ದ.ಕ. ಜಿಲ್ಲೆಗೆ ‘ನ್ಯಾಯ ಮಿತ್ರರ’ ನೇಮಕಕ್ಕೆ ಅರ್ಜಿ ಆಹ್ವಾನ

KannadaprabhaNewsNetwork |  
Published : Sep 25, 2025, 01:03 AM IST
೩೨ | Kannada Prabha

ಸಾರಾಂಶ

ದ.ಕ. ಜಿಲ್ಲೆಯಲ್ಲಿ ‘ನ್ಯಾಯ ಮಿತ್ರ’ (ಪ್ಯಾರಾ ಲೀಗಲ್‌ ವಾಲಂಟಿಯರ್ಸ್‌)ರ ನೇಮಕ ಪ್ರಕ್ರಿಯೆ ನಡೆಸಲಾಗುತ್ತಿದೆ. ಆಸಕ್ತರು ಅರ್ಜಿ ಸಲ್ಲಿಸುವಂತೆ ದ.ಕ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಬುನ್ನಿಸಾ ತಿಳಿಸಿದ್ದಾರೆ.

ಜನರು- ಕಾನೂನು ಸೇವಾ ಪ್ರಾಧಿಕಾರಕ್ಕೆ ಇವರು ಕೊಂಡಿ, ಸೇವಾ ಮನೋಭಾವದವರು ಅರ್ಜಿ ಹಾಕಿ: ಜೈಬುನ್ನೀಸಾ

ಕನ್ನಡಪ್ರಭ ವಾರ್ತೆ ಮಂಗಳೂರು

ಜನಸಾಮಾನ್ಯರು ಹಾಗೂ ಜಿಲ್ಲಾ ಕಾನೂನು ಸೇವಾ ಪಾಧಿಕಾರದ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಾ ಜನರಿಗೆ ಅಗತ್ಯ ಕಾನೂನು ಸೇವೆಗಳನ್ನು ಒದಗಿಸಲು ದ.ಕ. ಜಿಲ್ಲೆಯಲ್ಲಿ ‘ನ್ಯಾಯ ಮಿತ್ರ’ (ಪ್ಯಾರಾ ಲೀಗಲ್‌ ವಾಲಂಟಿಯರ್ಸ್‌)ರ ನೇಮಕ ಪ್ರಕ್ರಿಯೆ ನಡೆಸಲಾಗುತ್ತಿದೆ. ಆಸಕ್ತರು ಅರ್ಜಿ ಸಲ್ಲಿಸುವಂತೆ ದ.ಕ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಬುನ್ನಿಸಾ ತಿಳಿಸಿದ್ದಾರೆ.ನಗರದ ಜಿಲ್ಲಾ ನ್ಯಾಯಾಲಯ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದ.ಕ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧೀನದಲ್ಲಿ 50ರಿಂದ 100 ಮಂದಿ ನ್ಯಾಯ ಮಿತ್ರರು ಹಾಗೂ ತಾಲೂಕು ಮಟ್ಟದ ಕಾನೂನು ಸೇವೆಗಳ ಸಮಿತಿಗೆ 25ರಿಂದ 50 ಮಂದಿ ನ್ಯಾಯ ಮಿತ್ರರನ್ನು ನೇಮಕ ಮಾಡಲಾಗುವುದು. ಅವರ ಸೇವೆ ಒಂದು ವರ್ಷದ ಅವಧಿಗೆ ಮಾತ್ರ ಸೀಮಿತ. ಆಸಕ್ತರು ದ.ಕ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಅ.6ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಮಾಹಿತಿ ನೀಡಿದರು.

ಮಾಹಿತಿದಾರರಾಗಿಯೂ ಕೆಲಸ:

ಈ ನ್ಯಾಯ ಮಿತ್ರರು ಸಮಾಜದಲ್ಲಿ ಜನರೊಂದಿಗೆ ಬೆರೆಯುವುದರಿಂದ ಬಾಲ್ಯವಿವಾಹ, ಬಹಿಷ್ಕಾರ ಪದ್ಧತಿ, ಮಕ್ಕಳ ಅಪಹರಣ, ದೌರ್ಜನ್ಯ ಪ್ರಕರಣಗಳು ಸೇರಿದಂತೆ ವಿವಿಧ ಪ್ರಕರಣಗಳು ನಡೆದಾಗ ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡಿ ರಕ್ಷಣೆ ಮಾಡಲು ಸಹಾಯವಾಗುತ್ತದೆ. ಜತೆಗೆ ಕಾನೂನು ಸೇವಾ ಪ್ರಾಧಿಕಾರದಿಂದ ನಡೆಯುವ ಸರ್ವೇ ಕಾರ್ಯ, ಲೀಗಲ್‌ ಕ್ಲಿನಿಕ್‌ಗಳಲ್ಲೂ ಕಾರ್ಯ ನಿರ್ವಹಿಸಲು ನಿಯೋಜನೆ ಮಾಡಲಾಗುವುದು ಎಂದು ಜೈಬುನ್ನೀಸಾ ತಿಳಿಸಿದರು.ಸೇವಾ ಮನೋಭಾವ ಇರುವ ಆಸಕ್ತರು ಅರ್ಜಿ ಸಲ್ಲಿಸಲು ಕೋರಲಾಗಿದೆ. ಅವರಿಗೆ ಕೆಲಸ ನೀಡುವ ದಿನಗಳಲ್ಲಿ 750 ರು. (ದಿನವೊಂದಕ್ಕೆ) ಗೌರವಧನ ನೀಡಲಾಗುತ್ತದೆ. ನ್ಯಾಯ ಮಿತ್ರರಾಗಲು 18 ವರ್ಷ ಮೇಲ್ಪಟ್ಟಿರಬೇಕು, ಯಾವುದೇ ಶೈಕ್ಷಣಿಕ ಗಡುವು ಇಲ್ಲ ಎಂದರು.

------------15 ಕಡೆ ಕಾನೂನು ನೆರವು ಕ್ಲಿನಿಕ್‌

ದ.ಕ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಡಿ ವೆನ್‌ಲಾಕ್‌ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ, ಜೈಲು ಸೇರಿದಂತೆ 15 ಕಡೆಗಳಲ್ಲಿ ಕಾನೂನು ನೆರವು ಕ್ಲಿನಿಕ್‌ಗಳನ್ನು ಸ್ಥಾಪಿಸಲಾಗಿದ್ದು, ಅಲ್ಲಿ ವಾರಕ್ಕೊಂದು ದಿನ ವಕೀಲರು ಲಭ್ಯವಿದ್ದು, ಜನರಿಗೆ ಉಚಿತ ಕಾನೂನು ಸಲಹೆ, ಅಗತ್ಯ ಬಿದ್ದರೆ ಕೇಸ್‌ ಹಾಕುವುದು ಇತ್ಯಾದಿಗಳನ್ನು ಉಚಿತವಾಗಿ ಮಾಡುತ್ತಿದ್ದಾರೆ. ಜೈಲಿಗೂ ನಿರಂತರವಾಗಿ ಭೇಟಿ ನೀಡಿ ಅಲ್ಲಿನ ವಿಚಾರಣಾಧೀನ ಕೈದಿಗಳಿಗೂ ಅಗತ್ಯ ಕಾನೂನು ನೆರವು ಒದಗಿಸಲಾಗುತ್ತಿದೆ ಎಂದು ಜೈಬುನ್ನಿಸಾ ತಿಳಿಸಿದರು.

PREV

Recommended Stories

ಪಾಲಿಕೆಗಳ ಚುನಾವಣೆ ಮುಗಿವವರೆಗೆ ಬೆಂಗಳೂರಲ್ಲಿ ಮತಪಟ್ಟಿ ಪರಿಷ್ಕರಣೆ ಮುಂದೂಡಿ : ಕೇಂದ್ರ ಆಯುಕ್ತರಿಗೆ ಪತ್ರ
ಡ್ರಾಪ್‌ ನೆಪದಲ್ಲಿ ಗುತ್ತಿಗೆದಾರನ ದರೋಡೆ ಮಾಡಿದ್ದ ನಾಲ್ವರ ಬಂಧನ