇ ಕಡೆಗಣಿಸುವ ಜತೆಗೆ ಮುಸ್ಲಿಮರಿಗೆ ಹೆಚ್ಚು ಅನುದಾನ ನೀಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಅನ್ನೇ ಇಸ್ಲಾಮೀಕರಣಗೊಳಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಸದಸ್ಯರು ಟ್ರ್ಯಾಕ್ಟರ್ ಸಮೇತ ಪ್ರತಿಭಟನೆ ನಡೆಸಿದರು.
ನಗರದ ಶ್ರೀ ಜಯದೇವ ವೃತ್ತದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಜಿಲ್ಲಾ ವಕ್ತಾರ ಬಿ.ಎಂ.ಸತೀಶ ಕೊಳೇನಹಳ್ಳಿ ಇತರರ ನೇತೃತ್ವದಲ್ಲಿ ಎಸಿ ಕಚೇರಿವರೆಗೂ ರಾಜ್ಯ ಸರ್ಕಾರದ ತುಷ್ಟೀಕರಣದ ಬಜೆಟ್, ರೈತ ವಿರೋಧಿ ಬಜೆಟ್ ವಿರುದ್ಧ ಘೋಷಣೆ ಕೂಗುತ್ತ ಸಾಗಿದರು.
ನಂತರ ಎಸಿ ಕಚೇರಿ ಎದುರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಎನ್.ರಾಜಶೇಖರ ನಾಗಪ್ಪ, ಮುಖ್ಯಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ಮುಸ್ಲಿಮರಿಗೆ ಹೆಚ್ಚು ಅನುದಾನ ನೀಡಿ, ಬಜೆಟ್ ಅನ್ನೇ ಇಸ್ಲಾಮೀಕರಣ ಮಾಡಿದ್ದಾರೆ. ಇದೊಂದು ಹಲಾಲ್ ಬಜೆಟ್ ಆಗಿದ್ದು, ದಾದಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್‌ರ ಆಶಯಗಳಿಗೆ ತಿಲಾಂಜಲಿ ಇಟ್ಟಿದ್ದಾರೆ ಎಂದು ಕಿಡಿಕಾರಿದರು.
ಕಿತ್ತೂರು ಕರ್ನಾಟಕದ ಅಭಿವೃದ್ಧಿಗೂ ಕಡಿಮೆ ಅನುದಾನ ಘೋಷಿಸಿದ್ದಾರೆ. ವಿಧಾನಸಭಾ ಕ್ಷೇತ್ರಗಳ ರಸ್ತೆ, ನೀರು, ಮೂಲ ಸೌಕರ್ಯ ಕಲ್ಪಿಸಲು ಮೀಸಲಿಟ್ಟ ಅನುದಾನವಂತೂ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ನೀಡಿದಂತಾಗಿದೆ ಎಂದು ದೂರಿದರು.
ದಶಕಗಳಿಂದಲೂ ದಾವಣಗೆರೆ ನಗರ, ಜಿಲ್ಲೆಯ ಜನರ ಬೇಡಿಕೆಯಾದ ವಿಮಾನ ನಿಲ್ದಾಣ ಸ್ಥಾಪನೆಯಾಗಲಿ, ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರು ಮಾಡುವುದಾಗಲೀ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನೀಡುವುದಾಗಲೀ, ದಾವಣಗೆರೆ-ಚಿತ್ರದುರ್ಗ ಅವಳಿಗೆ ಜಿಲ್ಲೆಗಳಿಗೆ ಪ್ರತ್ಯೇಕ ಹಾಲು ಒಕ್ಕೂಟ ಮಾಡುವುದಾಗಲೀ, ಜವಳಿ ಪಾರ್ಕ್, ಐಟಿ ಬಿಟಿ, ಬಡವರಿಗೆ ಸೂರು ಕಲ್ಪಿಸುವ ಯೋಜನೆ ನೀಡದೇ ಕಾಂಗ್ರೆಸ್ ಸರ್ಕಾರ ದಾವಣಗೆರೆಯನ್ನು ಕಡೆಗಣಿಸಿದೆ. ಜಿಲ್ಲೆಯ ಜನರ ಬಹುತೇಕ ಬೇಡಿಕೆ ನನೆಗುದಿಗೆ ಬಿದ್ದಿದೆ ಎಂದು ಟೀಕಿಸಿದರು.
ಪಕ್ಷದ ಜಿಲ್ಲಾ ವಕ್ತಾರ ಬಿ.ಎಂ.ಸತೀಶ ಕೊಳೇನಹಳ್ಳಿ ಮಾತನಾಡಿ, ಜೀವನಾಡಿ ಭದ್ರಾ ಅಣೆಕಟ್ಟೆ ದುರಸ್ತಿ, ಜಿಲ್ಲೆಯ ಭದ್ರಾ ಕಾಲುವೆಗಳಲ್ಲಿ ಗಿಡಗಂಟೆಗಳು ಬೆಳೆದು, ಸಾಕಷ್ಟು ಹೂಳು ತುಂಬಿದೆ. ಇದರಿಂದಾಗಿ ಡ್ಯಾಂ ನೀರು ಕೊನೆಯ ಭಾಗಕ್ಕೆ ಸಮರ್ಪಕವಾಗಿ ಹರಿಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯ ಬಹುತೇಕ ಕಡೆ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದರೂ, ಕಡೆಗೆ ಜಿಲ್ಲೆಗೊಂದು ತೋಟಗಾರಿಕೆ ಕಾಲೇಜು ತರುವ ಆಸಕ್ತಿಯನ್ನೂ ತೋರಿಲ್ಲ ಎಂದು ಟೀಕಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.