ಶಾಲಾ-ಕಾಲೇಜುಗಳಿಗೆ ಸಂಗೀತ ಶಿಕ್ಷಕರ ನೇಮಿಸಿ

KannadaprabhaNewsNetwork |  
Published : Jan 23, 2026, 01:30 AM IST
22ಕೆಡಿವಿಜಿ2-ದಾವಣಗೆರೆಯಲ್ಲಿ ಗುರುವಾರ ಅಖಿಲ ಕರ್ನಾಟಕ ಶ್ರೀ ಗುರು ಕುಮಾರೇಶ್ವರ ಅಂಧರ ಸಂಗೀತ ಕಲಾವಿದರ ಸಂಘದ ಅಧ್ಯಕ್ಷ, ವೀರೇಶ್ವರ ಪುಣ್ಯಾಶ್ರಮದ ವಿದ್ಯಾರ್ಥಿ ಶ್ರೀಶೈಲ, ಪ್ರಧಾನ ಕಾರ್ಯದರ್ಶಿ ಮಂಜುನಾಥ ಸ್ವಾಮಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ರಾಜ್ಯದ ಪ್ರಾಥಮಿಕ, ಪ್ರೌಢಶಾಲೆ, ಅನುದಾನಿತ ಖಾಸಗಿ ಶಾಲೆ, ಅನುದಾನಿತ ಪದವಿಪೂರ್ವ ಕಾಲೇಜು, ಪದವಿ ಕಾಲೇಜುಗಳಲ್ಲಿ ಸಂಗೀತ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಕೈಗೊಳ್ಳುವಂತೆ ಅಖಿಲ ಕರ್ನಾಟಕ ಶ್ರೀ ಗುರು ಕುಮಾರೇಶ್ವರ ಅಂಧರ ಸಂಗೀತ ಕಲಾವಿದರ ಸಂಘದ ಅಧ್ಯಕ್ಷ ಶ್ರೀಶೈಲ, ಪ್ರಧಾನ ಕಾರ್ಯದರ್ಶಿ ಮಂಜುನಾಥ ಸ್ವಾಮಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

- ಅಖಿಲ ಕರ್ನಾಟಕ ಶ್ರೀ ಗುರು ಕುಮಾರೇಶ್ವರ ಅಂಧರ ಸಂಗೀತ ಕಲಾವಿದರ ಸಂಘ ಒತ್ತಾಯ

- ನೀಡು ಶಿವ, ನೀಡದಿರು ಶಿವ, ಬಾಗುವುದು ಎನ್ನ ಕಾಯ ಎಂದು ಹಾಡಿ ಸರ್ಕಾರಕ್ಕೆ ಮನವಿ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯದ ಪ್ರಾಥಮಿಕ, ಪ್ರೌಢಶಾಲೆ, ಅನುದಾನಿತ ಖಾಸಗಿ ಶಾಲೆ, ಅನುದಾನಿತ ಪದವಿಪೂರ್ವ ಕಾಲೇಜು, ಪದವಿ ಕಾಲೇಜುಗಳಲ್ಲಿ ಸಂಗೀತ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಕೈಗೊಳ್ಳುವಂತೆ ಅಖಿಲ ಕರ್ನಾಟಕ ಶ್ರೀ ಗುರು ಕುಮಾರೇಶ್ವರ ಅಂಧರ ಸಂಗೀತ ಕಲಾವಿದರ ಸಂಘದ ಅಧ್ಯಕ್ಷ ಶ್ರೀಶೈಲ, ಪ್ರಧಾನ ಕಾರ್ಯದರ್ಶಿ ಮಂಜುನಾಥ ಸ್ವಾಮಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಒಂದೂವರೆ ವರ್ಷದಿಂದಲೂ ಸರ್ಕಾರಿ, ಅನುದಾನಿತ ಶಾಲಾ- ಕಾಲೇಜುಗಳಲ್ಲಿ ಖಾಲಿ ಇರುವ 2 ಸಾವಿರಕ್ಕೂ ಅಧಿಕ ಸಂಗೀತ ಶಿಕ್ಷಕರ ಹುದ್ದೆಗಳನ್ನು ರಾಜ್ಯ ಸರ್ಕಾರ ಭರ್ತಿ ಮಾಡಿಕೊಂಡಿಲ್ಲ. ಇದರಿಂದಾಗಿ ಅರ್ಹತೆ, ಯೋಗ್ಯತೆ, ವಿದ್ಯೆ ಇದ್ದರೂ ಸಹ ಸಾವಿರಾರು ಅಂಧ ಪದವೀಧರರು ಉದ್ಯೋಗ ವಂಚಿತರಾಗುವ ಸ್ಥಿತಿ ನಿರ್ಮಾಣವಾಗಿದೆ ಎಂದರು.

