ಪತ್ರಕರ್ತರ ಸಮ್ಮೇಳನಕ್ಕೆ ಸಮ್ಮೇಳನಾಧ್ಯಕ್ಷರನ್ನು ನೇಮಿಸಿ

KannadaprabhaNewsNetwork | Published : Jan 20, 2025 1:33 AM

ಸಾರಾಂಶ

ಅಖಿಲ ಭಾರತ ಸಾಹಿತ್ಯ ಸಮ್ಮೇಳನದಂತೆ ಪತ್ರಕರ್ತರ ಸಮ್ಮೇಳನಕ್ಕೆ ಸರ್ವಾಧ್ಯಕ್ಷರನ್ನು ಆಯ್ಕೆ ಮಾಡಬೇಕೆಂದು ಹಿರಿಯ ಪತ್ರಕರ್ತ ರವೀಂದ್ರ ಭಟ್ ಐನಕೈ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ತುಮಕೂರು

ಅಖಿಲ ಭಾರತ ಸಾಹಿತ್ಯ ಸಮ್ಮೇಳನದಂತೆ ಪತ್ರಕರ್ತರ ಸಮ್ಮೇಳನಕ್ಕೆ ಸರ್ವಾಧ್ಯಕ್ಷರನ್ನು ಆಯ್ಕೆ ಮಾಡಬೇಕೆಂದು ಹಿರಿಯ ಪತ್ರಕರ್ತ ರವೀಂದ್ರ ಭಟ್ ಐನಕೈ ಅಭಿಪ್ರಾಯಪಟ್ಟರು.

ತುಮಕೂರಿನಲ್ಲಿ ನಡೆಯುತ್ತಿರುವ 39ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಆಯೋಜಿಸಿದ್ದ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.

ಪತ್ರಕರ್ತರ ರಾಜ್ಯ ಸಮ್ಮೇಳನ ರಾಷ್ಟ್ರೀಯ ಸಮ್ಮೇಳನವಾಗಿ ಪರಿವರ್ತನೆಯಾಗಬೇಕೆಂದು ಸಲಹೆ ನೀಡಿದರು. ನೋಡುಗರಿಂದ, ಓದುಗರಿಂದ ಪತ್ರಿಕೆಗಳು ದೂರದಲ್ಲಿವೆ. ರಾಜಕಾರಣಿಗಳು, ಸಿನಿಮಾರಂಗದವರನ್ನು ಬಿಟ್ಟು ಜನ ಸಾಮಾನ್ಯರ ಬಳಿ ಪತ್ರಿಕೆಗಳು ಹೋಗಬೇಕಿದೆ. ಆಗ ಓದುಗರ ಸಂಖ್ಯೆ ಹೆಚ್ಚುತ್ತದೆ ಎಂದರು.

ಗೋಷ್ಠಿ ಉದ್ಘಾಟಿಸಿ ಮಾತನಾಡಿದ ಹಿರಿಯ ಪತ್ರಕರ್ತ.ಎನ್‌ ಚೆನ್ನೆಗೌಡ, ಪತ್ರಿಕೋದ್ಯಮದಲ್ಲಿ ಓದುಗರ ಕೊರತೆ ಇದೆ, ಸೋಷಿಯಲ್ ಮೀಡಿಯಾ ಅಬ್ಬರ ಹೆಚ್ಚಿದೆ. ಅದರಲ್ಲೂ ಹಲವು ಸವಾಲುಗಳನ್ನು ಎದುರಿಸಿ ಪತ್ರಿಕೆಗಳು ನಡೆಯುತ್ತಿವೆ ಎಂದರು.

ಓದುಗರನ್ನು ಜಾಗೃತಿಗೊಳಿಸುವುದು ಸಂಪಾದಕರ ಜವಾಬ್ದಾರಿ. ಓದುಗರಲ್ಲಿ ಸುದ್ದಿಯ ಕುತೂಹಲ ಕೆರಳಿಸಬೇಕು ಎಂದರು.

ಹಿರಿಯ ಪತ್ರಕರ್ತ ಅನಂತ್‌ ಚಿನಿವಾರ್‌ ಮಾತನಾಡಿ, ತುಮಕೂರಿನ ಸಮ್ಮೇಳನ ಆತ್ಮ ವಿಮರ್ಶೆ ಮಾಡಿಕೊಳ್ಳುವ ವಿಚಾರ ಗೋಷ್ಠಿಯಾಗಿದೆ, ಮಾಧ್ಯಮ ಓದುಗರನ್ನು, ಕೇಳುಗರನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಅವರ ಪ್ರತಿಕ್ರಿಯೆಯನ್ನು ಪರಿಗಣಿಸಬೇಕು. ಅವರ ಪ್ರಶ್ನೆ, ಅಹವಾಲುಗಳನ್ನು ಸ್ವೀಕರಿಸಬೇಕು, ಪತ್ರಿಕೆಯು ಓದುಗರನ್ನು ಜಾಣ- ಜಾಣೆಯರನ್ನಾಗಿಸಬೇಕು ಎಂದರು.

ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಎಂ. ಎಸ್. ಸ್ವಪ್ನ ಅವರು ಮಾತನಾಡಿ, ಇಂಡಿಯನ್‌ ರೀಡರ್ಸ್ ಶಿಫ್ ಸರ್ವೇಯಲ್ಲಿ 54 ರಷ್ಟು ಜನ ನ್ಯೂಸ್ ಪೇಪರ್ ಗಳನ್ನು ಓದುತಿಲ್ಲ. 14 ರಷ್ಟು ಜನ ಮಾತ್ರ ಪತ್ರಿಕೆಗಳನ್ನು ಓದುತ್ತಿದ್ದಾರೆ ಎಂದರು.

ವಿಚಾರ ಗೋಷ್ಠಿಯಲ್ಲಿ ಉಗಮ ಶ್ರೀನಿವಾಸ್ ಮತ್ತು ಕುಚ್ಚಂಗಿ ಪ್ರಸನ್ನ, ತುಮಕೂರು ವಿವಿ ಸಿಬಂತಿ ಪದ್ಮನಾಬ್‌ ಅವರು ಪ್ರತಿಕ್ರಿಯಿಸಿದರು. ಮರಿಯಪ್ಪ, ಶಿವನಂದ ತಗಡೂರು, ಚಿ.ನಿ.ಪುರುಷೋತ್ತಮ್, ಟಿ.ಇ.ರಘುರಾಮ್‌ ಇದ್ದರು.

Share this article