ಕನ್ನಡಪ್ರಭ ವಾರ್ತೆ ಮಂಗಳೂರು
ದ.ಕ. ಜಿಲ್ಲೆಯ ವಿವಿಧ ಆರೋಗ್ಯ ಕೇಂದ್ರಗಳಲ್ಲಿ ಲ್ಯಾಬ್ ಟೆಕ್ನೀಶಿಯನ್ ಕೊರತೆ ಇದ್ದು, ಜಿಲ್ಲಾಡಳಿತದಿಂದ ಸೂಕ್ತ ಕ್ರಮ ಕೈಗೊಂಡು ಮೂರು ತಿಂಗಳ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಬೇಕು ಎಂದು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಸೂಚನೆ ನೀಡಿದರು.ಡೆಂಘೀ ನಿಯಂತ್ರಣದ ಸಲುವಾಗಿ ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು, ಎಂಪಿಡಬ್ಲ್ಯು ಕಾರ್ಯಕರ್ತರ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಡೆಂಘೀ ಪ್ರಕರಣ ಏರಿಕೆ ಸಮಯದಲ್ಲಿ ಪ್ರಯೋಗಾಲಯಗಳ ಮೂಲಕ ತ್ವರಿತವಾಗಿ ವರದಿ ಬರಲು ಲ್ಯಾಬ್ ಟೆಕ್ನೀಶಿಯನ್ ಅಗತ್ಯ ಹೆಚ್ಚಿದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಡೆಂಘೀ ಪ್ರಕರಣ ಔಟ್‌ಬ್ರೇಕ್ ಆಗದಂತೆ ಈಗಿಂದಲೇ ಎಚ್ಚರದಲ್ಲಿರಬೇಕು. ಯಾವುದೇ ಕಾರಣಕ್ಕೂ ಪ್ಲೇಟ್‌ಲೆಟ್, ರಕ್ತದ ಕೊರತೆಯಾಗದಂತೆ ನೋಡಿಕೊಳ್ಳಿ. ಡೆಂಘೀ, ಎಚ್1ಎನ್1 ಸಹಿತ ಸಾಂಕ್ರಾಮಿಕ ರೋಗಗಳ ಚಿಕಿತ್ಸೆಗೆ ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳ ಚಿಕಿತ್ಸೆಗೆ ವಿಳಂಬವಾಗದಂತೆ ಜಾಗ್ರತೆ ವಹಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಸಾರ್ವಜನಿಕರು ಜ್ವರ ಬಂದಾಗ ಗಾಬರಿಯಾಗದೆ, ಸಮೀಪದ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ತಪಾಸಣೆ ಮಾಡಿಸಿಕೊಂಡು ಔಷಧ ಪಡೆಯಬೇಕು ಎಂದರು.ಫಾಗಿಂಗ್‌ಗೆ ಗಮನ ಕೊಡಿ: ಡೆಂಘೀ ಸೊಳ್ಳೆ ನಿಯಂತ್ರಣದ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಫಾಗಿಂಗ್‌ಗೆ ಗಮನ ನೀಡಿ. ನಿಯಮಿತವಾಗಿ ವೇಳಾಪಟ್ಟಿ ತಯಾರಿಸಿ, ಫಾಗಿಂಗ್ ನಡೆಸಿ. ಒಂದು ವೇಳೆ ಫಾಗಿಂಗ್ ಯಂತ್ರ ಅಥವಾ ಅದಕ್ಕೆ ರಾಸಾಯನಿಕ ದ್ರಾವಣ ಬೇಕಾದರೆ ಆರೋಗ್ಯ ಇಲಾಖೆ ಗಮನಕ್ಕೆ ತನ್ನಿ. ಡೆಂಘೀ ಜ್ವರದಿಂದ ಗುಣಮುಖರಾದ ಬಳಿಕವೂ ಅವರನ್ನು ಮೇಲ್ವಿಚಾರಣೆ ಮಾಡಬೇಕು. ಡಿಸೆಂಬರ್‌ವರೆಗೂ ಡೆಂಘೀ ಕಾರ್ಯಾಚರಣೆ ಮುಂದುವರಿಯಲಿ ಎಂದರು.