ಸಾವಿರಾರು ನಿರುದ್ಯೋಗಿ ಅಂಧರು:

ವಿಶೇಷ ಸಂಗೀತ ಪರೀಕ್ಷೆಯಲ್ಲಿ ಸೀನಿಯರ್ ಗ್ರೇಡ್‌, ವಿದ್ವತ್, ವಿಶಾರದ, ಸಂಗೀತ ಅಲಂಕಾರ, ವಿಶ್ವ ವಿದ್ಯಾನಿಲಯಗಳು ನಡೆಸುವ ಬಿಎ ಮ್ಯೂಸಿಕ್‌, ಎಂಎ ಮ್ಯೂಸಿಕ್‌ ಹೀಗೆ ಹಲವಾರು ಪದವಿಗಳನ್ನು ಪಡೆಡು, ಸರ್ಕಾರಿ ಅಥವಾ ಖಾಗಿ ಶಾಲೆಗಳಲ್ಲಿ ಕೆಲಸವಿಲ್ಲದೇ ಸಾವಿರಾರು ನಿರುದ್ಯೋಗಿ ಅಂಧರು ಅ‍ವಕಾಶ ಇಲ್ಲದೇ ಕಾಲ ಕಳೆಯುವಂತಾಗಿದೆ. ಈಗಾಗಲೇ ಅನೇಕರ ವಯೋಮಿತಿ ಸಹ ಮೀರುತ್ತಿದೆ. 2009-10ರಲ್ಲಿ ಸಂಗೀತ ಶಿಕ್ಷಕರ ನೇಮಕಾತಿ ನಡೆದಿದ್ದನ್ನು ಹೊರತುಪಡಿಸಿದರೆ, ಇದುವರೆಗೆ ನೇಮಕಾತಿ ಆಗಿಲ್ಲ ಎಂದು ಅವರು ದೂರಿದರು.

ಸಾವಿರಾರು ಹುದ್ದೆ ಇಂದಿಗೂ ಖಾಲಿ:

ಸಮಾಜ ಕಲ್ಯಾಣ ಇಲಾಖೆಯಿಂದ 2011ರಲ್ಲಿ ನೇಮಕಾತಿ ಪ್ರಕ್ರಿಯೆ ಆಗಿತ್ತು. ಆನಂತರ ಇದುವರೆಗೆ 15 ವರ್ಷದಲ್ಲಿ ಯಾವುದೇ ಸಂಗೀತ ಶಿಕ್ಷಕರ ನೇಮಕಾತಿ ಆಗಿಲ್ಲ. ಶಿಕ್ಷಣ ಇಲಾಖೆಯಲ್ಲಿ ಪ್ರಾಥಮಿಕ, ಪ್ರೌಢಶಾಲೆಗಳು, ಸಮಾಜ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ, ಕುವೆಂಪು ಶತಮಾನ ಮಾದರಿ ಶಾಲೆ, ಆದರ್ಶ ವಿದ್ಯಾಲಯ, ಕರ್ನಾಟಕ ಪಬ್ಲಿಕ್ ಶಾಲೆ (ಆಂಗ್ಲ ಮಾಧ್ಯಮ) ಶಾಲೆಗಳಲ್ಲಿ ಸಾವಿರಾರು ಹುದ್ದೆಗಳು ಇಂದಿಗೂ ಖಾಲಿ ಇವೆ ಎಂದು ತಿಳಿಸಿದರು.

