ಕನ್ನಡಪ್ರಭ ವಾರ್ತೆ ಸಿಂದಗಿ
ಈ ವೇಳೆ ಮಾತನಾಡಿದ ಅವರು, ಸಿಂದಗಿ ಸಾರಂಗಮಠಕ್ಕೆ ತನ್ನದೇ ಆದ ಇತಿಹಾಸವಿದೆ. ಗುರುಪರಂಪರೆಯ ಮಠವಾದ ಸಾರಂಗಮಠ ಜಾತಿ ಧರ್ಮವನ್ನು ಮೀರಿದ ಮಠಗಳಲ್ಲಿ ಒಂದಾಗಿದೆ. ಶಿಕ್ಷಣ, ಧರ್ಮ ಪ್ರಸಾರ, ಸಾಮಾಜಿಕ ಸೇವೆ, ಕೃಷಿ, ಆಧ್ಯಾತ್ಮವನ್ನು ನಿತ್ಯ ಸಮಾಜಕ್ಕೆ ನೀಡುವ ಮೂಲಕ ಸಾಮಾಜಿಕ ಸೇವೆ ಮೆರೆಯುತ್ತಿದೆ. ಲಿಂ.ಚನ್ನವೀರ ಸ್ವಾಮಿಗಳು ಮಠವನ್ನು ಬೆಳೆಸುವ ಜೊತೆಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ಶಿಕ್ಷಣ ಸಂಸ್ಥೆಯನ್ನು ಕಟ್ಟಿದವರು. ಪ್ರಸ್ತುತ ಪೀಠಾಧಿಪತಿ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಮಠದ ಜೊತೆಗೆ ಶಿಕ್ಷಣ ಸಂಸ್ಥೆಯನ್ನು ಉತ್ತರ ಕರ್ನಾಟಕದಲ್ಲಿ ಗುರುತಿಸುವಂತೆ ಮಾಡಿದ್ದಾರೆ. ಕೊಣ್ಣೂರಿನ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ಜ್ಞಾನಿಗಳು, ವಿದ್ಯಾವಂತರು, ಧರ್ಮನಿಷ್ಠರು, ಶ್ರಮಜೀವಿಗಳು ಅಂತವರನ್ನು ಸಾರಂಗಮಠದ 18 ನೇ ಉತ್ತರಾಧಿಕಾರಿಯನ್ನಾಗಿ ಮಾಡಿದ್ದು ಸಂತಸ ತಂದಿದೆ ಎಂದರು.
ಶಾಸಕ ಅಶೋಕ ಮನಗೂಳಿ, ಜಮಖಂಡಿ ಶಾಸಕ ಜಗದೀಶ ಗುಡಗುಂಡಿಮಠ ಮಾತನಾಡಿ, ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ಸಾರಂಗಮಠಕ್ಕೆ ಉತ್ತರಾಧಿಕಾರಿಯಾಗಿದ್ದು ಸಂತಸ ತಂದಿದೆ. ಈ ಮಠಕ್ಕೆ ಸಮರ್ಥ ಮತ್ತು ಸದ್ಗುಣ ಸಂಪನ್ನರು ಬೇಕಿತ್ತು. ಆ ಎಲ್ಲ ಗುಣಗಳು ಕೊಣ್ಣೂರಿನ ಪೂಜ್ಯರಲ್ಲಿವೆ. ಮಠದ ಸದ್ಬಕ್ತರು ಡಾ.ಪ್ರಭುಸಾರಂಗದೇವರ ಮೇಲೆ ಇಟ್ಟಂತ ಗೌರವವನ್ನು ನೂತನ ಶ್ರೀಗಳ ಮೇಲೆಯೂ ಈಡಬೇಕು ಎಂದು ಹೇಳಿದರು.ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ಮಾತನಾಡಿ, ನಾನು ಸಾರಂಗಮಠಕ್ಕೆ ಹೆಚ್ಚು ಸಂಪರ್ಕದಲ್ಲಿದ್ದವನು. ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಸಮರ್ಥ ಗುರುಗಳು ಅನೇಕ ಮಠಾಧೀಶರಿಗೆ ಮಾದರಿಯಾದವರು. ನಾನು ಮಠದ ಆಸ್ತಿ ನೋಡಿ ಇಲ್ಲಿ ಬಂದಿಲ್ಲ. ಮಠದ ಸದ್ಬಕ್ತರು ಮತ್ತು ಸಿಂದಗಿಯ ಜನತೆಯ ಪ್ರೀತಿಗೆ ನಾನು ಬಂದಿದ್ದೇನೆ. ಶ್ರೀಗಳು ಕಂಡ ಕನಸನ್ನು ಭಕ್ತಿ ಮತ್ತು ಶ್ರದ್ದೆಯಿಂದ ಸಮರ್ಥವಾಗಿ ಎಲ್ಲರ ಸಹಕಾರದಿಂದ ನಡೆಸಿಕೊಂಡು ಹೊಗುತ್ತೇನೆ ಎಂದು ಭರವಸೆ ನೀಡಿದರು.
ಗಿರಿಸಾರಗ, ಪಾಳಾದ, ಬಂಥನಾಳ, ಬಿಲಕೇರುರ, ಜಮಖಂಡಿ, ಬೀಳಗಿ, ಆಲಮೇಲ, ಯಂಕಂಚಿ, ಕೆರುಟಗಿ, ಸಿಂದಗಿ, ಕೊಕಟನೂರ, ನಾದ, ಬೋರಗಿ ಶ್ರೀಗಳು ಮತ್ತು ಅಶೋಕ ವಾರದ, ಗಂಗಾಧರ ಜೋಗೂರ, ಅಶೋಕ ಮಸಳಿ, ವಿಶ್ವನಾಥ ಜೋಗೂರ, ಡಾ.ಅರವಿಂದ ಮನಗೂಳಿ, ಡಾ.ಶರಣಬಸವ ಜೋಗೂರ ಸೇರಿ ಅನೇಕರು ಇದ್ದರು. ಮುತೈದಿಯರಿಗೆ ಉಡಿತುಂಬವ ಕಾರ್ಯಕ್ರಮ ನಡೆಯಿತು.