ಕನ್ನಡಪ್ರಭ ವಾರ್ತೆ ಬೆಂಗಳೂರು
ಗುರುವಾರಷ್ಟೇ ಹಾಸನಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಬಳ್ಳಾರಿಗೆ ಪೌರಾಡಳಿತ ಇಲಾಖೆ ಸಚಿವ ರಹೀಂಖಾನ್ ಅವರುಗಳನ್ನು ಉಸ್ತುವಾರಿಗಳಾಗಿ ನೇಮಕ ಮಾಡಿತ್ತು. ಶುಕ್ರವಾರ ಈ ಆದೇಶ ವಾಪಸ್ ಪಡೆದಿದ್ದು, ಹಾಸನ ಉಸ್ತುವಾರಿ ಕೃಷ್ಣ ಬೈರೇಗೌಡ ಅವರನ್ನು ಮುಂದುವರೆಸಿ ಸಚಿವ ರಹೀಂ ಖಾನ್ ಅವರನ್ನು ಬಳ್ಳಾರಿಯ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣಕ್ಕೆ ಸೀಮಿತಗೊಳಿಸಿ ಆದೇಶಿಸಿದೆ.
ಈ ಗೊಂದಲಕ್ಕೆ ಕಾರಣವಾದ ಅಂಶಗಳು ಕುತೂಹಲಕಾರಿಯಾಗಿದ್ದು, ಇದರ ಹಿಂದೆ ಹಾಸನ ಜಿಲ್ಲೆಗೆ ಹಿಂದಿನ ಉಸ್ತುವಾರಿಯಾಗಿದ್ದ ಸಚಿವ ಕೆ.ಎನ್.ರಾಜಣ್ಣ ಹಾಗೂ ಶಾಸಕ ಶಿವಲಿಂಗೇಗೌಡ ಅವರ ನಡುವಿನ ಜಟಾಪಟಿ ಕಾರಣ ಎನ್ನಲಾಗುತ್ತಿದೆ. ಒಕ್ಕಲಿಗರ ಪ್ರಾಬಲ್ಯವಿರುವ ಹಾಸನ ಜಿಲ್ಲಾ ಉಸ್ತುವಾರಿಯಾಗಿದ್ದ ಸಚಿವ ಕೆ.ಎನ್.ರಾಜಣ್ಣ ಅವರಿಗೆ ನಿಗಮ-ಮಂಡಳಿ ನಿರ್ದೇಶಕರ ನೇಮಕಾತಿ ವಿಚಾರದಲ್ಲಿ ಸಚಿವರ ಬದಲಾಗಿ ಸ್ಥಳೀಯ ಶಾಸಕ ಶಿವಲಿಂಗೇಗೌಡ ಅವರ ಮಾತಿಗೆ ಮನ್ನಣೆ ದೊರಕಿತ್ತು.ಇದರಿಂದಾಗಿ ರಾಜಣ್ಣ ಹಾಸನ ಉಸ್ತುವಾರಿ ಬದಲಾಗಿ ಪರಿಶಿಷ್ಟ ಪಂಗಡದ ಪ್ರಾಬಲ್ಯವಿರುವ ಬಳ್ಳಾರಿ ಜಿಲ್ಲಾ ಉಸ್ತುವಾರಿ ನೀಡುವಂತೆ ರಾಜಣ್ಣ ಕೋರಿದ್ದರು ಎನ್ನಲಾಗಿದೆ. ಆದರೆ, ಬಳ್ಳಾರಿ ಜಿಲ್ಲೆಯ ಶಾಸಕರು ಮತ್ತು ಮುಖಂಡರಿಗೆ ಸಚಿವ ಕೆ.ಎನ್.ರಾಜಣ್ಣರಿಗೆ ಬಳ್ಳಾರಿ ಉಸ್ತುವಾರಿಯಾಗಿ ಬರುವುದು ಪಥ್ಯವಾಗಲಿಲ್ಲ.
ಹೀಗಾಗಿ, ರಾಜಣ್ಣ ಅವರನ್ನು ಹಾಸನ ಜಿಲ್ಲಾ ಉಸ್ತುವಾರಿಯಿಂದ ಬಿಡುಗಡೆ ಮಾಡುವುದು ಹಾಗೂ ಈ ಹೊಣೆಯನ್ನು ಸಚಿವ ಕೃಷ್ಣಬೈರೇಗೌಡ ಅವರಿಗೆ ನೀಡುವುದು. ಇನ್ನು ಬಳ್ಳಾರಿ ಮತ್ತು ವಿಜಯನಗರ ಎರಡೂ ಜಿಲ್ಲೆಯ ಉಸ್ತುವಾರಿ ಹೊಂದಿರುವ ಜಮೀರ್ ಅಹ್ಮದ್ ಖಾನ್ ಅವರಿಗೆ ನೆರವಾಗುವ ಉದ್ದೇಶದಿಂದ ಬಳ್ಳಾರಿಯಲ್ಲಿ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ನಡೆಸಲು ಸಚಿವ ರಹೀಂ ಖಾನ್ ಅವರನ್ನು ನಿಯೋಜಿಸಲು ತೀರ್ಮಾನವಾಗಿತ್ತು.
ಈ ಹಿನ್ನೆಲೆಯಲ್ಲಿ ಸರ್ಕಾರ ಆದೇಶ ಹಿಂಪಡೆದಿದ್ದು, ಹಾಸನ ಉಸ್ತುವಾರಿ ಕೃಷ್ಣಬೈರೇಗೌಡ ಅವರನ್ನು ಮುಂದುವರೆಸಿ, ಸಚಿವ ರಹೀಂ ಖಾನ್ ಅವರನ್ನು ಧ್ವಜಾರೋಹಣಕ್ಕೆ ಸೀಮಿತಗೊಳಿಸಿದೆ ಎಂದು ಮೂಲಗಳು ಹೇಳಿವೆ.