ಶೀಘ್ರ ಸಂಗೀತ ಶಿಕ್ಷಕರನ್ನು ನೇಮಿಸಿ:

ರಾಜ್ಯದ ಎಲ್ಲ ಪ್ರಾಥಮಿಕ, ಪ್ರೌಢಶಾಲೆ, ಅನುದಾನಿತ ಶಾಲೆಗಳು, ಪಿಯು ಕಾಲೇಜು, ಪದವಿ ಕಾಲೇಜುಗಳಲ್ಲಿ ಸಂಗೀತ ಶಿಕ್ಷಕರ ನೇಮಕ ಮಾಡಬೇಕು. ಸಮಾಜ ಕಲ್ಯಾಣ ಇಲಾಖೆ ಅಧೀನದ ಎಲ್ಲಾ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಸಂಗೀತ ಶಿಕ್ಷಕರ ನೇಮಕ ಮಾಡಬೇಕು. ಸರ್ಕಾರಿ ಪಿಯು ಕಾಲೇಜು, ಪ್ರಥಮ ದರ್ಜೆ ಕಾಲೇಜು, ಎಲ್ಲ ಸರ್ಕಾರಿ ಪದವಿ ಕಾಲೇಜು, ಪ್ರತಿಯೊಂದು ವಿವಿಯಲ್ಲೂ ಸಂಗೀತ ಕ್ಷೇತ್ರ ಪರಿಚಯಿಸಬೇಕು. ಸಂಬಂಧಿಸಿದ ಹುದ್ದೆಗಳು ಸರ್ಕಾರದ ಮೂಲಕ ಪ್ರತಿ ವಿದ್ಯಾಕೇಂದ್ರ, ಸಂಸ್ಥೆಗಳಲ್ಲಿ ನಡೆಯಬೇಕು. ಪರಿಶಿಷ್ಟ ಪಂಗಡದ ಕಲ್ಯಾಣ ಇಲಾಖೆ ನಡೆಸುವ ಆಶ್ರಮ ಶಾಲೆಗಳು, ಪ್ರತಿ ವಸತಿ ಶಾಲೆಗಳಲ್ಲೂ ಸಂಗೀತ ಶಿಕ್ಷಕರನ್ನು ನೇಮಿಸಬೇಕು ಎಂದು ಮನವಿ ಮಾಡಿದರು.

ದಾವಣಗೆರೆ, ಗದಗಿನ ವೀರೇಶ್ವರ ಪುಣ್ಯಾಶ್ರಮ ಸೇರಿದಂತೆ ಸುಮಾರು 3 ಸಾವಿರಕ್ಕೂ ಅಂಧರು ಸಂಗೀತ ಶಿಕ್ಷಕರಾಗುವ ಎಲ್ಲ ಅರ್ಹತೆ, ಅವಕಾಶ ಹೊಂದಿದ್ದೇವೆ. ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಜಿಲ್ಲಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನರಿಗೂ ಮನವಿ ಸಲ್ಲಿಸಿ, ಬೇಗನೆ ಸಂಗೀತ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಕೈಗೊಳ್ಳುವಂತೆ ಒತ್ತಾಯಿಸಿದ್ದೇವೆ ಎಂದ ವಿಶೇಷಚೇತನರು ಸುದ್ದಿಗೋಷ್ಠಿ ಕೊನೆಯಲ್ಲಿ ನೀಡು ಶಿವ ನೀಡದಿರೂ ಶಿವ ಹಾಡನ್ನು ಹಾಡುವ ಮೂಲಕ ಸರ್ಕಾರಕ್ಕೆ ಬೇಡಿಕೆ ಈಡೇರಿಸಲು ಮನವಿ ಮಾಡಿದರು.

