ರಾಮನಗರ: ಏಕಾಗ್ರತೆ ಮತ್ತು ಮನಃಪರಿವರ್ತನೆಯಂತಹ ಕಾರ್ಯಕ್ರಮಗಳ ಕಾರಾಗೃಹದಲ್ಲಿರುವ ಕೈದಿಗಳು ಕಹಿ ಘಟನೆ ಮರೆತು ಹೊಸ ಜೀವನ ನಡೆಸಲು ಅನುಕೂಲವಾಗಲಿದೆ ಎಂದು ಜಿಲ್ಲಾ ಕಾರಾಗೃಹ ಅಧೀಕ್ಷಕ ರಾಕೇಶ್ ಕಾಂಬಳೆ ಹೇಳಿದರು.
ನಗರದ ಕಾರಾಗೃಹದಲ್ಲಿ ಆಯೋಜಿಸಿದ್ದ ಹಾಸ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂತಹ ಹಾಸ್ಯ ಕಾರ್ಯಕ್ರಮಗಳು ಬಂಧಿಗಳ ಮನಸ್ಸಿನಲ್ಲಿರುವ ಎಲ್ಲ ನೋವುಗಳನ್ನು ಮರೆಸಿ ಸಂತೋಷದಿಂದ ಇರಲು ಸಾಧ್ಯಗೊಳಿಸುತ್ತದೆ.ಮನುಷ್ಯ ಮಾನಸಿಕವಾಗಿ ಸದೃಢವಾಗಿರಲು ಜೀವನದಲ್ಲಿ ಹಾಸ್ಯವೂ ಇರಬೇಕು. ಹಾಸ್ಯ ಇಲ್ಲದಿದ್ದರೆ ಜೀವನದಲ್ಲಿ ಸ್ವರಾಸ್ಯ ಇರುವುದಿಲ್ಲ. ಹಾಸ್ಯಗಳಲ್ಲಿ ನೀತಿ ಪಾಠವೂ ಅಡಗಿರುತ್ತದೆ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪರಿವರ್ತನೆ ಹೊಂದಬೇಕು ಎಂದು ತಿಳಿಸಿದರು.
ವರ್ಷ, ತಿಂಗಳಿಂದ ಕಾರಾಗೃಹದಲ್ಲಿರುವ ಬಂಧು ಮಿತ್ರರ ಮಾನಸಿಕ ನೆಮ್ಮದಿ, ದೈಹಿಕ ಆರೋಗ್ಯ ಕಾಪಾಡಬೇಕು. ಅವರ ಮನ ಪರಿವರ್ತನೆ ಮಾಡಬೇಕು ಎಂಬ ಉದ್ದೇಶದಿಂದ ಕಾರಾಗೃಹದಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.ಮಾನಸಿಕ ಆರೋಗ್ಯ ಕಾಪಾಡಲು ಮನಸ್ಸು ಶಾಂತವಾಗಿ ಇರಬೇಕು. ಆಗ ಮಾತ್ರ ಮನಸ್ಸು ಹಿಡಿತದಲ್ಲಿರುತ್ತದೆ. ಮನಸ್ಸನ್ನು 5 -10 ನಿಮಿಷಕ್ಕೆ ಕೆಡಿಸಿಕೊಂಡಿರುವ ಕಾರಣದಿಂದಲೇ ಕಾರಾಗೃಹದಲ್ಲಿ ಇರುವಂತಹ ಸನ್ನಿವೇಶ ಎದುರಿಸುವಂತಾಗಿದೆ. ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡು ವಿವೇಚನ ಮಾಡಿದ್ದರೆ ನೀವ್ಯಾರು ಕಾರಾಗೃಹದಲ್ಲಿ ಇರುತ್ತಿರಲಿಲ್ಲ ಎಂದರು.
ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕು. ಇದಕ್ಕಾಗಿ ಪುಸ್ತಕಗಳನ್ನು ಓದಬೇಕು, ಹಾಸ್ಯ ಕಾರ್ಯಕ್ರಮಗಳನ್ನು ಕೇಳಬೇಕು. ಆ ಮೂಲಕ ಮನಸ್ಸನ್ನು ಒಳ್ಳೆಯ ಮಾರ್ಗದತ್ತ ಕೊಂಡೊಯ್ಯಬೇಕು. ಆಗ ಮಾತ್ರ ಮನಸ್ಸಿನಲ್ಲಿರುವ ಕೆಟ್ಟ ಆಲೋಚನೆಗಳು ದೂರವಾಗುತ್ತವೆ ಎಂದು ತಿಳಿಸಿದರು.ನೀವ್ಯಾರು ಅಪರಾಧ ಮಾಡುವ ಉದ್ದೇಶದಿಂದ ಅಪರಾಧ ಎಸಗಿಲ್ಲ. ಮಹಾತ್ಮ ಗಾಂಧಿರವರು ಹೇಳಿದಂತೆ ಅಪರಾಧವನ್ನು ದ್ವೇಷಿಸಬೇಕೇ ಹೊರತು ಅಪರಾಧಿಯನ್ನಲ್ಲ. ಮನಸ್ಸಿನಲ್ಲಿರುವ ಅಪರಾಧ ಮನಸ್ಸು ಹೋಗಲಾಡಿಸಬೇಕು. ಕಾರಾಗೃಹದಲ್ಲಿ ಒಳ್ಳೆಯ ಮನಸ್ಸಿನಿಂದ ಇದ್ದು, ಆದಷ್ಟು ಬೇಗ ಸುಧಾರಣೆಗೊಂಡು ಮನೆಯವರೊಂದಿಗೆ ಸೇರಿಕೊಳ್ಳುವುದರ ಜೊತೆಗೆ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬಾಳಬೇಕು ಎಂದು ರಾಕೇಶ್ ಕಾಂಬಳೆ ಕಿವಿಮಾತು ಹೇಳಿದರು.
ಜೂನಿಯರ್ ಪ್ರಾಣೇಶ್ ಖ್ಯಾತಿಯ ಬೆಮೆಲ್ ಕಂಪಲಪ್ಪರವರು ಹೇಳಿದ ಹಾಸ್ಯ ಪ್ರಸಂಗಗಳು ಬಂಧಿಗಳ ಮುಖದಲ್ಲಿ ನಗು ತರಿಸಿತು. ಜೈಲರ್ ಇಮಾಮ್ ಕಾಸಿಂ ಉಪಸ್ಥಿತರಿದ್ದರು.(ಫೋಟೊ ಸಣ್ಣದಾಗೇ ಬಳಸಿ)4ಕೆಆರ್ ಎಂಎನ್ 11.ಜೆಪಿಜಿ
ರಾಮನಗರದ ಕಾರಾಗೃಹದಲ್ಲಿ ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟ ಜೂನಿಯರ್ ಪ್ರಾಣೇಶ್ ಖ್ಯಾತಿಯ ಬೆಮೆಲ್ ಕಂಪಲಪ್ಪ ಅವರನ್ನು ಜಿಲ್ಲಾ ಕಾರಾಗೃಹ ಅಧೀಕ್ಷಕ ರಾಕೇಶ್ ಕಾಂಬಳೆ ಸನ್ಮಾನಿಸಿದರು. ಜೈಲರ್ ಇಮಾಮ್ ಕಾಸಿಂ ಇತರರಿದ್ದರು.