ಮಾರಿಕೊಪ್ಪ ದೇಗುಲಕ್ಕೆ ಕೃಷ್ಣಪ್ಪರನ್ನು ಮತ್ತೆ ನೇಮಿಸಿ: ಪರಮೇಶ್ವರಪ್ಪ

KannadaprabhaNewsNetwork |  
Published : Oct 12, 2025, 01:00 AM IST
ಹೊನ್ನಾಳಿ ಫೋಟೋ 10ಎಚ್.ಎಲ್.ಐ2. ಮಾರಿಕೊಪ್ಪ ದೇವಸ್ಥಾನದ ಅಡಳಿತಾಧಿಕಾರಿ ಕೃಷ್ಣಪ್ಪ ಅವರನ್ನು ಪುನಃ ನೇಮಕ ಮಾಡಬೇಕು ಎಂದು ಅಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.    | Kannada Prabha

ಸಾರಾಂಶ

ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ತಾಲೂಕಿನ ಮಾರಿಕೊಪ್ಪ ದೇವಸ್ಥಾನದ ಅಡಳಿತಾಧಿಕಾರಿಯನ್ನಾಗಿ ದಲಿತ ವರ್ಗದ ಕೃಷ್ಣಪ್ಪ ಅವರನ್ನು ಕೂಡಲೇ ಪುನಃ ನೇಮಕ ಮಾಡಬೇಕು ಎಂದು ಅಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಘಟಕದ ವತಿಯಿಂದ ಒತ್ತಾಯಿಸಲಾಯಿತು.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ತಾಲೂಕಿನ ಮಾರಿಕೊಪ್ಪ ದೇವಸ್ಥಾನದ ಅಡಳಿತಾಧಿಕಾರಿಯನ್ನಾಗಿ ದಲಿತ ವರ್ಗದ ಕೃಷ್ಣಪ್ಪ ಅವರನ್ನು ಕೂಡಲೇ ಪುನಃ ನೇಮಕ ಮಾಡಬೇಕು ಎಂದು ಅಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಘಟಕದ ವತಿಯಿಂದ ಒತ್ತಾಯಿಸಲಾಯಿತು.

ಈ ಕುರಿತು ಗುರುವಾರ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಘಟಕದ ಸಂಚಾಲಕ ಬೆನಕನಹಳ್ಳಿ ಎ.ಕೆ.ಪರಮೇಶ್ವರಪ್ಪ ಮಾತನಾಡಿ, ಕೃಷ್ಣಪ್ಪ ಅವರು ಮುಜರಾಯಿ ಇಲಾಖೆಯಲ್ಲಿ ಅತ್ಯುತ್ತಮ, ದಕ್ಷ, ಪ್ರಮಾಣಿಕ ಅಡಳಿತಾಧಿಕಾರಿಯಾಗಿದ್ದು, ಇವರು ನೇಮಕವಾದ ನಂತರ ಅಲ್ಲಿನ ಭ್ರಷ್ಟರಿಗೆ ಸಿಂಹಸ್ವಪ್ನವಾಗಿದ್ದರು, ದೇವಸ್ಥಾನದಲ್ಲಿನ ಭ್ರಷ್ಟಾಚಾರವನ್ನು ನಿಯಂತ್ರಿಸಿ, ಸುಧಾರಣೆ ಕಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರು ಎಂದು ಹೇಳಿದರು.

ದೇವಸ್ಥಾನದಲ್ಲಿನ ಪ್ರಸಾದ ಕೌಂಟರ್, ಅಮ್ಮನ ಕಾಣಿಕೆ ಲೆಕ್ಕ, ದೇವಸ್ಥಾನದ ಹಂಡಿ ಹಣ ಎಣಿಕೆ ಮಾಡುವಾಗ ಸಿ.ಸಿ.ಕ್ಯಾಮೆರಾ ಅಳವಡಿಕೆ ಹೀಗೆ ಹತ್ತಾರು ರೀತಿಯಲ್ಲಿ ಉತ್ತಮ ಆಡಳಿತಕ್ಕಾಗಿ ಕ್ರಮ ಕೈಗೊಂಡಿದ್ದರು ಎಂದು ಹೇಳಿದರು.

