ಜನ ಕೊಟ್ಟ ಅರ್ಜಿಗಳು ಕಚೇರಿಗಳಲ್ಲೇ ಕೊಳೆಯಬಾರದು

KannadaprabhaNewsNetwork |  
Published : Sep 06, 2026, 01:45 AM IST
5ಎಚ್ಎಸ್ಎನ್16 :  | Kannada Prabha

ಸಾರಾಂಶ

ವಿಧಾನಸಭೆಯ ಮಾದರಿಯಲ್ಲಿ ರೂಪಿಸಲಾಗಿರುವ ಪ್ರಜಾಸೇವಾ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ತಮ್ಮ ಸಮಸ್ಯೆಗಳನ್ನು ನೇರವಾಗಿ ಮಂಡಿಸಲು ಅವಕಾಶ ಕಲ್ಪಿಸಲಾಗಿದೆ. ಅರ್ಜಿಗಳನ್ನು ಕ್ರಮಬದ್ಧವಾಗಿ ಸ್ವೀಕರಿಸಿ ಪ್ರತಿಯೊಂದಕ್ಕೂ ಸಂಖ್ಯೆ ನೀಡಲಾಗುತ್ತಿದ್ದು, ಅರ್ಜಿಯ ವಿಲೇವಾರಿ ಸ್ಥಿತಿಯನ್ನು ಪರಿಶೀಲಿಸಲು ಇದರಿಂದ ಅನುಕೂಲವಾಗಲಿದೆ ಎಂದರು. ಯಾವುದೇ ಶಿಫಾರಸು ಅಥವಾ ಪ್ರಭಾವಕ್ಕೆ ಆದ್ಯತೆ ನೀಡುವುದಿಲ್ಲ. ಅರ್ಜಿ ಸಲ್ಲಿಸಿದ ಕ್ರಮದ ಆಧಾರದ ಮೇಲೆ ಆದ್ಯತೆ ನೀಡಲಾಗುವುದು. ಜನರು ನೂಕುನುಗ್ಗಲು ಮಾಡದೆ ವ್ಯವಸ್ಥೆಗೆ ಸಹಕರಿಸಬೇಕು ಎಂದು ಸಚಿವರು ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಹಾಸನ

ಜನರು ತಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂಬ ನಂಬಿಕೆಯಿಂದ ಸರ್ಕಾರದ ಬಾಗಿಲಿಗೆ ಬರುತ್ತಾರೆ. ಅವರ ಅರ್ಜಿಗಳು ಕಚೇರಿಗಳಲ್ಲಿ ವರ್ಷಗಟ್ಟಲೆ ಕಡತಗಳಾಗಿ ಉಳಿಯಬಾರದು. ಪ್ರಜಾಸೇವಾ ಕಾರ್ಯಕ್ರಮದಲ್ಲಿ ಸ್ವೀಕರಿಸುವ ಅರ್ಜಿಗಳನ್ನು ಪರಿಶೀಲಿಸಿ 15 ದಿನಗಳೊಳಗೆ ವಿಲೇವಾರಿ ಮಾಡಬೇಕು. ವಿಳಂಬ ಅಥವಾ ನಿರ್ಲಕ್ಷ್ಯ ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಖಡಕ್ ಎಚ್ಚರಿಕೆ ನೀಡಿದರು.

ನಗರದಲ್ಲಿ ಶನಿವಾರ ನಡೆದ ಪ್ರಜಾಸೇವಾ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ ಮಾತನಾಡಿದ ಅವರು, ಸರ್ಕಾರದ ಯೋಜನೆಗಳು ಮತ್ತು ಆಡಳಿತ ವ್ಯವಸ್ಥೆಯ ಅಂತಿಮ ಉದ್ದೇಶ ಜನರಿಗೆ ತ್ವರಿತ ಸೇವೆ ಒದಗಿಸುವುದಾಗಿರಬೇಕು. ಅಧಿಕಾರಿಗಳು ಜನರನ್ನು ಕಚೇರಿಯಿಂದ ಕಚೇರಿಗೆ ಅಲೆದಾಡಿಸುವ ಬದಲು ಸಮಸ್ಯೆಯ ಮೂಲವನ್ನು ಗುರುತಿಸಿ ಪರಿಹಾರ ನೀಡಬೇಕು ಎಂದು ಸೂಚಿಸಿದರು.