ಜಿಲ್ಲಾಧಿಕಾರಿ ಮುಲ್ಲೈಮುಗಿಲನ್ ಮಾತನಾಡಿ, ಲಾರ್ವಾ ನಾಶದಿಂದಷ್ಟೇ ಡೆಂಘೀ ನಿಯಂತ್ರಣ ಸಾಧ್ಯ. ಅಧಿಕಾರಿಗಳು ಲಾರ್ವಾ ಉತ್ಪತ್ತಿಯಾಗುವ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಜನರಿಗೆ ಜಾಗೃತಿ ಮೂಡಿಸಿ, ನಿಯಮ ಉಲ್ಲಂಘಿಸುವ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಮನೆ ಮನೆ ಭೇಟಿ ನೀಡುವ ಎಂಪಿಡಬ್ಲ್ಯೂ ವರ್ಕರ್ಸ್ಗಳಿಗೆ ಕೆಲವು ತಿಂಗಳು ಇತರೇ ಕೆಲಸ ನೀಡಬೇಡಿ. ಅವರನ್ನು ಕೇವಲ ಡೆಂಘೀ, ಸಾಂಕ್ರಾಮಿಕ ರೋಗ ನಿಯಂತ್ರಣ ಕೆಲಸಕ್ಕೆ ಮಾತ್ರ ನಿಯೋಜಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿ: ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿಗೆ ಕಾರಣವಾಗುವ ತಾಣಗಳ ಬಗ್ಗೆ ಮಾಹಿತಿ ನೀಡಲು ದೂರವಾಣಿ ಸಂಖ್ಯೆ ಪ್ರಕಟಿಸಬೇಕು. ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿ ಈ ರೀತಿ ನೀರು ನಿಲ್ಲುವ ಫೋಟೋ ಕಳುಹಿಸಿದವರಿಗೆ ಪ್ರೋತ್ಸಾಹಕವಾಗಿ ಬಹುಮಾನ ನೀಡುವುದು ಹಾಗೂ ಸೊಳ್ಳೆ ಉತ್ಪತ್ತಿಗೆ ಕಾರಣವಾಗುವವರಿಗೆ ದಂಡ ವಿಧಿಸುವ ಕಾರ್ಯ ಮಾಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 345 ಡೆಂಘೀ ಪ್ರಕರಣ ದಾಖಲಾಗಿದೆ. 23 ಸಕ್ರಿಯ ಪ್ರಕರಣ ಇದ್ದು, ಇಬ್ಬರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ನವೀನ್ ಚಂದ್ರ ಕುಲಾಲ್ ಮಾಹಿತಿ ನೀಡಿದರು.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ನಗರ ಡಿಸಿಪಿ ದಿನೇಶ್ ಕುಮಾರ್ ಇದ್ದರು.ಪ್ಲೇಟ್‌ಲೆಟ್ ದರ ಹೆಚ್ಚೇಕೆ?ಜಿಲ್ಲೆಯಲ್ಲಿ ಪ್ಲೇಟ್ ಸಮಸ್ಯೆ ಇದೆಯೇ? ಎಂದು ಅಧಿಕಾರಿಗಳಲ್ಲಿ ಸ್ಪೀಕರ್ ಯು.ಟಿ. ಖಾದರ್ ಪ್ರಶ್ನಿಸಿದರು.
ಅಧಿಕಾರಿಗಳು ಉತ್ತರಿಸಿ, ವೆನ್ಲಾಕ್ ರಕ್ತನಿಧಿ ಕೇಂದ್ರದಲ್ಲಿ ಅವಶ್ಯಕ ಪ್ಲೇಟ್‌ಲೆಟ್ ಲಭ್ಯವಿದೆ. ವೆನ್ಲಾಕ್ ಆಸ್ಪತ್ರೆಯಲ್ಲಿ ಪ್ಲೇಟ್‌ಲೆಟ್ ವರ್ಗಾವಣೆಗೆ ಬಿಪಿಎಲ್ ಕಾರ್ಡ್‌ದಾರರಿಗೆ ಉಚಿತ ಮತ್ತು ಇತರರಿಗೆ ಒಂದು ಯುನಿಟ್‌ಗೆ 200 ರು. ದರ ವಿಧಿಸಲಾಗುತ್ತದೆ ಮತ್ತು ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಪ್ಲೇಟ್‌ಲೆಚ್ ವರ್ಗಾವಣೆಗೆ ಸುಮಾರು 1,600 ರು.ಗಳನ್ನು ವಿಧಿಸುತ್ತಿದ್ದಾರೆ. ಇದಕ್ಕೆ ಸರ್ಕಾರ ಯಾವುದೇ ಮಿತಿಯನ್ನು ನಿಗದಿಪಡಿಸಿಲ್ಲ ಎಂದು ಮಾಹಿತಿ ನೀಡಿದರು. ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಸ್ಪೀಕರ್ ಖಾದರ್, ಬಿಲ್ ಅಧಿಕವಾಗಿರಬಾರದು. ಈ ಸಮಸ್ಯೆಯನ್ನು ಖಾಸಗಿ ಆಸ್ಪತ್ರೆ ಆಡಳಿತಗಳೊಂದಿಗೆ ಚರ್ಚಿಸಲು ಅಧಿಕಾರಿಗಳಿಗೆ ಸೂಚಿಸಿದರು.