ಕನ್ನಡಪ್ರಭ ವಾರ್ತೆ ಮೈಸೂರು
ದೇಶದಲ್ಲೇ ವಿಶೇಷಚೇತನರಿಗಾಗಿ ಸ್ಥಾಪಿಸಲ್ಪಟ್ಟಿರುವ ಜೆಎಸ್‌ಎಸ್ ವಿಶೇಷಚೇತನರ ಪಾಲಿಟೆಕ್ನಿಕ್ ನಲ್ಲಿ 2025- 26ನೇ ಸಾಲಿಗೆ ವಿವಿಧ ಡಿಪ್ಲೊಮಾ ಕೋರ್ಸುಗಳ ಪ್ರವೇಶಾತಿ ಆರಂಭಿಸಲಾಗಿದ್ದು, ವಿಶೇಷಚೇತನ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಪ್ರಾಂಶುಪಾಲ ಬಿ.ಇಳಂಗೋವನ್ ತಿಳಿಸಿದರು.ನಮ್ಮ ಪಾಲಿಟೆಕ್ನಿಕ್ ನಲ್ಲಿ ಪದವಿ ಮುಗಿಸುವ ವಿದ್ಯಾರ್ಥಿಗಳಿಗೆ ಶೇ.85 ರಷ್ಟು ಉದ್ಯೋಗ ಕೂಡ ದೊರೆಯುತ್ತಿದೆ. ಪ್ರತಿ ವರ್ಷ 25 ಹೆಚ್ಚು ಕಂಪನಿಗಳು ಉದ್ಯೋಗಕ್ಕಾಗಿ ಸಂದರ್ಶನ ನಡೆಸುತ್ತಿವೆ. ಇದರಿಂದಾಗಿ ದೇಶದ ವಿವಿಧ ರಾಜ್ಯಗಳಿಂದ ವಿಶೇಷಚೇತನ ವಿದ್ಯಾರ್ಥಿಗಳು ಆಗಮಿಸಿ ಪ್ರವೇಶ ಪಡೆಯುತ್ತಿದ್ದಾರೆ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅನುದಾನಿತ ಕೋರ್ಸುಗಳಾದ ಆರ್ಕಿಟೆಕ್ಚರ್ ಅಸಿಸ್ಟೆಂಟ್ ಷಿಪ್, ಕಮರ್ಷಿಯಲ್ ಪ್ರಾಕ್ಟೀಸ್, ಕಂಪ್ಯೂಟರ್ ಸೈನ್ಸ್ ಅಂಡ್ ಎಂಜಿನಿಯರಿಂಗ್, ಅನುದಾನ ರಹಿತ ಕೋರ್ಸುಗಳಾದ ಜ್ಯುಯಲರಿ ಡಿಸೈನ್ ಮತ್ತು ಟೆಕ್ನಾಲಜಿ, ಎಲಕ್ಟ್ರಾನಿಕ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್, ಕಂಪ್ಯೂಟರ್ ಅಪ್ಲಿಕೇಷನ್, ಅಪಾರೇಲ್ ಡಿಸೈನ್ ಅಂಡ್ ಫ್ಯಾಬ್ರಿಕೇಷನ್ ಟೆಕ್ನಾಲಜಿ, ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಅಂಡ್ ಎಲೆಕ್ಟ್ರಿಕ್ ವೆಹಿಕಲ್ ಟೆಕ್ನಾಲಜಿ ಕೋರ್ಸುಗಳಿಗೆ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದರು.ರಾಜ್ಯದ ವಿದ್ಯಾರ್ಥಿಗಳಿಗೆ ಶೇ.60 ರಷ್ಟು, ಹೊರ ರಾಜ್ಯಗಳ ಶೇ.40 ರಷ್ಟು ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತಿದೆ. ಲಡಾಕ್ ನಿಂದ ಕನ್ಯಾಕುಮಾರಿವರೆಗೆ ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯುತ್ತಿದ್ದಾರೆ. ಪ್ರಸ್ತುತ 902 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಪ್ರಸಕ್ತ ಸಾಲಿನಲ್ಲಿ 1 ಸಾವಿರ ದಾಟುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.
