ಬಿಆರ್‌ಎಲ್ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಚಿರಕಾಲ ಉಳಿಯುವ ಆಪ್ತಭಾವದ ಕವಿ

| N/A | Published : Sep 07 2025, 11:22 AM IST

BRL
ಬಿಆರ್‌ಎಲ್ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಚಿರಕಾಲ ಉಳಿಯುವ ಆಪ್ತಭಾವದ ಕವಿ
Share this Article
  • FB
  • TW
  • Linkdin
  • Email

ಸಾರಾಂಶ

ವಿಪುಲ ರೂಪ ಧಾರಿಣಿ’ ಸಂಕಲನಕ್ಕೊಂದು ವಿಶೇಷ ಗುಣವಿದೆ. ಸ್ಥಳೀಯ ಮತ್ತು ವಿಶ್ವಾತ್ಮಕ ನೆಲೆಯಲ್ಲಿ ಪ್ರಸಿದ್ಧರಾಗಿರುವ ಪೌರಾಣಿಕ, ಚಾರಿತ್ರಿಕ ಮತ್ತು ಕಾವ್ಯಲೋಕದ ದೃಗ್ಗೋಚರದರ್ಶಿಯಾದ ವ್ಯಕ್ತಿತ್ವಗಳ ಆತ್ಮವೇ ತಾವಾಗಿ ಕವಿ ಬಿ.ಆರ್. ಲಕ್ಷ್ಮಣರಾಯರು ಇಲ್ಲಿನ ಕವಿತೆಗಳನ್ನು ರಚಿಸಿದ್ದಾರೆ.

- ಡಾ ಎಚ್.ಎಸ್ ಸತ್ಯನಾರಾಯಣ

‘ವಿಪುಲ ರೂಪ ಧಾರಿಣಿ’ ಸಂಕಲನಕ್ಕೊಂದು ವಿಶೇಷ ಗುಣವಿದೆ. ಸ್ಥಳೀಯ ಮತ್ತು ವಿಶ್ವಾತ್ಮಕ ನೆಲೆಯಲ್ಲಿ ಪ್ರಸಿದ್ಧರಾಗಿರುವ ಪೌರಾಣಿಕ, ಚಾರಿತ್ರಿಕ ಮತ್ತು ಕಾವ್ಯಲೋಕದ ದೃಗ್ಗೋಚರದರ್ಶಿಯಾದ ವ್ಯಕ್ತಿತ್ವಗಳ ಆತ್ಮವೇ ತಾವಾಗಿ ಕವಿ ಬಿ.ಆರ್. ಲಕ್ಷ್ಮಣರಾಯರು ಇಲ್ಲಿನ ಕವಿತೆಗಳನ್ನು ರಚಿಸಿದ್ದಾರೆ.

ಈ ಪರಾತ್ಮಪ್ರವೇಶ ಕವಿಯ ಭಿನ್ನ ದಾರಿಯ ಒಳಗೊಳ್ಳುವಿಕೆಯ ಜೊತೆಜೊತೆಯಲ್ಲೇ ವರ್ತಮಾನದ ಸಾಮಾಜಿಕ ಸಂದರ್ಭಗಳನ್ನು ಜಾಗತಿಕ ಹಿನ್ನೆಲೆಯಲ್ಲಿ ಚಿಂತಿಸುವ ಸ್ವರೂಪದ್ದಾಗಿದೆ. ಜಗತ್ಪ್ರಸಿದ್ಧವಾದ ಪಾತ್ರಗಳೊಂದಿಗೆ, ಸುತ್ತಮುತ್ತಣ ಸಾಮಾನ್ಯ ಜೀವಗಳಿಗೂ ಕವಿ ಪ್ರಾಧಾನ್ಯತೆ ಒದಗಿಸುವುದರೊಂದಿಗೆ ಬಹುಮುಖಿ ವ್ಯಕ್ತಿತ್ವಗಳ ಚಲನಶೀಲತೆಯ ಒಳಮುಖಿ ಪ್ರವಾಹವೊಂದು ಈ ಬುವಿಯನ್ನು ಸಮೃದ್ಧವಾಗಿಟ್ಟಿರುವತ್ತ ನಮ್ಮ ಗಮನ ಸೆಳೆಯುತ್ತಾರೆ. ‘ಕಾಲ’ ಮತ್ತು ‘ಮನುಷ್ಯ’ ಕೇಂದ್ರಿತವಾದ ಆಲೋಚನೆಗಳ ವಸ್ತು ನಿರ್ವಹಣೆಯ ಹೊಸ ಬಗೆಯ ಪ್ರಯೋಗಶೀಲತೆಯನ್ನು ನಾವು ಈ ಸಂಕಲನದುದ್ದಕ್ಕೂ ಕಾಣಬಲ್ಲೆವು.

ಐದೂವರೆ ದಶಕಗಳ ಸುದೀರ್ಘ ಕಾವ್ಯಪಯಣದಲ್ಲಿ ಬಿ.ಆರ್. ಲಕ್ಷ್ಮಣರಾಯರ ಸಿದ್ಧಿ, ಲವಲವಿಕೆಯ ಬತ್ತದ ತೊರೆಯಂತಹ ಕಾವ್ಯೋತ್ಸಾಹಗಳನ್ನು ಬಲ್ಲ ಕಾವ್ಯ ರಸಿಕರಿಗೆ ಪರಾತ್ಮಪ್ರವೇಶದ ಇಲ್ಲಿನ ಕವಿತೆಗಳು ಈ ಕವಿಯ ವಿಶೇಷ ಪ್ರಯೋಗಶೀಲತೆಯೊಂದನ್ನು ದರ್ಶಿಸುವಲ್ಲಿ ಸಫಲವಾಗುತ್ತವೆ. ಈ ಬಗೆಯ ಭಿನ್ನ ಸಾಧ್ಯತೆಗಳನ್ನು ಅರಸುತ್ತಲೇ ಪರಂಪರೆಯ ಜೊತೆ ಕ್ರಿಯಾತ್ಮಕ ಸಂಬಂಧವನ್ನು ಸೃಷ್ಟಿಸಿಕೊಂಡು ಅದಮ್ಯ ಜೀವನೋತ್ಸಾಹದಿಂದ ಕಾವ್ಯಕೃಷಿಯಲ್ಲಿ ನಿರತರಾಗಿರುವ ಬಿಆರ್‌ಎಲ್ ಅವರು ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಚಿರಕಾಲ ಉಳಿಯುವ ಆಪ್ತಭಾವದ ಕವಿ. ಕಾವ್ಯದ ದಾರಿಗಳನ್ನು ಹೊಸ ಹೊಸ ಪ್ರಯೋಗಶೀಲತೆಯ ಮೂಲಕ ನವೀಕರಿಸಿಕೊಳ್ಳುತ್ತಾ ಸಾಗುವ ಈ ಹಿರಿಯ ಕವಿಯ ನಡೆ

ಹೊಸ ತಲೆಮಾರಿನ ಕವಿಗಳೆಲ್ಲರಿಗೂ ಮಾರ್ಗದರ್ಶಕವೂ ಮಾದರಿಯೂ ಆಗಬಲ್ಲದು.

Read more Articles on