ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಬಸವೇಶ್ವರ ಸಭಾಂಗಣದಲ್ಲಿ ಗುರುವಾರ ಸಂಜೆ ಭಾವಪರವಶ ತುಂಬಿದ ಮೌನಪ್ರದಾನ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಇತ್ತೀಚೆಗೆ ಅಗಲಿದ ಹಿರಿಯ ಕವಿ, ಸಾಹಿತಿ, ನಾಟಕಕಾರರೂ ಆದ ಡಚ್.ಎಸ್.ವೆಂಕಟೇಶಮೂರ್ತಿಯವರಿಗೆ ನುಡಿನಮನವನ್ನು ಅವರು ರಚಿಸಿರುವ ಭಾವಗೀತೆಗಳ ಮೂಲಕ ಸಲ್ಲಿಸಲಾಯಿತು.ಶ್ರೀ ಮುರುಘಾಮಠ, ದುರ್ಗದ ಸಿರಿ ಕಲಾ ಸಂಘ, ಹಂಸಜ್ಯೋತಿ ಟ್ರಸ್ಟ್ ಬೆಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಿತ್ರದುರ್ಗ ಇವರ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಚ್.ಎಸ್.ವಿ ಅವರ ಗೀತೆಗಳನ್ನು ಆರಂಭಿಸುವುದಕ್ಕೂ ಮೊದಲು ಖ್ಯಾತ ಹಿಂದೂಸ್ತಾನಿ ಗಾಯಕಿ ಸಂಗೀತಾ ಕಟ್ಟಿ ಅವರು ಅಲ್ಲಮಪ್ರಭುಗಳ ಭೂಮಿ ನಿನ್ನದಲ್ಲ, ಹೇಮ ನಿನ್ನದಲ್ಲ ಅವು ಜಗಕಿಕ್ಕಿದ ಮಾಯೆ ಎನ್ನುವ ವಚನದೊಂದಿಗೆ ಗಾಯನ ಆರಂಭಿಸಿದರು.
ನಂತರದಲ್ಲಿ ಮುಕ್ತ ಧಾರವಾಹಿಯ ಮುಕ್ತ ಮುಕ್ತ ಶೀರ್ಷಿಕೆ ಗೀತೆಯನ್ನು ಹಾಡುವ ಮೂಲಕ ಪ್ರೇಕ್ಷಕರನ್ನು ಸೆಳೆದರು. ಅವರು ಹಾಡಿದ ಬೃಂದಾವನದಲಿ ಒಂದಿರುಳು, ಲೋಕದ ಕಣ್ಣಿಗೆ ರಾಧೆಯೂ ಕೂಡ ಎಲ್ಲರಂತೆ ಒಂದು ಹೆಣ್ಣು, ರೆಕ್ಕೆ ಇದ್ದರೆ ಸಾಕೆ? ಹಕ್ಕಿಗೆ ಬೇಕು ಭಾನು, ನಾಯಿ ತಲೆಮೇಲಿನ ಬುತ್ತಿ, ತೂಗುಮಂಚದಲ್ಲಿ ಮೇಘ ಶಾಮ, ಇಷ್ಟುಕಾಲ ಒಟ್ಟಿಗೆ ಇದ್ದು ಎಷ್ಟು ಬೆರೆತರು ಗೀತೆಗಳು ಪ್ರೇಕ್ಷಕರ ಮನಮಿಡಿದವು.ಸಂಗೀತ ಸಮಾರಾಧನೆಯ ಜತೆಗೆ ಹಾಡಿನ ಮಧ್ಯೆ ಎಚ್‌ಎಸ್‌ವಿ ಅವರೊಂದಿಗಿನ ಒಡನಾಟ ರಸನಿಮಿಷಗಳನ್ನು ಅವರ ಆಪ್ತವಲಯದ ಗೆಳೆಯರು ಮೆಲುಕು ಹಾಕಿದರು.