ಅಧಿಕಾರಿಗಳ ಮುಂದೆಯೇ ಜನರ ಅಹವಾಲು ವಿಧಾನಸಭೆಯ ಮಾದರಿಯಲ್ಲಿ ರೂಪಿಸಲಾಗಿರುವ ಪ್ರಜಾಸೇವಾ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ತಮ್ಮ ಸಮಸ್ಯೆಗಳನ್ನು ನೇರವಾಗಿ ಮಂಡಿಸಲು ಅವಕಾಶ ಕಲ್ಪಿಸಲಾಗಿದೆ. ಅರ್ಜಿಗಳನ್ನು ಕ್ರಮಬದ್ಧವಾಗಿ ಸ್ವೀಕರಿಸಿ ಪ್ರತಿಯೊಂದಕ್ಕೂ ಸಂಖ್ಯೆ ನೀಡಲಾಗುತ್ತಿದ್ದು, ಅರ್ಜಿಯ ವಿಲೇವಾರಿ ಸ್ಥಿತಿಯನ್ನು ಪರಿಶೀಲಿಸಲು ಇದರಿಂದ ಅನುಕೂಲವಾಗಲಿದೆ ಎಂದರು.ಯಾವುದೇ ಶಿಫಾರಸು ಅಥವಾ ಪ್ರಭಾವಕ್ಕೆ ಆದ್ಯತೆ ನೀಡುವುದಿಲ್ಲ. ಅರ್ಜಿ ಸಲ್ಲಿಸಿದ ಕ್ರಮದ ಆಧಾರದ ಮೇಲೆ ಆದ್ಯತೆ ನೀಡಲಾಗುವುದು. ಜನರು ನೂಕುನುಗ್ಗಲು ಮಾಡದೆ ವ್ಯವಸ್ಥೆಗೆ ಸಹಕರಿಸಬೇಕು ಎಂದು ಸಚಿವರು ಮನವಿ ಮಾಡಿದರು.ಪೋಡಿ ಪ್ರಕರಣದಲ್ಲಿ ಅಧಿಕಾರಿಗಳಿಗೆ ತರಾಟೆಪ್ರಜಾಸೇವಾ ಕಾರ್ಯಕ್ರಮದಲ್ಲಿ ಹನುಮಂತಪುರ ಗ್ರಾಮದ ಸರ್ವೇ ನಂಬರ್ 69ರ ಜಮೀನಿಗೆ ಸಂಬಂಧಿಸಿದ ಪೋಡಿ ದುರಸ್ತಿ ಅರ್ಜಿಯ ವಿಚಾರಣೆ ಸಚಿವರ ಗಮನ ಸೆಳೆಯಿತು.ಅರ್ಜಿದಾರರು ಹಲವು ವರ್ಷಗಳಿಂದ ಜಮೀನಿನ ಸ್ವಾಧೀನದಲ್ಲಿದ್ದು, ಮಂಜೂರು ಪತ್ರ ಸೇರಿದಂತೆ ದಾಖಲೆಗಳನ್ನು ಹೊಂದಿದ್ದರೂ ಪ್ರಕರಣ ವಿಲೇವಾರಿಗೆ ವಿಳಂಬವಾಗಿರುವುದನ್ನು ತಿಳಿದ ಸಚಿವರು ಅಧಿಕಾರಿಗಳ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದರು.“ದಾಖಲೆಗಳಿವೆ, ವ್ಯಕ್ತಿ ಜಮೀನಿನ ಸ್ವಾಧೀನದಲ್ಲಿದ್ದಾರೆ. ಕಡತ ಇಲ್ಲ ಎಂಬ ಕಾರಣಕ್ಕೆ ಜನರನ್ನು ವರ್ಷಗಟ್ಟಲೆ ಕಾಯಿಸುವುದು ಸರಿಯಲ್ಲ. ಜನರ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಸಿದರು.ಈ ಪ್ರಕರಣವನ್ನು 15 ದಿನಗಳೊಳಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಂಡು ಅರ್ಜಿದಾರರಿಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ನಿಗದಿತ ಅವಧಿಯಲ್ಲೂ ಸಮಸ್ಯೆ ಬಗೆಹರಿಯದಿದ್ದರೆ ಮತ್ತೊಮ್ಮೆ ಪರಿಶೀಲನಾ ಸಭೆ ನಡೆಸಿ, ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಸರ್ಕಾರಕ್ಕೆ ಕ್ರಮಕ್ಕೆ ಶಿಫಾರಸು ಮಾಡುವುದಾಗಿ ಹೇಳಿದರು.‘ಪ್ರಜಾಸೇವಾ’ ಕೇವಲ ಅಹವಾಲು ಸ್ವೀಕಾರದ ವೇದಿಕೆಯಾಗಬಾರದುರೈತರು ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಪ್ರಜಾಸೇವಾ ಕಾರ್ಯಕ್ರಮ ರೂಪಿಸಲಾಗಿದೆ. ಇಲ್ಲಿ ಅರ್ಜಿ ಸ್ವೀಕರಿಸುವುದಷ್ಟೇ ಮುಖ್ಯವಲ್ಲ; ಅದರ ಅಂತಿಮ ಫಲಿತಾಂಶ ಅರ್ಜಿದಾರರಿಗೆ ತಲುಪುವುದೇ ಕಾರ್ಯಕ್ರಮದ ಯಶಸ್ಸಿನ ಮಾನದಂಡವಾಗಬೇಕು ಎಂದು ಸಚಿವರು ಹೇಳಿದರು.ಸಮಸ್ಯೆಯ ಸ್ವರೂಪವನ್ನು ಪರಿಶೀಲಿಸಿ ಸ್ಥಳದಲ್ಲೇ ಪರಿಹರಿಸಬಹುದಾದ ಅರ್ಜಿಗಳನ್ನು ತಕ್ಷಣ ವಿಲೇವಾರಿ ಮಾಡಬೇಕು. ಹೆಚ್ಚಿನ ಪರಿಶೀಲನೆ ಅಗತ್ಯವಿರುವ ಪ್ರಕರಣಗಳಿಗೆ ಕಾಲಮಿತಿ ನಿಗದಿಪಡಿಸಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.

ಕಾರ್ಯಕ್ರಮದಲ್ಲಿ ಸಂಸದ ಶ್ರೇಯಸ್ ಎಂ. ಪಟೇಲ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ರಂಜೀತ್ ಕುಮಾರ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಂ ಶುಕ್ಲಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ, ಡಿಸಿಎಫ್ ಸೌರಭ್ ಕುಮಾರ್, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಶಾಸಕ ಸಿಮೆಂಟ್ ಮಂಜು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

========

*ಬಾಕ್ಸ್‌:: ಮೊದಲು ಬಂದ ಅರ್ಜಿಗೆ ಮೊದಲ ಆದ್ಯತೆಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಮೈಕ್ ಮೂಲಕ ಸಭೆಯಲ್ಲಿ ವಿವರಿಸಲು ಅವಕಾಶ ನೀಡಲಾಗಿತ್ತು. ಸಂಬಂಧಪಟ್ಟ ಅಧಿಕಾರಿಗಳು ಸ್ಥಳದಲ್ಲೇ ಉತ್ತರ ನೀಡುವ ವ್ಯವಸ್ಥೆ ಮಾಡಲಾಗಿತ್ತು. ಅರ್ಜಿಗಳ ವಿಲೇವಾರಿಯಲ್ಲಿ ಯಾವುದೇ ರಾಜಕೀಯ ಶಿಫಾರಸು ಅಥವಾ ಪ್ರಭಾವಕ್ಕೆ ಮನ್ನಣೆ ಇರುವುದಿಲ್ಲ. ಅರ್ಜಿಯ ಕ್ರಮಾಂಕದ ಆಧಾರದ ಮೇಲೆ ಆದ್ಯತೆ ನೀಡಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು. ಪ್ರಜಾಸೇವೆ ಪ್ರಾರಂಭದ ವೇಳೆ ರೈತ ಸಂಘದ ಮೂರ್ತಿ ಕಣಗಾಲ್ ಇತರರು ‌ನಮ್ಮನ್ನು ಸಚಿವರ ಬಳಿ ನಮ್ಮನ್ನು ಬಿಡುವಂತೆ ಬ್ಯಾರಿಕೇಡ್ ತಳ್ಳಲು ಬಂದಾಗ ಜಿಲ್ಲಾ ಉಸ್ತುವಾರಿ ಸಚಿವರು ಕೆಂಡಮಂಡಲವಾಗಿ ಎಲ್ಲರೂ ಟೋಕನ್ ಪಡೆದಿರುವಂತೆ ಟೋಕನ್‌ ತೆಗೆದುಕೊಂಡು ಬರಲು ಸೂಚಿಸಿದರು. ನಂತರ ರೈತರು ತಣ್ಣಗಾದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಕರ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ
ದೇಶದ ಪ್ರಗತಿಯಲ್ಲಿ ಶಿಕ್ಷಕರ ಸಹಕಾರ ಅತ್ಯಗತ್ಯ