ಅರ್ಹ ವಿದ್ಯಾರ್ಥಿಗಳಿಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ ವಿದ್ಯಾರ್ಥಿವೇತನದ ದೊರೆಯುತ್ತದೆ. ಪಾಲಿಟೆಕ್ನಿಕ್‌ಯಶಸ್ವಿ ವಿದ್ಯಾರ್ಥಿಗಳಿಗೆ ಉದ್ಯೋಗ ಮತ್ತು ತರಬೇತಿ ಕೇಂದ್ರದ ಮೂಲಕ ಉದ್ಯೋಗಾವಕಾಶವನ್ನು ಕಲ್ಪಿಸಿಕೊಡಲಾಗುತ್ತದೆ. ವಿದ್ಯಾರ್ಥಿ, ವಿದ್ಯಾರ್ಥಿನಿಯರುಗಳಿಗೆ ಪ್ರತ್ಯೇಕ ವಿದ್ಯಾರ್ಥಿನಿಲಯದ ಸೌಲಭ್ಯ ಕಲ್ಪಿಸಲಾಗಿದೆ ಎಂದರು.ವಿಶೇಷತೆ ಏನು?:
ಜೆಎಸ್ಎಸ್ ವಿಶೇಷಚೇತನರ ಪಾಲಿಟೆಕ್ನಿಕ್ ಕಟ್ಟಡವನ್ನು ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಯಂತೆ ವಿಶೇಷಚೇತನರ ಉಪಯೋಗಕ್ಕೆ ಸೂಕ್ತವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಸುಸಜ್ಜಿತ ತರಗತಿ ಕೊಠಡಿಗಳು, ಪ್ರಯೋಗಾಲಯಗಳು, ಆಧುನಿಕ ಉಪಕರಣಗಳನ್ನು ಹೊಂದಿದೆ. ಆರೋಗ್ಯ ಕೇಂದ್ರ, ಬ್ಯಾಂಕ್, ಎಟಿಎಂ, ಉಪಾಹಾರ ಗೃಹ, ಜಿಮ್ ಖಾನ, ಒಳ ಮತ್ತು ಹೊರ ಕ್ರೀಡಾಂಗಣ ಹೊಂದಿರುವ ಜೊತೆಗೆ ಉದ್ಯೋಗ ಮತ್ತು ತರಬೇತಿ ಕೇಂದ್ರದ ಮೂಲಕ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಕ್ಕೆ ಮಾಹಿತಿ ಒದಗಿಸಲಾಗುತ್ತದೆ. ಇದರಿಂದಾಗಿ ಉದ್ಯೋಗ ಮೇಳದಲ್ಲಿ ಅನೇಕರು ಆಯ್ಕೆಯಾಗುತ್ತಿದ್ದಾರೆ. ಹೆಚ್ಚಿನ ಮಾಹಿತಿಗಾಗಿ www.jsspda.org ವೆಬ್ ಸೈಟ್, ಮೊ. 98446 44937 ಸಂಪರ್ಕಿಸಬಹುದು ಎಂದರು.ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ.ಎಸ್.ಜಿ. ಶ್ರೀಕಂಠಸ್ವಾಮಿ, ಆರ್ಕಿಟೆಕ್ಚರ್ ವಿಭಾಗದ ಮುಖ್ಯಸ್ಥೆ ಡಾ.ಎಸ್. ಉಮಾ, ಜ್ಯುವೆಲ್ಲರಿ ವಿಭಾಗದ ಮುಖ್ಯಸ್ಥ ಎನ್.ಎಂ. ಶಿವಕುಮಾರಸ್ವಾಮಿ, ಪ್ಲೇಸ್ ಮೆಂಟ್ ಆಫೀಸರ್ ಕುಶಾಲ್, ವಿವಿಧ ವಿಭಾಗದ ಎಂ.ಬಿ. ರಘು, ಗೀತಾ, ಕೋಮಲಾ, ಡಾ. ಸಂಜನಾ ಮೊದಲಾದವರು ಇದ್ದರು.