ಕೋರ್ಟ್‌ ಮೊರೆ ಹೋಗಿದ್ದಕ್ಕೆ ಪಶುವೈದ್ಯರ ನೇಮಕ ವಿಳಂಬ

KannadaprabhaNewsNetwork | Published : Jan 30, 2024 2:03 AM

ಸಾರಾಂಶ

ಪಶುವೈದ್ಯ ಹುದ್ದೆಯ ಆಕಾಂಕ್ಷಿಗಳು ಕೋರ್ಟ್‌ ಮೊರೆ ಹೋಗಿದ್ದರಿಂದ ಪಶುವೈದ್ಯರ ನೇಮಕ ವಿಳಂಬವಾಗಿದ್ದು, ಸಮಸ್ಯೆ ಇತ್ಯರ್ಥವಾಗುವ ತನಕ ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಕ್ರಮಕೈಗೊಳ್ಳಲಾಗುವುದು ಎಂದು ಪಶುಸಂಗೋಪನೆ, ರೇಷ್ಮೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅವರು ತಿಳಿಸಿದರು.

ಉಸ್ತುವಾರಿ ಸಚಿವರಿಂದ ಕೊಳ್ಳೇಗಾಲದಲ್ಲಿ ಪಶು ಆಸ್ಪತ್ರೆ ಉದ್ಘಾಟನೆ । ರೈತರಿಗೆ ಮೇವಿನ ಬೀಜದ ಕಿಟ್ ವಿತರಣೆ

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಪಶುವೈದ್ಯ ಹುದ್ದೆಯ ಆಕಾಂಕ್ಷಿಗಳು ಕೋರ್ಟ್‌ ಮೊರೆ ಹೋಗಿದ್ದರಿಂದ ಪಶುವೈದ್ಯರ ನೇಮಕ ವಿಳಂಬವಾಗಿದ್ದು, ಸಮಸ್ಯೆ ಇತ್ಯರ್ಥವಾಗುವ ತನಕ ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಕ್ರಮಕೈಗೊಳ್ಳಲಾಗುವುದು ಎಂದು ಪಶುಸಂಗೋಪನೆ, ರೇಷ್ಮೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅವರು ತಿಳಿಸಿದರು. ಕೊಳ್ಳೇಗಾಲ ಪಟ್ಟಣದಲ್ಲಿ ಒಂದು ಕೋಟಿ ರು.ವೆಚ್ಚದಲ್ಲಿ ನಿರ್ಮಿಸಿರುವ ನೂತನ ಪಶು ಆಸ್ಪತ್ರೆ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು ಪಶು ಸಂಗೋಪನಾ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದ್ದು, ತಕ್ಷಣದಲ್ಲಿ ಪಶು ನಿರೀಕ್ಷಕರ ನೇಮಕ ಮಾಡಿಕೊಳ್ಳಲಾಗುವುದು ಎಂದರು. ಪಶು ಆಸ್ಪತ್ರೆ ಸೇವೆ ಸಮರ್ಪಕವಾಗಿ ಉಪಯೋಗವಾಗಲಿ. ಎಲ್ಲಿ ಪಶು ಆಸ್ಪತ್ರೆ ಅಗತ್ಯತೆ ಕಡಿಮೆಯಾಗಿದೆ ಎಂಬ ಬಗ್ಗೆ ಈಗಾಗಲೇ ಸಮೀಕ್ಷೆ ನಡೆಸಲಾಗಿದೆ. ಅಗತ್ಯವಿರುವ ಕಡೆ ಪಶು ಆಸ್ಪತ್ರೆಗಳನ್ನು ಒದಗಿಸಲು ಕ್ರಮವಹಿಸಲಾಗುವುದು. ಹಾಲಿಗೆ ೩ ರೂ. ಪ್ರೋತ್ಸಾಹ ಧನ ಹೆಚ್ಚಳ ಮಾಡಿದ್ದು ಇದು ನೇರವಾಗಿ ರೈತರಿಗೆ, ಹೈನುಗಾರಿಕೆ ಅವಲಂಬಿತರಿಗೆ ತಲುಪುತ್ತಿದೆ. ಬರಗಾಲ ಹಿನ್ನೆಲೆಯಲ್ಲಿ ನೀರು ಸೌಲಭ್ಯ ಇರುವ ಕಡೆ ಮೇವಿನ ಬೀಜದ ಕಿಟ್ ಒದಗಿಸಲಾಗುತ್ತಿದೆ. ಪಶುಪಾಲನಾ ಇಲಾಖೆ ಸಿಬ್ಬಂದಿ ಕೊರತೆಯನ್ನು ಹಂತ ಹಂತವಾಗಿ ನೀಗಿಸಲಿದ್ದೇವೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರು ಪಶು ಆಸ್ಪತ್ರೆ ವೈದ್ಯರುಗಳ ನೇಮಕ ಆಗಬೇಕಿದೆ. ತಾಂತ್ರಿಕ ತಜ್ಞರ ನಿಯೋಜನೆಯು ಮಾಡಬೇಕಿದೆ. ರಾಸುಗಳ ಅನುಕೂಲಕ್ಕಾಗಿ ಆಸ್ಪತ್ರೆ ನಿರ್ಮಾಣವಾಗಿದೆ. ಪರಿಪೂರ್ಣವಾಗಿ ಎಲ್ಲ ಸೌಲಭ್ಯಗಳು ಲಭ್ಯವಾದರೆ ಮತ್ತಷ್ಟು ನೆರವಾಗಲಿದೆ ಎಂದರು. ಇದೇ ವೇಳೆ ಮೇವಿನ ಬೀಜದ ಕಿಟ್‌ಗಳನ್ನು ರೈತರಿಗೆ ವಿತರಿಸಲಾಯಿತು. ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಪಂ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಉಪವಿಭಾಗಾಧಿಕಾರಿ ಮಹೇಶ್, ಪಶುಸಂಗೋಪನೆ ಇಲಾಖೆಯ ಉಪ ನಿರ್ದೇಶಕ ಹನುಮೇಗೌಡ, ನಗರಸಭಾ ಸದಸ್ಯರು, ಇತರೆ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Share this article