ಮುಂದೆ ಬಿಜಾಪುರದಲ್ಲಿ ಘೋಷಣೆ ಮಾಡ್ತಿವಿ, ಯಡಿಯೂರಪ್ಪ- ವಿಜಯೇಂದ್ರ ಪರವಾಗಿದ್ದೇವೆ,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸಂಘಟನಾ ಚತುರ, ಭವಿಷ್ಯದ ನಾಯಕ, ಮುಖ್ಯಮಂತ್ರಿ ಎಂದು ವೀರಶೈವ ಲಿಂಗಾಯತ ಮಹಾ ಸಂಗಮ ಸಮಾವೇಶದಲ್ಲಿ ಮಠಾಧೀಶರ ಸಮ್ಮುಖದಲ್ಲಿ ಸಮುದಾಯದ ಮುಖಂಡರು, ರಾಜಕೀಯ ಪಕ್ಷಗಳ ಮುಖಂಡರು ಬಿಜೆಪಿ ವರಿಷ್ಟರಿಗೆ ಬಹಿರಂಗ ಸಂದೇಶ ರವಾನಿಸಿದರು.ಬಿಜೆಪಿಗೆ ಯಡಿಯೂರಪ್ಪ ಅನಿವಾರ್ಯ. ಪಕ್ಷ ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬರಬೇಕಾದರೆ ವಿಜಯೇಂದ್ರರನ್ನು ಆ ಸ್ಥಾನದಲ್ಲಿ ಮುಂದುವರಿಸಬೇಕು. ಈ ಮಾತನ್ನು ಇಲ್ಲಿ ಮಾತ್ರವಲ್ಲ ವಿಜಾಪುರದಲ್ಲೂ ಹೇಳಲು ಸಿದ್ಧರಿದ್ದೇವೆ ಎಂದ ಮುಖಂಡರು, ನಾವುಗಳು ಯಡಿಯೂರಪ್ಪ ಹಾಗೂ ವಿಜಯೇಂದ್ರ ಪರವಾಗಿದ್ದೇವೆ ಎಂದು ಸಮಾವೇಶದ ಆರಂಭದಿಂದ ಕೊನೆಯವರೆಗೆ ಹೇಳಿದರು.
ನಗರದ ಶ್ರೀ ರೇಣುಕಾಚಾರ್ಯ ಕಲ್ಯಾಣ ಮಂಟಪದಲ್ಲಿ ಶನಿವಾರ ವೀರಶೈವ ಲಿಂಗಾಯತ ಮಹಾ ಸಂಗಮದಲ್ಲಿ ಮಾತನಾಡಿದ ಬಹುತೇಕ ಮುಖಂಡರು ಯಡಿಯೂರಪ್ಪ ಹಾಗೂ ವಿಜಯೇಂದ್ರ ಪರವಾಗಿರುವುದಾಗಿ ತಿಳಿಸಿದರು.ಚನ್ನಗಿರಿ ತಾಲೂಕಿನ ಮಾಡಳ್ ಮಲ್ಲಿಕಾರ್ಜುನ ಮಾತನಾಡಿ, ಇದು, ರಾಜಕೀಯ ಸಭೆ ಅಲ್ಲ. ವೀರಶೈವ ಲಿಂಗಾಯತ ಸಮಾಜದವರನ್ನು ರಾಜಕೀಯವಾಗಿ ತುಳಿಯುವ ಕೆಲಸ ನಡೆಯುತ್ತಿದೆ. ಈ ಸಂದರ್ಭದಲ್ಲಿ ನಾವು ಎಚ್ಚರವಾಗಿರಬೇಕು. ಸಿದ್ಧಾಂತದ ಹೆಸರಿನಲ್ಲಿ ಮೂಲೆ ಗುಂಪು ಮಾಡುತ್ತಿದ್ದಾರೆ. ನಮ್ಮೊಳಗೆ ಒಳ ಜಗಳ ಹಚ್ಚುವ ಕೆಲಸ ನಡೆಯುತ್ತಿದೆ ಎಂದರು.