ದೇವಸ್ಥಾನ ರಥೋತ್ಸವಕ್ಕೆ ಸಾರ್ವಜನಿಕರಿಂದ ಹಣ ಸಂಗ್ರಹಣೆ ಮಾಡಿದ ವಿಷಯನ್ನು ಗ್ರಾಮಸ್ಥರು ಅಡಳಿತಾಧಿಕಾರಿ ಕೃಷ್ಣಪ್ಪ ಅವರ ಗಮನಕ್ಕೆ ತಂದಾಗ ಹಣ ಸಂಗ್ರಹಿಸಲು ಯಾರ ಪೂರ್ವಾನುಮತಿ ಪಡೆದುಕೊಂಡಿದ್ದೀರಿ ಎಂದು ಪ್ರಶ್ನೆ ಮಾಡಿದಾಗ ಭ್ರಷ್ಟರಿಗೆ ಭಯ ಪ್ರಾರಂಭವಾಗಿದ್ದು, ಇವರು ಮಾರಿಕೊಪ್ಪ ದೇವಸ್ಥಾನಕ್ಕೆ ಅಡಳಿತಾಧಿಕಾರಿಯಾಗಿ ಬಂದ ಮೇಲೆ ಇಲ್ಲಿನ ಸಿಬ್ಬಂದಿಗೆ ಬಾಕಿ ವೇತನ ಬಿಡುಗಡೆ ಮಾಡಿಸಿ ಸಿಬ್ಬಂದಿ ಬ್ಯಾಂಕ್ ಖಾತೆಗಳಿಗೆ ಹಣ ಪಾವತಿಯಾಗುವಂತೆ ಕ್ರಮಕೈಗೊಂಡಿದ್ದರು. ಇದನ್ನು ಸಹಿಸದ ಕೆಲವಾರು ಜನ ಭ್ರಷ್ಟರು ಕುತಂತ್ರದಿಂದ ಕೃಷ್ಣಪ್ಪ ಅವರನ್ನು ದೇವಸ್ಥಾನದ ಅಡಳಿತಾಧಿಕಾರಿ ಹುದ್ದೆಯಿಂದ ಬಿಡುಗಡೆ ಮಾಡಿಸಿದ್ದಾರೆ ಎಂದು ಆರೋಪಿಸಿದರು.

ಮಾದಿಗ ಸಮುದಾಯವರು ಅಧಿಕಾರಿಗಳಾಗವುದೇ ತಪ್ಪಾ ಎಂದು ಪ್ರಶ್ನಿಸಿದ ಅವರು, ಕೂಡಲೇ ಜಿಲ್ಲಾಡಳಿತ ಕೃಷ್ಣಪ್ಪ ಅವರನ್ನು ದೇವಸ್ಥಾನದ ಅಡಳಿತಾಧಿಕಾರಿಯನ್ನಾಗಿ ಪುನಃ ನಿಯೋಜನೆ ಮಾಡಬೇಕು, ಇಲ್ಲವಾದಲ್ಲಿ ದಲಿತ ಸಮುದಾಯದ ವತಿಯಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸಿಜೆಐ ಮೇಲೆ ಶೂ ಎಸೆತ ಖಂಡನೀಯ:

ಇತ್ತೀಚೆಗೆ ಭಾರತದ ಸಿಜೆಐ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸತ ಘಟನೆ ಅತ್ಯಂತ ದುರಾದೃಷ್ಟಕರ ಸಂಗತಿಯಾಗಿದ್ದು ,ಇದನ್ನು ಕೂಡ ಕರ್ನಾಟಕ ದಲಿತ ಸಂಘರ್ಷ ಸಮಿತಿ ತೀವ್ರವಾಗಿ ಖಂಡಿಸುತ್ತದೆ. ಸಂಬಂಧಪಟ್ಟ ವ್ಯಕ್ತಿಯ ಮೇಲೆ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯ ನಂತರ ತಹಸೀಲ್ದಾರ್ ರಾಜೇಶ್ ಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ದಲಿತ ಸಂಘರ್ಷ ಸಮಿತಿಯ ಎಚ್.ಚಂದ್ರಶೇಖರ್ ಬಿ.ಮಂಜಪ್ಪ, ಆಶೋಕ, ಬಿ.ಎಚ್.ಹನುಂತಪ್ಪ, ರಾಜಪ್ಪ, ಆರ್. ಕೃಷ್ಣಮೂರ್ತಿ, ಹಾಲೇಶ ಮುಂತಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!