ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ವಿಶ್ವ ಪ್ರಜಾಪ್ರಭುತ್ವ ದಿನ ಸಂಬಂಧ ಶಾಸಕ ರಮೇಶ ಬಂಡಿಸಿದ್ದೇಗೌಡ ನೇತೃತ್ವದಲ್ಲಿ ಪಟ್ಟಣದ ಶ್ರೀರಂಗನಾಥ ಕಲ್ಯಾಣ ಮಂಟಪದಲ್ಲಿ ಅಧಿಕಾರಿಗಳ ಜೊತೆ ಪೂರ್ವಭಾವಿ ಸಭೆ ನಡೆಸಿದರು.ಪಟ್ಟಣದಲ್ಲಿ ಸೆ.20 ರಂದು ಆಚರಿಸಲಿರುವ ಕಾರ್ಯಕ್ರಮದ ಅಂಗವಾಗಿ ತಾಲೂಕು ಮಟ್ಟದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಯನ್ನು ನೋಡಲ್ ಅಧಿಕಾರಿ ನೇಮಕ ಮಾಡಿದ್ದು, ಸ್ಥಳೀಯ ಇಲಾಖೆಗೆ ಒಬ್ಬರಂತೆ ಪ್ರತಿ 4 ಕಿ.ಮೀಗೆ ಒಬ್ಬರಂತೆ ನೋಡಲ್ ಅಧಿಕಾರಿಗಳಾಗಿ ನೇಮಿಸಲಾಗುತ್ತದೆ. ಮೈಸೂರು -ಬೆಂಗಳೂರು ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ಮಂಡ್ಯ ಗಡಿಯಿಂದ ಮೈಸೂರು ಗಡಿವರೆಗೆ ಸುಮಾರು 21 ಕಿ.ಮೀ ಉದ್ದದಷ್ಟು ಎರಡು ಬದಿಯಲ್ಲಿ ಮಾನವ ಸರಪಳಿ ನಿರ್ಮಿಸಿಲು ಸೂಚಿಸಲಾಗಿದೆ ಎಂದರು.
ಅಧಿಕಾರಿಗಳು ತಮ್ಮ ವಲಯ ಮಟ್ಟದ ಶಾಲಾ ಮಕ್ಕಳು, ಸಂಘ ಸಂಸ್ಥೆಗಳು, ಆಸ್ಪತ್ರೆಯ ಅಂಗನವಾಡಿ, ಆಶಾ ಕಾರ್ಯಕರ್ತರು ಬಳಸಿಕೊಂಡು ಇದರ ಜೊತೆ ಗಾರ್ಮೆಂಟ್ಸ್ ಕಾರ್ಖಾನೆಯವರು, ಶಾಲಾ, ಕಾಲೇಜು ವಿದ್ಯಾರ್ಥಿಗಳು ಹಾಗೂ ತಾಲೂಕಿನ ಸಹಕಾರ ಸಂಘಗಳ ಷೇರುದಾರರು, ಸದಸ್ಯರು, ಧರ್ಮಸ್ಥಳ ಗ್ರಾಮಾಭಿ ಯೋಜನೆಯ ಸ್ತ್ರೀಶಕ್ತಿ ಗುಂಪುಗಳೊಂದಿಗೆ ಮಾನವ ಸರಪಳಿ ನಿರ್ಮಿಸಲಾಗುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ಬರುವರಿಗೆ ಒಂದು ಕಿ.ಮೀ ವ್ಯಾಪ್ತಿಯ ಜನರಿಗೆ ಒಂದು ಶಾಲೆಯಿಂದ ನೀರು ಆಹಾರ ತಂದು ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆ ಆಸ್ಪತ್ರೆ ಸಿಬ್ಬಂದಿ ನೇಮಿಸಲಾಗಿದೆ. ಬಿಸಿಲಿಗೆ ಅಸ್ವಸ್ಥ ಮಕ್ಕಳಿಗೆ ಸ್ಥಳದಲ್ಲಿ ಪ್ರಾಥಮಿಕ ಚಿಕಿತ್ಸೆ ನಂತರ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿದೆ ಎಂದರು.
ಶಿಕ್ಷಣ ಇಲಾಖೆಯಿಂದ ಪ್ರತಿ ಕಿಮೀ ಒಬ್ಬರನ್ನು ಆಯಾ ಶಾಲೆಗಳ ಮುಖ್ಯಸ್ಥರು ಮಕ್ಕಳ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಒಟ್ಟು 21 ಕಿ.ಮೀ. ಸರ್ವೇ ಮಾಡಿ ಪ್ರತಿ ಕಿಲೋ ಮೀಟರ್‌ಗೂ ಒಂದು ಲ್ಯಾಂಡ್ ಮಾರ್ಕ್ ಹಾಕಿ ಅದನ್ನು ವಲಯಗಳನ್ನಾಗಿ ಮಾಡಿಕೊಳ್ಳಲಾಗಿದೆ ಎಂದರು.ಗ್ರಾಪಂ ಪಿಡಿಒ ಸಿಬ್ಬಂದಿ ವರ್ಗ, ಶಿಕ್ಷಕರು, ಎಲ್ಲಾ ಇಲಾಖೆಯ ಸಿಬ್ಬಂದಿ ವರ್ಗ ಶಾಲಾ ಮಕ್ಕಳು, ಗ್ರಾಪಂ ಸದಸ್ಯರು, ವಿವಿಧ ಸಹಕಾರ ಸಂಘಗಳ ಸದಸ್ಯರು ಪದಾಧಿಕಾರಿಗಳು ಸ್ತ್ರೀಶಕ್ತಿಗುಂಪು, ಆಶಾ ಕಾರ್ಯಕರ್ತರು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮಹಿಳೆಯರು, ಸಾರ್ವಜನಿಕರನ್ನು ಈ ಗಾಗಲೇ ಕ್ರೋಢೀಕರಿಸಿ ಮಾನವ ಸರಪಳಿ ನಿರ್ಮಿಸಲು ತಾಲೂಕು ಆಡಳಿತ ಮುಂದಾಗಿರುವುದಾಗಿ ಶಾಸಕರು ಸಭೆಯಲ್ಲಿ ತಿಳಿಸಿದರು. ಆಯಾ ಇಲಾಖೆವಾರು ಬಹಳ ಜವಾಬ್ದಾರಿ ತೆಗೆದುಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ತಹಸೀಲ್ದಾರ್ ಪರುಶುರಾಮ್ ಸತ್ತಿಗೇರಿ, ತಾಪಂ ಇಒ ವೇಣು, ಮುಖ್ಯಾಧಿಕಾರಿ ರಾಜಣ್ಣ, ಹಾಗೂ ಬಿಇಒ ಆರ್.ಪಿ ಮಹೇಶ್ ಸೇರಿದಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.