೨೦ ಸಾವಿರ ಶಿಕ್ಷಕರ ನೇಮಕ ಶೀಘ್ರ-ಸಚಿವ ಎಸ್.ಮಧು ಬಂಗಾರಪ್ಪ

KannadaprabhaNewsNetwork |  
Published : Oct 22, 2023, 01:00 AM IST
10ಕೆಕೆಆರ್1:ಕುಕನೂರು ತಾಲೂಕಿನ ಮಸಬಹಂಚಿನಾಳ ಗ್ರಾಮದಲ್ಲಿ ಶಾಲಾ ಶಿಕ್ಷಣ ಇಲಾಖೆ ಆಯೋಜಿಸಿದ್ದ ನೂತನ ಸರ್ಕಾರಿ ಪದವಿ ಪೂರ್ವ ಕಾಲೇಜು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಎಸ್.ಮಧು ಬಂಗಾರಪ್ಪ ಅವರು ಶನಿವಾರ ಉದ್ಘಾಟಿಸಿದರು.  | Kannada Prabha

ಸಾರಾಂಶ

ಮುಂಬರುವ ವರ್ಷದಲ್ಲಿ ೨೦ ಸಾವಿರ ನೂತನ ಶಿಕ್ಷಕರ ನೇಮಕ ಮಾಡಿಕೊಳ್ಳುವ ಉದ್ದೇಶ ಹೊಂದಿದ್ದು, ಸಿಎಂ ಸಿದ್ದರಾಮಯ್ಯ ಜತೆ ಶೀಘ್ರದಲ್ಲೇ ಚರ್ಚೆ ನಡೆಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.

