ಸುಗಮ ಸಂಚಾರಕ್ಕೆ ಟ್ರಾಫಿಕ್ ವಾರ್ಡನ್ ನೇಮಕ ಶೀಘ್ರ

KannadaprabhaNewsNetwork | Published : Dec 28, 2023 1:46 AM

ಸಾರಾಂಶ

ಸಾರ್ವಜನಿಕರು 112 ಸಂಖ್ಯೆಗೆ ಯಾವುದೇ ಸಂದರ್ಭದಲ್ಲಿ ಕರೆ ಮಾಡಿದರೂ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿ ಹಾಜರಾಗುತ್ತದೆ

ಬಳ್ಳಾರಿ: ನಗರದ ರಸ್ತೆ ಸಂಚಾರ ದಟ್ಟಣೆಯನ್ನು ಸುಧಾರಿಸಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸಾರ್ವಜನಿಕರ ಪಾಲ್ಗೊಳ್ಳುವಿಕೆಯಲ್ಲಿ ಟ್ರಾಫಿಕ್ ವಾರ್ಡನ್ ವ್ಯವಸ್ಥೆಯನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ತಿಳಿಸಿದ್ದಾರೆ.

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಭಾಂಗಣದಲ್ಲಿ ನಡೆದ ವಾಣಿಜ್ಯೋದ್ಯಮಿಗಳು, ಕೈಗಾರಿಕೋದ್ಯಮಿಗಳು ಮತ್ತು ವಿವಿಧ ಸಂಘ- ಸಂಸ್ಥೆಗಳ ಪದಾಧಿಕಾರಿಗಳಿಗಾಗಿ ನಡೆದ `ರಸ್ತೆ ಸುಗಮ ಸಂಚಾರ''''''''ದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

ಸಾರ್ವಜನಿಕರು, ನಿವೃತ್ತರು ಟ್ರಾಫಿಕ್ ವಾರ್ಡನ್‌ಗಳಾಗಿ ನಿತ್ಯ 2 ತಾಸುಗಳು ಮಾತ್ರ ಕೆಲಸ ಮಾಡಲು ಅವಕಾಶವಿದ್ದು, ಆಸಕ್ತರಿಗೆ ಅಗತ್ಯ ತರಬೇತಿ ಮತ್ತು ಬೆಂಬಲವನ್ನು ಪೊಲೀಸ್ ಇಲಾಖೆ ನೀಡಲಿದೆ. ಮುಖ್ಯ ರಸ್ತೆಗಳಲ್ಲಿಯ ವ್ಯಾಪಾರಿಗಳು/ಉದ್ಯಮಿಗಳು ಒಟ್ಟಾಗಿ ಸೆಕ್ಯುರಿಟಿ ಗಾರ್ಡ್ ಗಳನ್ನು ನೇಮಕ ಮಾಡಿಕೊಂಡು ಸಂಚಾರ ಮತ್ತು ವಾಹನಗಳ ಪಾರ್ಕಿಂಗ್ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಮುಕ್ತ ಅವಕಾಶವಿದ್ದು, ಇಲಾಖೆ ಸಹಕಾರ ನೀಡಲಿದೆ ಎಂದರು.

ವಾಹನಗಳ ಯುಟರ್ನ್ ವ್ಯವಸ್ಥೆ, ಬೀದಿಬದಿ ವ್ಯಾಪಾರಿಗಳು ಮತ್ತು ಫುಟ್‌ಪಾತ್‌ ಆಕ್ರಮಣ, ಪಾದಚಾರಿಗಳು ಎದುರಿಸುತ್ತಿರುವ ಸಮಸ್ಯೆಗಳು ಎಲ್ಲವನ್ನೂ ಹಂತ- ಹಂತವಾಗಿ ಪರಿಹರಿಸಲಾಗುತ್ತದೆ. ಸಾರ್ವಜನಿಕರ ಸಹಕಾರ - ಬೆಂಬಲ ಸಿಕ್ಕಾಗ ತ್ವರಿತವಾಗಿ ಸಂಚಾರ ಸಮಸ್ಯೆಗಳು ಪರಿಹಾರಗೊಳ್ಳುತ್ತವೆ. ಸಾರ್ವಜನಿಕರು 112 ಸಂಖ್ಯೆಗೆ ಯಾವುದೇ ಸಂದರ್ಭದಲ್ಲಿ ಕರೆ ಮಾಡಿದರೂ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿ ಹಾಜರಾಗುತ್ತದೆ ಎಂದರು.

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ ಅವರು, ಬಳ್ಳಾರಿ ನಗರಾದ್ಯಂತ ಇರುವ ಸಂಚಾರಿ ದಟ್ಟಣೆ, ಇಕ್ಕಟ್ಟಾದ ರಸ್ತೆಗಳು, ವಿವಿಧ ಬಡಾವಣೆಗಳಲ್ಲಿ ಕುಡುಕರ ಹಾವಳಿ, ಅನಧಿಕೃತ ಮಟನ್- ಚಿಕನ್‌ ಅಂಗಡಿಗಳು, ಬೀದಿನಾಯಿಗಳ ಸಮಸ್ಯೆ ಕುರಿತು ತಿಳಿಸಿದರು.

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ. ಮಹಾರುದ್ರಗೌಡ ಅವರು, ಎಪಿಎಂಸಿ ಆವರಣದಲ್ಲಿ ಪೊಲೀಸ್ ಗಸ್ತು ಹೆಚ್ಚಿಸಿ ಕಳ್ಳತನ, ಹಲ್ಲೆಗಳನ್ನು ನಿಯಂತ್ರಿಸಬೇಕು. ಅಲ್ಲದೇ, ವ್ಯಾಪಾರಿಗಳಿಗೆ ಭದ್ರತೆ ಒದಗಿಸಬೇಕು ಎಂದು ಮನವಿ ಮಾಡಿದರು.

ಸಂಸ್ಥೆಯ ಮಾಜಿ ಅಧ್ಯಕ್ಷ ವಿ. ರವಿಕುಮಾರ್, ಗೌರವಾಧ್ಯಕ್ಷ ಸಿ. ಶ್ರೀನಿವಾಸರಾವ್, ಜೆ.ರಾಜೇಶ್, ಬಿ. ಸತ್ಯಬಾಬು, ಸೊಂತಗಿರಿಧರ್, ರಾಘವೇಂದ್ರ, ಕೆ.ಸಿ. ಸುರೇಶಬಾಬು ಅವರು ನಗರದ ವಿವಿಧೆಡೆಯ ಸಮಸ್ಯೆಗಳ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದರು.

ಮಹಾನಗರ ಪಾಲಿಕೆಯ ಆಯುಕ್ತ ಖಲೀಲ್ ಸಾಬ್ ಅವರು, ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲ ರಸ್ತೆಗಳಲ್ಲಿಯ ಗುಂಡಿಗಳನ್ನು ಮುಚ್ಚಲು ಟೆಂಡರ್ ಪ್ರಕ್ರಿಯೆ ಶೀಘ್ರದಲ್ಲಿಯೇ ಪೂರ್ಣಗೊಳ್ಳಲಿದೆ ಎಂದರು. ಸಂಚಾರ ಪೊಲೀಸ್ ಠಾಣೆಯ ಟ್ರಾಫಿಕ್ ಸಿಪಿಐ ಅಯ್ಯನಗೌಡ ಪಾಟೀಲ್ ಸೇರಿದಂತೆ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.

Share this article