ನಮ್ಮ ಸಮಾಜದ ಮುಖಂಡರಿಗೆ ಅನ್ಯಾಯವಾದಾಗ, ಕೀಳಾಗಿ ನಡೆಸಿಕೊಂಡಾಗ ನಾವುಗಳು ಒಂದಾಗಬೇಕು. ಸಮಾಜ ಒಗ್ಗೂಡಿಸುವ ಹಾಗೂ ವಿಜಯೇಂದ್ರ ಅವರಿಗೆ ಬೆಂಬಲ ಸೂಚಿಸಲು ನಾವುಗಳು ಒಂದಾಗಬೇಕು ಎಂದು ಹೇಳಿದರು.ಮಾಜಿ ಶಾಸಕ ಎಸ್.ಎಂ. ನಾಗರಾಜ್ ಮಾತನಾಡಿ, ವಿಜಯೇಂದ್ರ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಆದರೆ, ಅವರನ್ನು ಕಾಲೆಳೆಯುವ ಕೆಲಸ ಬಿಜೆಪಿಯಲ್ಲೇ ನಡೆಯುತ್ತಿದೆ. ಈ ಸಂಸ್ಕೃತಿ ಒಳ್ಳೆಯದಲ್ಲ, ಸಮುದಾಯಕ್ಕೆ ಶೋಭೆ ತರುವುದಿಲ್ಲ. ಯಡಿಯೂರಪ್ಪ ಮತ್ತು ಅವರ ಕುಟುಂಬವನ್ನು ಕಡೆಗಣಿಸಿದರೆ ಬಿಜೆಪಿಗೆ ಹಿಂದಿನ ಸ್ಥಿತಿ ಬರಲಿದೆ. ಇದನ್ನು ಪಕ್ಷ ನೆನಪಿನಲ್ಲಿಟ್ಟು ಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ರಾಜ್ಯದಲ್ಲಿ ವೀರಶೈವ ಲಿಂಗಾಯತ ಶೇ. 80 ರಷ್ಟು ಜನ ಯಡಿಯೂರಪ್ಪ ಹಾಗೂ ವಿಜಯೇಂದ್ರ ಪರವಾಗಿದ್ದಾರೆ. ಇದು, ಪಕ್ಷದ ವರಿಷ್ಟರಿಗೂ ಗೊತ್ತಿದೆ. ಆದರೂ ಕಾಲೆಳೆಯುವ ಕೆಲಸ ನಡೆಯುತ್ತಿದೆ. ವಿರೋಧಿಗಳಿಗೆ ಯಡಿಯೂರಪ್ಪ ಮತ್ತು ಅವರ ಕುಟುಂಬದ ಶಕ್ತಿ ತೋರಿಸಲು ಈ ಮಹಾ ಸಂಗಮ ಸಮಾವೇಶ ನಡೆಸಲಾಗುತ್ತಿದೆ ಎಂದರು.ಮಾಜಿ ಶಾಸಕ ಡಿ.ಎಸ್. ಸುರೇಶ್ ಮಾತನಾಡಿ, ಇದು, ವಿಜಯೇಂದ್ರ ಪರವಾಗಿ ನಡೆಯುತ್ತಿರುವ ಸಭೆ. ನಮ್ಮ ಸಮಾಜದ ಮುಖಂಡರಿಗೆ ಅನ್ಯಾಯ ಆಗುತ್ತಿದೆ. ಈ ಸಂದರ್ಭದಲ್ಲಿ ನಾವು ಹೋರಾಟ ಮಾಡಬೇಕು. ಯಡಿಯೂರಪ್ಪ ನಮ್ಮ ನಾಯಕರು, ಅವರು ನಮ್ಮ ಎಲ್ಲಾ ಒಳ ಪಂಗಡಗಳನ್ನು ಒಟ್ಟುಗೂಡಿಸುವ ಕೆಲಸ ಮಾಡಿದವರು. ವಿಜಯೇಂದ್ರ ಅವರು ಮುಂದೆ ಸಿಎಂ ಆಗುವವರೆಗೂ ಹೋರಾಟ ಮಾಡ್ತಿವಿ ಎಂದು ಬೆಂಬಲ ಸೂಚಿಸಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷ ಶಿವಶಂಕರ್ ಮಾತನಾಡಿ, ಯತ್ನಾಳ್ ಅವರಿಗೆ ರಾಷ್ಟ್ರ ನಾಯಕರು ಬೆಂಬಲ ಕೊಡುವುದನ್ನು ಮೊದಲು ನಿಲ್ಲಿಸಬೇಕು. ಇಲ್ಲದೆ ಹೋದರೆ ಅವರು ಬಗ್ಗುವುದಿಲ್ಲ. ಚಿಕ್ಕಮಗಳೂರಿನಿಂದ ದೆಹಲಿ ವರೆಗೆ ಯಡಿಯೂರಪ್ಪರವರ ವಿರೋಧಿಗಳು ಇದ್ದಾರೆ ಎಂದು ಹೇಳಿದರು.ಮಾಜಿ ಸಚಿವ ಬಿ.ಸಿ. ಪಾಟೀಲ್ ಮಾತನಾಡಿ, ನಮ್ಮ ಸಮಾಜಕ್ಕೆ ಅನ್ಯಾಯವಾದಾಗ ನಮ್ಮ ಹಕ್ಕು ಪ್ರತಿಪಾದನೆ ಮಾಡಲು ಆಗುತ್ತಿಲ್ಲ. 2018ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದ್ದೆ. ನಮ್ಮ ಸಮುದಾಯಕ್ಕೆ ಒಳ್ಳೆಯದಾಗಬೇಕು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್‌ನ್ನು ಬಿಟ್ಟು ಬಿಜೆಪಿಗೆ ಬಂದೆ ಎಂದರು.ವಿಜಯೇಂದ್ರರನ್ನು ಮುಂದುವರೆಸಿದರೆ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಭವಿಷ್ಯ ಇದೆ. ಮುಂದಿನ ಚುನಾವಣೆ ವಿಜಯೇಂದ್ರ ಅವರ ನೇತೃತ್ವದಲ್ಲಿ ನಡೆಸಬೇಕು. ಅಧಿಕಾರಕ್ಕೆ ಬರುವುದು ಖಚಿತ ಎಂದರು.