ದಾವಣಗೆರೆಯ ಡಾ.ಆನಂದ ಋಗ್ವೇದಿ ಮಾತನಾಡಿ, ಎಚ್.ಎಸ್.ವಿ ಕೇವಲ ಕವನ ಬರೆಯಲಿಲ್ಲ. ನಾಟಕ, ಭಾವಗೀತೆ ಸೇರಿದಂತೆ 100ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ತಾವು ಬರೆದಂತೆ ಬದುಕಬೇಕೆಂಬ ಹಂಬಲ ಅವರಲ್ಲಿತ್ತು. ಅವರದು ಶ್ರೀಗಂಧ ವ್ರತದ ಬಾಳುವೆಯಾಗಿತ್ತು. ನಾನು ಅವರ ಸಿಸು ಮಗ ಎಂದ ಅವರು, ನನ್ನ ಅನೇಕ ಕಥೆ ಕವನಗಳನ್ನು ತಿದ್ದಿ ತೀಡಿ ಬರವಣೆಗೆಗೆ ಪ್ರೇರಣೆ ನೀಡಿದರಲ್ಲದೆ ಜನಪ್ರಿಯ ಕವಿಯಾಗಲು ಸಿನೆಮಾ ಗೀತೆಗಳನ್ನು ರಚಿಸಬೇಕೆಂದು ಹೇಳುತ್ತಿದ್ದರು ಎಂದು ಸ್ಮರಿಸಿದರು.ಎಚ್ಎಸ್ವಿ ಅವರ ಒಡನಾಡಿ, ಕಯವತ್ರಿ, ವಿಮರ್ಶಕಿ, ಹಿರಿಯ ಉಪನ್ಯಾಸಕಿ ಆರ್.ತಾರಣಿ ಶುಭದಾಯಿನಿ ಮಾತನಾಡುತ್ತ, ಈ ಸಮಾಗಮ ಸಂಗೀತ ಸಾಹಿತ್ಯದ ಅಪೂರ್ವ ಸಂಗಮ. ಎಚ್ಎಸ್‌ವಿ ಅವರ ಆತ್ಮ ಇಲ್ಲಿ ಎಲ್ಲಿಯೋ ಸುಳಿದಾಡುತ್ತಿರಬಹುದು ಎನಿಸುತ್ತದೆ. ಚಿತ್ರದುರ್ಗಕ್ಕೆ ಬಂದಾಗ ನಮ್ಮ ಮನೆಗೂ ಬಂದಿದ್ದರು. ನನ್ನ ಪದ್ಯಗಳನ್ನು ನೋಡಿ ಬಹುವಾಗಿ ಮೆಚ್ಚಿಕೊಂಡು ಹರಸಿದ್ದರು. ಕವಿಗೆ ಎಂದಿಗೂ ವಿದಾಯ ಎನ್ನುವುದಿಲ್ಲ. ಅವರು ತಮ್ಮ ಕಾವ್ಯ ಸಾಹಿತ್ಯದೊಂದಿಗೆ ಸದಾ ಜೀವಂತವಾಗಿರುತ್ತಾರೆ. ಸಮಗ್ರ ದೃಷ್ಟಿಕೋನ ವ್ಯಕ್ತಿತ್ವವುಳ್ಳ ಹೆಚ್‌ಎಸ್‌ವಿ ಅವರೊಬ್ಬ ಜೀವಕಾರುಣ್ಯದ ಕವಿಯಾಗಿದ್ದರು ಎಂದರು.
ರಂಗಕರ್ಮಿ ಬೆಂಗಳೂರಿನ ಗುಂಡಣ್ಣ ಮಾತನಾಡಿ, ಎಚ್‌ಎಸ್‌ವಿ ಮಿತಭಾಷಿ, ಭಾವಕವಿ. ವಿನಯವಂತಿಕೆ ಅವರಲ್ಲಿತ್ತು. ಅವರು ಗದ್ಯ ಪದ್ಯದ ಜತೆಗೆ ನಾಟಕಗಳನ್ನು ರಚಿಸಿದ್ದಾರೆ. ಅವೆಲ್ಲ ಓದುಗರಿಗೆ ಅಮೂಲ್ಯ ಕೊಡುಗೆ ಎಂದರು.ನುಡಿನಮನ ಮತ್ತು ಗಾಯನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿ, ಈ ನಾಡಿಗೆ ಶ್ರೇಷ್ಠ ಕೊಡುಗೆ ನೀಡಿದ ದಾರ್ಶನಿಕ ಜಗದ್ಗುರು ಎಂದರೆ ಜಯದೇವ ಶ್ರೀಗಳು. ಅವರ ಶಿಷ್ಯರಾಗಿದ್ದಂತವರು ಜಿ.ಎಸ್. ಶಿವರುದ್ರಪ್ಪನವರು. ಅವರ ಶಿಷ್ಯ ಎಚ್.ಎಸ್. ವೆಂಕಟೇಶ್ ಅವರಾಗಿದ್ದರು. 2004-05ರಲ್ಲಿ ಬೆಂಗಳೂರಿನ ಗಾಂಧಿನಗರದ ಬಸವಕೇಂದ್ರದಲ್ಲಿ ಕವಿ ಸಮ್ಮೇಳನ ನಡೆದಿತ್ತು. ಸಮ್ಮೇಳನಕ್ಕೆ ಜಿಎಸ್ಸೆಸ್ ಅವರು ಬರುವವರಿದ್ದರು. ಹಾಗೆಯೇ ಹೆಚ್ಚೆಸ್ವಿ ಅವರು ಬರುತ್ತಾರೆ ಅವರನ್ನೂ ಕರೆಯಿರಿ ಎಂದು ಅಭಿಮಾನವನ್ನು ತೋರಿಸಿದ್ದನ್ನು ಸ್ಮರಿಸಿದರು.
ಎಚ್ಎಸ್ವಿ ಅವರ ಕಾವ್ಯದಲ್ಲಿ ಭವ್ಯ ದಿವ್ಯ ಇದೆ ಅಂತ ಹೇಳುವುದಿಲ್ಲ ಅಲ್ಲಿ ತಾಯಿತನ ಇದೆ. ಅಂತಹ ಭಾವಸಂಪತ್ತಿನ ನೆನಪಿನ ಸುರಳಿ ಶ್ರೀಮಠದಲ್ಲಿ ಅನಾವರಣಗೊಂಡಿದೆ. ಇಂತಹ ಅಪರೂಪದ ಚೇತನಗಳ ಸ್ಮರಣೆ ಅತ್ಯಗತ್ಯ ಎಂದು ನುಡಿದರು.ಎಚ್‌ಎಸ್‌ವಿ ಅವರ ಶಿಷ್ಯೆ ಮಮತಾ ಅರಸೀಕೆರೆ ಹಾಗೂ ಕಾರ್ಯಕ್ರಮ ಸಂಘಟಕರೂ ಹಾಗೂ ಹಿರಿಯ ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ ಎಚ್‌ಎಸ್‌ವಿ ಅವರ ಬದುಕನ್ನು ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಡಾ.ಬಿ.ರಾಜಶೇಖರಪ್ಪ, ಅನಂತರೆಡ್ಡಿ, ಸೈಯದ್ ಇಸಾಕ್, ಕೆ.ಎಂ.ವೀರೇಶ್, ಡಿ.ಎಸ್.ಸುರೇಶ್‌ಬಾಬು, ಮುರುಳಿ, ಟಿ.ಕೆ. ಬಸವರಾಜ್, ಎಸ್.ವಿ. ಗುರುಮೂರ್ತಿ, ಶ್ರೀಮತಿ ಯಶೋದ ರಾಜಶೇಖರಪ್ಪ ಸೇರಿದಂತೆ ಬೃಹನ್ಮಠ ಶಾಖಾಮಠಗಳ ಚರಮೂರ್ತಿಗಳು, ಸಂಗೀತಾಸಕ್ತರು, ಸಾಹಿತ್ಯಾಸಕ್ತರು, ಹೆಚ್ಚೆಸ್ವಿ ಅವರ ಒಡನಾಡಿಗಳು, ಅಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.