ವೀರೇಶ್ವರ ಪುಣ್ಯಾಶ್ರಮದ ವಿದ್ಯಾರ್ಥಿಗಳಾದ ಯಲಗೂರೇಶ, ಗಣೇಶ, ಮಹಾಂತೇಶ, ಶೇಖರ, ಪ್ರಭುಶಂಕರ ಇತರರು ಇದ್ದರು.

- - -

(ಬಾಕ್ಸ್‌) * ಸರ್ಕಾರ ಕರುಣೆಯ ಕಣ್ಣು ತೆರೆಯಲಿ ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ಅಂಗಸಂಸ್ಥೆಗಳಾದ ಬಾಲಕರ ಬಾಲ ಮಂದಿರ, ಬಾಲಕಿಯರ ಬಾಲ ಮಂದಿರಗಳಲ್ಲಿ ಸಂಗೀತ ಶಿಕ್ಷಣ ನೀಡಬೇಕು. ಸರ್ಕಾರದ ಎಲ್ಲ ವಸತಿ ಶಾಲೆಗಳಲ್ಲಿ ಸಂಗೀತ ಬೋಧನೆ ಕಡ್ಡಾಯಗೊಳಿಸಬೇಕು. ಈಗಾಗಲೇ ಶಿಕ್ಷಣ, ಸಮಾಜ ಕಲ್ಯಾಣ ಸಚಿವರಿಗೂ ಮನವಿ ಮಾಡಿದ್ದೇವೆ. ಸರ್ಕಾರ ನಮ್ಮ ಬಗ್ಗೆ ಕರುಣೆಯ ಕಣ್ಣನ್ನು ತೆರೆಯುತ್ತಿಲ್ಲ. ಬಜೆಟ್ ಇಲ್ಲವೆಂದು ವಾಪಸ್‌ ಕಳಿಸುತ್ತಿದ್ದಾರೆ. ಸರ್ಕಾರಿ, ರಾಜಕೀಯ ಪಕ್ಷಗಳ ಕಾರ್ಯಕ್ರಮದ ಉದ್ಘಾಟನೆ ವೇಳೆ ಸಂಗೀತ, ವಚನ, ಪ್ರಾರ್ಥನೆಗೆ ನಮಗೆ ಆಹ್ವಾನಿಸುತ್ತಾರೆ. ಆದರೆ, ಸಂಗೀತ ಶಿಕ್ಷಕರ ಹುದ್ದೆ ಭರ್ತಿಗೆ ಸರ್ಕಾರ ಮುಂದಾಗುತ್ತಿಲ್ಲ ಎಂದು ಅಳಲು ತೋಡಿಕೊಂಡರು.

- - -

-22ಕೆಡಿವಿಜಿ2:

ದಾವಣಗೆರೆಯಲ್ಲಿ ಗುರುವಾರ ಅಖಿಲ ಕರ್ನಾಟಕ ಶ್ರೀ ಗುರು ಕುಮಾರೇಶ್ವರ ಅಂಧರ ಸಂಗೀತ ಕಲಾವಿದರ ಸಂಘದ ಅಧ್ಯಕ್ಷ, ವೀರೇಶ್ವರ ಪುಣ್ಯಾಶ್ರಮದ ವಿದ್ಯಾರ್ಥಿ ಶ್ರೀಶೈಲ, ಪ್ರಧಾನ ಕಾರ್ಯದರ್ಶಿ ಮಂಜುನಾಥ ಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

10 ಪ್ಯಾರಾದಲ್ಲಿ ಕೇಂದ್ರ ವಿರುದ್ಧ ಟೀಕಾ ಪ್ರಹಾರ
ಬೇಡಿಕೆಗೆ ತಕ್ಕಷ್ಟು ಬರುತ್ತಿಲ್ಲ ಮೈಸೂರು ರೇಷ್ಮೆ ಸೀರೆ