ಮಾಜಿ ಸಚಿವ ರೇಣುಕಾಚಾರ್ಯ ಮಾತನಾಡಿ, ಸಮಾಜ ಒಡೆಯುವ ದುಷ್ಟ ಶಕ್ತಿಗಳಿಗೆ ಉತ್ತರ ಕೊಡುವ ಉದ್ದೇಶದಿಂದ ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ಒಳ ಪಂಗಡಗಳು ಒಂದಾಗಬೇಕು. ಯಡಿಯೂರಪ್ಪ ನಮ್ಮ ಸಮಾಜ ಆಸ್ತಿ ಎಂದರು.ಯಳನಾಡು ಮಠದ ಶ್ರೀ ಜ್ಞಾನಪ್ರಭು ಸಿದ್ದರಾಮ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನಮ್ಮ ಸಮಾಜದ ಯಾವುದೇ ರಾಜಕಾರಣಿ 5 ವರ್ಷ ಮುಖ್ಯಮಂತ್ರಿ ಆಗಿಲ್ಲ. ಪಕ್ಷ ಕಟ್ಟಲು ಯಡಿಯೂರಪ್ಪ ತುಂಬಾ ಶ್ರಮ ಪಟ್ಟಿದ್ದಾರೆ. ಅವರ ಬಗ್ಗೆ ಮಾತನಾಡುವ ಆ ಮನುಷ್ಯ (ಯತ್ನಾಳ್)ಗೆ ಬುದ್ಧಿ ಇಲ್ವಾ ಎಂದು ಹೇಳಿದರು.
ಶಂಕರದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಬೇರುಗಂಡಿ ಮಠದ ಶ್ರೀ ರೇಣುಕಾ ಮಹಾಂತ ಸ್ವಾಮೀಜಿ, ಹುಲಿಕೆರೆ ಶ್ರೀ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮೀಜಿ, ಕೆ. ಬಿದರೆ ಮಠದ ಶ್ರೀ ಪ್ರಭುಕುಮಾರ ಶಿವಾ ಚಾರ್ಯ ಸ್ವಾಮೀಜಿ, ಹುಣಸಘಟ್ಟ ಮಠದ ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ, ನಂದಿಪುರ ಮಠದ ಶ್ರೀ ನಂದೀಶ್ವರ ಶಿವಾಚಾರ್ಯ ಸ್ವಾಮೀಜಿ, ಅಣ್ಣೆಮಠದ ಶ್ರೀ ಮರುಳಸಿದ್ದ ಶಿವಾಚಾರ್ಯ ಸ್ವಾಮೀಜಿ, ಬೀರೂರು ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿದ್ದರು.ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಎಚ್.ಎಂ. ಲೋಕೇಶ್ ಅಧ್ಯಕ್ಷತೆ ವಹಿಸಿದ್ದರು. ಸಮಾಜದ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 8 ಕೆಸಿಕೆಎಂ 1ಚಿಕ್ಕಮಗಳೂರಿನ ಶ್ರೀ ರೇಣುಕಾಚಾರ್ಯ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ವೀರಶೈವ ಲಿಂಗಾಯತ ಮಹಾ ಸಂಗಮ ಕಾರ್ಯಕ್ರಮವನ್ನು ಯಳನಾಡು ಮಠದ ಜ್ಞಾನಪ್ರಭು ಸಿದ್ದರಾಮ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು.