ಪಂಚಾಯಿತಿ ಆಡಳಿತದ ಗಮನಕ್ಕೆ ತಾರದೇ ತಾತ್ಕಾಲಿಕ ನೆಲೆಯ ಸಿಬ್ಬಂದಿಯನ್ನು ಜಾತಿಗಣತಿ ಕಾರ್ಯಕ್ಕೆ ನೇಮಿಸಿರುವ ಬಗ್ಗೆ ಪಂಚಾಯಿತಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ ಘಟನೆ ಉಪ್ಪಿನಂಗಡಿ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಡೆಯಿತು.
ಉಪ್ಪಿನಂಗಡಿ: ಪಂಚಾಯಿತಿ ಆಡಳಿತದ ಗಮನಕ್ಕೆ ತಾರದೇ ತಾತ್ಕಾಲಿಕ ನೆಲೆಯ ಸಿಬ್ಬಂದಿಯನ್ನು ಜಾತಿಗಣತಿ ಕಾರ್ಯಕ್ಕೆ ನೇಮಿಸಿರುವ ಬಗ್ಗೆ ಪಂಚಾಯಿತಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ ಘಟನೆ ಉಪ್ಪಿನಂಗಡಿ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಡೆಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಲಿತಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾರ್ಯದರ್ಶಿ ಗೀತಾ ಶೇಖರ ಲೆಕ್ಕಪತ್ರ ಹಾಗೂ ವರದಿ ಮಂಡಿಸಿ ಮಂಜೂರಾತಿ ಪಡೆದರು.ಗ್ರಾಮದ ಸರ್ಕಾರಿ ಹೈಸ್ಕೂಲ್ ಮೈದಾನಕ್ಕೆ ಲೆಕ್ಕಕ್ಕೂ ಮೀರಿದ ಹೈಮಾಸ್ಟ್ ದೀಪ ಅಳವಡಿಸಿ ದುಂದು ವೆಚ್ಚ ಮಾಡಲಾಗಿದೆ. ಪಂಚಾಯಿತಿ ಅನುದಾನವನ್ನು ಎಲ್ಲ ವಾರ್ಡ್‌ಗಳಿಗೆ ಸಮಾನವಾಗಿ ಹಂಚಬೇಕು, ಗ್ರಾಮದ ಹಳೇ ಬಸ್ ನಿಲ್ದಾಣದಲ್ಲಿ ರಿಕ್ಷಾ ಚಾಲಕರ ಕೋರಿಕೆಗೆ ಸ್ಪಂದಿಸಿ ಧ್ವಜಸ್ತಂಭ ರಚನೆಗೆ ಅವಕಾಶಕೊಟ್ಟಿದ್ದು, ಇನ್ನೂ ಹಲವಾರು ಸಂಘ ಸಂಸ್ಥೆಗಳು ಅಲ್ಲಲ್ಲಿ ದ್ವಜ ಸ್ತಂಭವನ್ನು ಸ್ಥಾಪಿಸಲು ಮುಂದಾದರೆ ಸಮಸ್ಯೆಗಳು ಎದುರಾಗಬಹುದೆಂದು ಸದಸ್ಯರು ಎಚ್ಚರಿಸಿದರು. ಪಂಚಾಯಿತಿ ಆವರಣದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯದ ವ್ಯವಸ್ಥೆ ಕಲ್ಪಿಸಬೇಕೆಂಬ ಆಗ್ರಹ, ರಾಷ್ಟ್ರೀಯ ಹೆದ್ದಾರಿ ೭೫ರ ರಸ್ತೆ ಅಗಲೀಕರಣಗೊಂಡರೂ ಮಠ, ಕೂಟೇಲು ಬಳಿ ಪ್ರಯಾಣಿಕರ ತಂಗುದಾಣ ರಚಿಸಿಕೊಡಲು ಪ್ರಾಧಿಕಾರಕ್ಕೆ ಮನವಿ ಮಾಡಲು ಆಗ್ರಹ, ಕೆಂಪಿಮಜಲುನಲ್ಲಿ ಪಂಚಾಯಿತಿ ಅಧೀನದ ಗರಡಿ ಮನೆ ಬಳಕೆ ಮತ್ತು ನಿರ್ವಹಣೆಯಲ್ಲಿ ಲೋಪದೋಷವಿದೆ ಎಂಬ ಆರೋಪ ಇತ್ಯಾದಿ ಸಭೆಯಲ್ಲಿ ಕೇಳಿ ಬಂತು.
ಪೇಟೆಯಲ್ಲಿ ಹೆಚ್ಚುತ್ತಿರುವ ಬೀದಿ ನಾಯಿ ಹಾವಳಿಯನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಇಬ್ರಾಹಿಂ ಒತ್ತಾಯಿಸಿದರು.
ಪಂಚಾಯಿತಿಯಲ್ಲಿ ಹಿಂದೆ ಕರ್ತವ್ಯ ನಿಭಾಯಿಸಿದ ನಿವೃತ್ತ ಪಿಡಿಒ ಪೂವಪ್ಪ ಬಂಗೇರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.