ಕನ್ನಡಪ್ರಭ ವಾರ್ತೆ ಮಂಡ್ಯ
ಆತಿಥ್ಯಕ್ಕೆ ಹೆಸರಾಗಿರುವ ಮಂಡ್ಯ. ದೇಶ, ವಿದೇಶಗಳಿಂದ ಹಾಗೂ ರಾಜ್ಯದ ನಾನಾ ಭಾಗಗಳಿಂದ ಆಗಮಿಸುವ ಗಣ್ಯರು, ನೋಂದಾಯಿತ ಪ್ರತಿನಿಧಿಗಳು ಹಾಗೂ ಸಾಹಿತ್ಯಾಸಕ್ತರ ವಾಸ್ತವ್ಯಕ್ಕೆ ಈಗಾಗಲೇ ಹೋಟೆಲ್, ಲಾಡ್ಜ್, ವಸತಿ ನಿಲಯಗಳು, ಕಲ್ಯಾಣ ಮಂಟಪಗಳು ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಬಳಸಿಕೊಳ್ಳಲಾಗುತ್ತಿದೆ.
ಅಂದಾಜು 10ರಿಂದ 15 ಸಾವಿರದಷ್ಟು ಗಣ್ಯರು, ಜನಪ್ರತಿನಿಧಿಗಳು, ಮಾಧ್ಯಮ ಮಿತ್ರರು ಹಾಗೂ ಕನ್ನಡ ಪ್ರೇಮಿಗಳು ನುಡಿ ಹಬ್ಬಕ್ಕೆ ಆಗಮಿಸುವ ನಿರೀಕ್ಷೆಯಿದ್ದು, ಇವರ ವಾಸ್ತವಕ್ಕಾಗಿ ಹೋಟೆಲ್, ಲಾಡ್ಜ್ ಮತ್ತು ಕಲ್ಯಾಣ ಮಂಟಪಗಳನ್ನು ಮುಂಗಡವಾಗಿ ಕಾಯ್ದಿರಿಸಲಾಗಿದೆ. ಉತ್ತಮ ರೀತಿಯ ಶೌಚಾಲಯ ವ್ಯವಸ್ಥೆ ಜೊತೆಗೆ ನೀರಿನ ಸಮಸ್ಯೆ ಉಂಟಾಗದ ರೀತಿಯಲ್ಲಿ ಕ್ರಮವಹಿಸಲು ಜಿಲ್ಲಾಡಳಿತ ಈಗಾಗಲೇ ಕಾರ್ಯಪ್ರವೃತ್ತವಾಗಿದೆ.ಮಂಡ್ಯ, ಮದ್ದೂರು ಮತ್ತು ಶ್ರೀರಂಗಪಟ್ಟಣದಲ್ಲಿನ 30 ಕಲ್ಯಾಣ ಮಂಟಪಗಳು, 16 ಸಮುದಾಯ ಭವನಗಳು, 37 ವಸತಿ ನಿಲಯಗಳಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಲಾಗುತ್ತಿದೆ. ಇದರ ಜೊತೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲೂ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ವಾಸ್ತವ್ಯದ ಸ್ಥಳದ ಲೊಕೇಷನ್ ಸಹ ಒಳಗೊಂಡ ಸಂಪೂರ್ಣ ಮಾಹಿತಿಯನ್ನು ನೋಂದಾಯಿತ ಪ್ರತಿನಿಧಿಗಳ ಮೊಬೈಲ್ ಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಎ, ಬಿ ಮತ್ತು ಸಿ ಶ್ರೇಣಿಯಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಎಲ್ಲಿಯೂ ಯಾರಿಗೂ ತೊಂದರೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳು ಮತ್ತು ಸಿಬ್ಬಂದಿ ತಂಡ ಅಣಿಯಾಗಿದೆ.
ಎಲ್ಲಿಯೂ ಆಹಾರ, ವಸತಿ, ಶೌಚಾಲಯದ ವ್ಯವಸ್ಥೆಯಲ್ಲಿ ಚ್ಯುತಿ ಬಾರದ ರೀತಿಯಲ್ಲಿ ಕ್ರಮಕೈಗೊಳ್ಳಲು ಮುಂದಾಗಿದೆ. ಅತಿಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಹೆಲ್ತ್ ಡೆಸ್ಕ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಹ ಸ್ಥಾಪಿಸಲಾಗುತ್ತಿದೆ.
ಮಂಡ್ಯದ ಜನ ಹೃದಯ ಶ್ರೀಮಂತಿಕೆ, ಆತಿಥ್ಯಕ್ಕೆ ಹೆಸರುವಾಸಿ. ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವವರಿಗೆ ಉಳಿದುಕೊಳ್ಳಲು ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸಮ್ಮೇಳನಕ್ಕೆ ಆಗಮಿಸುವ ಎಲ್ಲರನ್ನೂ ಗೌರವದಿಂದ ಕಾಣಲಾಗುವುದು. ವಾಸ್ತವ್ಯಕ್ಕೆ ಏನೂ ತೊಂದರೆ ಆಗದ ರೀತಿಯಲ್ಲಿ ನೋಡಿಕೊಳ್ಳಲಾಗುವುದು. ಈಗಾಗಲೇ ಹೋಟೆಲ್, ಲಾಡ್ಜ್ ಗಳನ್ನು ಬುಕ್ ಮಾಡಲಾಗಿದೆ. ಸರ್ಕಾರ, ಜಿಲ್ಲಾಡಳಿತ, ಕಸಾಪ ಒಗ್ಗೂಡಿ ಕೆಲಸ ಮಾಡುತ್ತಿದೆ. ಮಂಡ್ಯ ಸಾಹಿತ್ಯ ಸಮ್ಮೇಳನ ಇತಿಹಾಸದ ಪುಟದಲ್ಲಿ ದಾಖಲಾಗುವ ರೀತಿಯಲ್ಲಿ ನೋಡಿಕೊಳ್ಳಲಾಗುವುದು.