ಯೋಜನೆಗಳ ಪ್ರಗತಿಗೆ ಕೇಂದ್ರ ತಂಡ ಮೆಚ್ಚುಗೆ

KannadaprabhaNewsNetwork | Published : Mar 3, 2024 1:30 AM

ಸಾರಾಂಶ

ಕೇಂದ್ರ ಯೋಜನೆಗಳ ಪ್ರಗತಿ ಹಾಗೂ ಯೋಜನೆಗಳಿಂದಾಗಿರುವ ಶೈಕ್ಷಣಿಕ, ಸಾಮಾಜಿಕ ಪ್ರಗತಿಯ ಕುರಿತು ಪರಿಶೀಲನೆ ನಡೆಸಲು ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಅಧಿಕಾರಿಗಳ ತಂಡದಿಂದ ಜಿಲ್ಲೆಯ ವಿವಿಧ ಶಾಲೆಗಳಿಗೆ ಭೇಟಿ

ಕನ್ನಡಪ್ರಭ ವಾರ್ತೆ ಕೋಲಾರ

ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿನ ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಸೇರಿದಂತೆ ವಿವಿಧ ಕೇಂದ್ರ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ಕೇಂದ್ರ ಮಾನವ ಸಂಪನ್ಮೂಲ ವಿಭಾಗದ ಹಿರಿಯ ಐಎಎಸ್ ಅಧಿಕಾರಿ ಅರ್ಚನಾ, ವಿವಿಧ ಕಾರ್ಯಕ್ರಮಗಳ ಪ್ರಗತಿ ಹಾಗೂ ಸದ್ಬಳಕೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೇ, ತಾಲ್ಲೂಕಿನ ಬೆಳ್ಳೂರಿನಲ್ಲಿ ಇದೇ ಸಂದರ್ಭದಲ್ಲಿ ವಯಸ್ಕರ ಶಿಕ್ಷಣದ ಸಾಮಾಜಿಕ ಚೇತನಾ ಕೇಂದ್ರಕ್ಕೂ ಚಾಲನೆ ನೀಡಿದರು.

ಕೇಂದ್ರ ಯೋಜನೆಗಳ ಪ್ರಗತಿ ಹಾಗೂ ಯೋಜನೆಗಳಿಂದಾಗಿರುವ ಶೈಕ್ಷಣಿಕ, ಸಾಮಾಜಿಕ ಪ್ರಗತಿಯ ಕುರಿತು ಪರಿಶೀಲನೆ ನಡೆಸಲು ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಅಧಿಕಾರಿಗಳ ತಂಡದ ನೇತೃತ್ವ ವಹಿಸಿ ಜಿಲ್ಲೆಯ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಮಾತನಾಡಿದರು.

ಬಿಸಿಯೂಟ, ನರೇಗಾ ಕಾಮಗಾರಿ

ಸರ್ಕಾರಿ ಶಾಲೆಗಳು ಮತ್ತು ಮಕ್ಕಳ ಶೈಕ್ಷಣಿಕ ಅಭಿವೃದ್ದಿಗಾಗಿ ಕೇಂದ್ರ ಸರ್ಕಾರ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮಕ್ಕೆ ಅನುದಾನ ನೀಡುತ್ತಿದೆ, ಇದರ ಜತೆಗೆ ಸರ್ಕಾರಿ ಶಾಲೆಗಳಲ್ಲಿ ಕೇಂದ್ರದ ಅನುದಾನದಲ್ಲಿ ನಿರ್ಮಾಣಗೊಂಡಿರುವ ಪ್ರಯೋಗಾಲಯ, ಡಿಜಿಟಲ್ ಗ್ರಂಥಾಲಯಗಳು, ನರೇಗಾದಡಿ ನಡೆದಿರುವ ಕಾಮಗಾರಿಗಳ ಗುಣಮಟ್ಟದ ಬಗ್ಗೆಯೂ ಪರಿಶೀಲನೆ ನಡೆಸಿತು.

ಬೆಳ್ಳೂರಿನಲ್ಲಿ ಚೇತನಾ ಕೇಂದ್ರ

ತಾಲೂಕಿನ ಬೆಳ್ಳೂರು ಸರ್ಕಾರಿ ಶಾಲೆಗೆ ಭೇಟಿ ನೀಡಿದ್ದ ಅಧಿಕಾರಿಗಳ ತಂಡ ಅಲ್ಲಿನ ಮಧ್ಯಾಹ್ನದ ಬಿಸಿಯೂಟ ನಿರ್ವಹಣೆ, ಶಾಲಾ ಆಟದ ಮೈದಾನ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿತು. ಇದೇ ಸಂದರ್ಭದಲ್ಲಿ ಸರ್ಕಾರಿ ಶಾಲೆಯ ಮೊದಲ ಮಹಡಿಯಲ್ಲಿ ವಯಸ್ಕರ ಶಿಕ್ಷಣದ ಸಾಮಾಜಿಕ ಚೇತನಾ ಕೇಂದ್ರಕ್ಕೂ ಚಾಲನೆ ನೀಡಿ ಮಾತನಾಡಿದ ಅ‍ವರು, ಇದು ಅನಕ್ಷರರಿಗೆ ಅಕ್ಷರ ಕಲಿಸುವುದರ ಜತೆಗೆ ಉದ್ಯೋಗ ಕೇಂದ್ರವಾಗಿ, ಹಣಕಾಸು ಕೇಂದ್ರವಾಗಿ, ಸ್ವಯಂ ಉದ್ಯೋಗ ಗುಂಪುಗಳಿಗೆ ಆಸರೆಯಾಗಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.

ತಾಲ್ಲೂಕಿನ ನರಸಾಪುರ ಕೆಪಿಎಸ್‌ಶಾಲೆಗೆ ಭೇಟಿ ನೀಡಿದ್ದ ಅಧಿಕಾರಿಗಳ ತಂಡ ಕೇಂದ್ರ ಸರ್ಕಾರದ ಯೋಜನೆಯ ಬಿಸಿಯೂಟ ನಿರ್ವಹಣೆ, ಅಟಲ್ ಟಿಂಕರಿಂಗ್ ಲ್ಯಾಬ್, ಆಟೋ ಮೊಬೈಲ್, ಐಟಿ ಲ್ಯಾಬ್, ಆಟದ ಮೈದಾನ ವೀಕ್ಷಿಸಿತು. ಎಲ್‌ಕೆಜಿಯಿಂದ ೧೦ನೇ ತರಗತಿ ಮಕ್ಕಳಲ್ಲಿನ ಓದುವ, ಬರವಣಿಗೆ ಕೌಶಲ್ಯದ ಕುರಿತು ಗಮನಹರಿಸಿ, ಕೇಂದ್ರ ಯೋಜನೆಗಳ ಜಾರಿಯಿಂದ ಆಗಿರುವ ಶೈಕ್ಷಣಿಕ ಪ್ರಗತಿ, ದಾಖಲಾತಿ ಪ್ರಗತಿಯ ಕುರಿತು ಪರಿಶೀಲನೆ ನಡೆಸಿ, ಹೆಣ್ಣು ಮಕ್ಕಳ ಶೈಕ್ಷಣಿಕ ಪ್ರಗತಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಶೈಕ್ಷಣಿಕ ಪ್ರಗತಿ ಪರಿಶೀಲನೆ

ಶಾಲಾ ಸ್ವಚ್ಛತೆ, ಶೌಚಾಲಯ, ಕುಡಿಯುವ ನೀರಿನ ನಿರ್ವಹಣೆ, ಆಂಗ್ಲ ಮಾಧ್ಯಮ ಮಕ್ಕಳ ಶೈಕ್ಷಣಿಕ ಪ್ರಗತಿ ಮತ್ತಿತರವುಗಳ ಕುರಿತು ಪರಿಶೀಲನೆ ನಡೆಸಿದರು. ಕೆಪಿಎಸ್ ಶಾಲೆಯ ಪ್ರಾಥಮಿಕ ವಿಭಾಗಕ್ಕೆ ಆಗಮಿಸಿದ ಕೇಂದ್ರ ಅಧಿಕಾರಿಗಳ ತಂಡ, ಎಲ್‌ಕೆಜಿಯಿಂದ ೭ನೇ ತರಗತಿವರೆಗಿನ ಮಕ್ಕಳ ಶೈಕ್ಷಣಿಕ ಪ್ರಗತಿ ಪರಿಶೀಲನೆ ನಡೆಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಡಿಎಸ್‌ಆರ್‌ಟಿ ರಾಜ್ಯ ನಿರ್ದೇಶಕಿ ಸುಮಂಗಲ, ಎಸ್‌ಎಸ್‌ಕೆ ನಿರ್ದೇಶಕ ಮಾದೇಗೌಡ, ಎಸ್‌ಎಸ್‌ಕೆ ಹಿರಿಯ ಕಾರ್ಯಕ್ರಮ ಅಧಿಕಾರಿ ಕೆ.ಎಂ.ಜಯರಾಮರೆಡ್ಡಿ, ಡಿಡಿಪಿಐ ಕೃಷ್ಣಮೂರ್ತಿ, ಡಯಟ್ ಪ್ರಾಂಶುಪಾಲ ಕೆ.ಎನ್.ಜಯಣ್ಣ, ಬಿಇಒ ಕನ್ನಯ್ಯ, ಅಕ್ಷರದಾಸೋಹ ಶಿಕ್ಷಣಾಧಿಕಾರಿ ತಿಮ್ಮರಾಯಪ್ಪ, ಎವೈಪಿಸಿ ಮೋಹನ್‌ಬಾಬು, ಬಿಸಿಯೂಟ ಸಹಾಯಕ ನಿರ್ದೇಶಕ ಸುಬ್ರಮಣಿ, ಕ್ಷೇತ್ರ ಸಮನ್ವಯಾಧಿಕಾರಿ ಪ್ರವೀಣ್ ಇದ್ದರು.

Share this article