ಕುಕನೂರ: ಮುಂಬರುವ ವರ್ಷದಲ್ಲಿ ೨೦ ಸಾವಿರ ನೂತನ ಶಿಕ್ಷಕರ ನೇಮಕ ಮಾಡಿಕೊಳ್ಳುವ ಉದ್ದೇಶ ಹೊಂದಿದ್ದು, ಸಿಎಂ ಸಿದ್ದರಾಮಯ್ಯ ಜತೆ ಶೀಘ್ರದಲ್ಲೇ ಚರ್ಚೆ ನಡೆಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.ತಾಲೂಕಿನ ಮಸಬಹಂಚಿನಾಳದಲ್ಲಿ ಶಾಲಾ ಶಿಕ್ಷಣ ಇಲಾಖೆ ಆಯೋಜಿಸಿದ್ದ ನೂತನ ಸರ್ಕಾರಿ ಪದವಿ ಪೂರ್ವ ಕಾಲೇಜು ಉದ್ಘಾಟಿಸಿ ಶನಿವಾರ ಮಾತನಾಡಿದ ಅವರು, ಶಿಕ್ಷಣ ಇಲಾಖೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಇವುಗಳನ್ನು ನಿಭಾಯಿಸಲು ಡಿಸಿಎಂ ಡಿ.ಕೆ. ಶಿವಕುಮಾರ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೆವಾಲಾ ನನಗೆ ಈ ಇಲಾಖೆ ನೀಡಿದರು. ನನ್ನ ತಂದೆ ಬಂಗಾರಪ್ಪ ಅವರ ಆಡಳಿತದಲ್ಲಿ ಯಲಬುರ್ಗಾ ಕ್ಷೇತ್ರದಲ್ಲಿ ೫೫ ಎಕರೆಯಲ್ಲಿ ರಾಯರಡ್ಡಿ ನೇತೃತ್ವದಲ್ಲಿ ಆಶ್ರಯ ಮನೆ ಮಂಜೂರುಗೊಂಡಿದ್ದವು. ಕಳೆದ ೩೩ ವರ್ಷಗಳಿಂದ ನಮ್ಮ ತಂದೆಯ ಆಡಳಿತ ಅವಧಿಯಲ್ಲಿ ರೈತರಿಗೆ ಉಚಿತ ವಿದ್ಯುತ್ ನೀಡಿ, ಹಲವು ಜನಪರ ಯೋಜನೆ ಜಾರಿಗೊಳಿಸಿದ್ದರು. ಸಿಎಂ ಸಿದ್ದರಾಮಯ್ಯ ಕೂಡ ಚುನಾವಣೆ ಪೂರ್ವದಲ್ಲಿ ಜನತೆಗೆ ನೀಡಿದ ಭರವಸೆಯಂತೆ ಗ್ಯಾರಂಟಿ ಯೋಜನೆ ಜಾರಿಗೊಳಿಸಿದ್ದಾರೆ. ಇನ್ನು ೪೦ ಸಾವಿರ ಶಿಕ್ಷಕರ ಕೊರತೆ ಇದ್ದು, ಸದ್ಯ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಬರುವ ವರ್ಷದಲ್ಲಿಯೇ ೨೦ ಸಾವಿರ ಶಿಕ್ಷಕರ ನೇಮಕ ಪ್ರಕ್ರಿಯೆ ನಡೆಸಲಾಗುವುದು. ಮುಂದಿನ ೩ ವರ್ಷದಲ್ಲಿ ೩ ಸಾವಿರ ಕೆಪಿಎಸ್ ಶಾಲೆ ಪ್ರಾರಂಭಿಸುತ್ತೇವೆ. ಕೆಪಿಎಸ್ ಶಾಲೆಗೆ ಉಚಿತ ಬಸ್ ಸೇವೆ ಕೂಡ ಪ್ರಾರಂಭಿಸಲಾಗುತ್ತಿದೆ ಎಂದರು.ಶಾಸಕ ಬಸವರಾಜ ರಾಯರಡ್ಡಿ ನಮ್ಮ ತಂದೆ ಜತೆ ಸಾಕಷ್ಟು ಸಂಬಂಧ ಹೊಂದಿದ್ದರು. ಇಂದಿಗೂ ನಮ್ಮ ತಂದೆಯನ್ನು ಗುರುಗಳು ಎಂದು ಕರೆಯುತ್ತಾರೆ. ನಾನು ಚಿಕ್ಕವನಾಗಿದ್ದಾಗ ಹಂಪಿಗೆ ಬಂದಾಗ ಕಾರ್‌ನಲ್ಲಿ ರಾಯರಡ್ಡಿ ತೊಡೆ ಮೇಲೆ ಕುಳಿತುಕೊಳ್ಳುತ್ತಿದೆ. ಈಗ ಕುಳಿತುಕೊಳ್ಳಲು ಆಗುವುದಿಲ್ಲ ಎಂದು ನೆನಪುಗಳನ್ನು ಮೆಲುಕು ಹಾಕಿದರು. ರಾಯರಡ್ಡಿ ವೇಗವಾಗಿ ಕೆಲಸ ಮಾಡಿಸಿಕೊಂಡು ಕಾಲೇಜು, ಪ್ರೌಢಶಾಲೆ ಮಂಜೂರು ಮಾಡಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಯಾವ ಶಾಸಕರು ಸಹ ಇಷ್ಟು ಒತ್ತಡ ಹಾಕಿ ಕೆಲಸ ತೆಗೆದುಕೊಂಡಿಲ್ಲ. ಮಹತ್ವದ ಕಾರ್ಯ ಇದ್ದರೂ ಅವುಗಳನ್ನು ಬದಿಗೊತ್ತಿ ರಾಯರಡ್ಡಿ ಅವರಿಗೆ ಸಮಯ ನೀಡಿದ್ದೇನೆ ಎಂದರು.ಶಾಸಕ ಬಸವರಾಜ ರಾಯರಡ್ಡಿ ಮಾತನಾಡಿ, ಈ ಹಿಂದೆ ಕೇವಲ ನೆರೆ ಹಾವಳಿ ಇತ್ತು. ಸದ್ಯ ಕ್ಷೇತ್ರದಲ್ಲಿ ಅಭಿವೃದ್ಧಿಯ ಸುನಾಮಿ ಎದ್ದಿದೆ. ಸಿಎಂ ಸಿದ್ದರಾಮಯ್ಯ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಜನಪ್ರಿಯ ಮುಖ್ಯಮಂತ್ರಿಯಾಗಿದ್ದಾರೆ. ಮಾಜಿ ಸಿಎಂ ಬಂಗಾರಪ್ಪ ನನ್ನ ಗುರುಗಳು. ಕೇಂದ್ರದಲ್ಲಿ ವಾಜಪೇಯಿ, ಐ.ಕೆ. ಗುಜ್ರಾಲ್, ರಾಜ್ಯದಲ್ಲಿ ರಾಮಕೃಷ್ಣ ಹೆಗಡೆ, ಜೆ.ಎಚ್. ಪಟೇಲ ಒಳ್ಳೆಯ ಕೆಲಸ ಮಾಡಿದ್ದಾರೆ. ಮಧು ಬಂಗಾರಪ್ಪ ನನ್ನ ತೊಡೆಯ ಮೇಲೆ ಕುಳಿತುಕೊಳ್ಳುತ್ತಿದ್ದರು. ಶಿಕ್ಷಣ ಇಲಾಖೆಯ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದರು.ರಾಜಕಾರಣ ಎಂದರೆ ಜಾತಿ, ಹಣದ ಮೇಲೆ ಅಧಿಕಾರ ನಡೆದಿದೆ. ಚಿಲ್ಲರೆ ರಾಜಕಾರಣ ಮಾಡುವುದಿಲ್ಲ. ವಿರೋಧ ಪಕ್ಷದವರ ಗ್ರಾಮದಲ್ಲಿಯೇ ಅಭಿವೃದ್ಧಿ ಕಾರ್ಯ ಆರಂಭಿಸಿದ್ದೇವೆ ಎಂದರು.ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕ ಜಗದೀಶ ಜಿ.ಎಚ್., ತಹಸೀಲ್ದಾರ್ ಎಚ್.ಪ್ರಾಣೇಶ, ಡಿಡಿಪಿಐ ಶ್ರೀಶೈಲ ಬಿರಾದಾರ, ತಾಪಂ ಇಒ ಸಂತೋಷ ಬಿರಾದಾರ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಬಸವರಾಜ ಅಂಗಡಿ, ಮಾಜಿ ಜಿಪಂ ಸದಸ್ಯರಾದ ಯಂಕಣ್ಣ ಯರಾಶಿ, ಹನುಮಂತಗೌಡ ಪಾಟೀಲ್, ಪ್ರಮುಖರಾದ ಬಸವರಾಜ ಉಳ್ಳಾಗಡ್ಡಿ, ರಾಘವೇಂದ್ರಾಚಾರ ಜೋಶಿ, ಸತ್ಯನಾರಾಯಣಪ್ಪ ಹರಪನಹಳ್ಳಿ, ಕಾಶೀಮಸಾಬ್ ತಳಕಲ್ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ದ್ವೇಷ ಮಸೂದೆಯಿಂದ ಭಿನ್ನ ದನಿ ದಮನ ಆಗಲ್ಲ ''
3 ವರ್ಷ ಮೊಮ್ಮಗನಿಗೆ ಬಾರಲ್ಲಿ ಹೆಂಡ ಕುಡಿಸಿದ ಅಜ್ಜ: ಆಕ್ರೋಶ