ಗ್ರಾಮಸಭೆಗಳಲ್ಲಿ ಅಧಿಕಾರಿಗಳು ಗೈರಾದರೆ ಸೂಕ್ತ ಕ್ರಮ: ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಬಸವರಾಜ್ ಎಚ್ಚರಿಕೆ

KannadaprabhaNewsNetwork |  
Published : Oct 11, 2024, 11:47 PM IST
ಸಿದ್ದಾಪುರ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆ ಜರುಗಿತು. | Kannada Prabha

ಸಾರಾಂಶ

ತಾಲೂಕಿನಲ್ಲಿ ೨೧೦೦ ಹೆಕ್ಟೇರ್ ಅಡಕೆ ತೋಟಗಳಿಗೆ ಎಲೆಚುಕ್ಕೆ ರೋಗ ಬಾಧಿಸಿದೆ. ೨೬೦೦ ಹೆಕ್ಟೇರ್ ಪ್ರದೇಶಕ್ಕೆ ಕೊಳೆರೋಗ ವ್ಯಾಪಿಸಿದೆ.

ಸಿದ್ದಾಪುರ: ಇತ್ತೀಚೆಗೆ ಗ್ರಾಮಸಭೆಗಳಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಗೈರಾಗುತ್ತಿರುವುದು ಗಮನಕ್ಕೆ ಬಂದಿದ್ದು, ಈ ರೀತಿ ಮುಂದುವರಿದರೆ ಸೂಕ್ತ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಆಡಳಿತಾಧಿಕಾರಿ ಬಸವರಾಜ್ ಪಿ. ತಿಳಿಸಿದರು.ಗುರುವಾರ ಪಟ್ಟಣದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೃಷಿ ಅಧಿಕಾರಿ ಪ್ರಶಾಂತ್ ಜಿ.ಎಸ್. ವಿವರ ನೀಡಿ, ತಾಲೂಕಿನಲ್ಲಿ ಅ. ೯ರ ವರೆಗೆ ೪,೫೧೫ ಮಿಮೀ ಮಳೆಯಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇ. ೫೭ಕ್ಕೂ ಹೆಚ್ಚು ಮಳೆಯಾದಂತಾಗಿದೆ. ಇದರ ಪರಿಣಾಮ ಕಂದುಬಣ್ಣದ ಗೆಜ್ಜೆ ಹುಳುಗಳು ಗದ್ದೆಗಳಿಗೆ ಹಾನಿ ಉಂಟು ಮಾಡುತ್ತಿದ್ದು, ರೈತರು ಗೊಂದಲಕ್ಕೀಡಾಗಿದ್ದಾರೆ ಎಂದರು.ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಅರುಣ ಮಾತನಾಡಿ, ತಾಲೂಕಿನಲ್ಲಿ ೨೧೦೦ ಹೆಕ್ಟೇರ್ ಅಡಕೆ ತೋಟಗಳಿಗೆ ಎಲೆಚುಕ್ಕೆ ರೋಗ ಬಾಧಿಸಿದೆ. ೨೬೦೦ ಹೆಕ್ಟೇರ್ ಪ್ರದೇಶಕ್ಕೆ ಕೊಳೆರೋಗ ವ್ಯಾಪಿಸಿದೆ. ಇದರಿಂದ ಅಡಕೆ ಬೆಳೆಗಾರರು ಆತಂಕಕ್ಕೊಳಗಾಗಿದ್ದಾರೆ. ಎಲೆಚುಕ್ಕೆ ನಿಯಂತ್ರಣಕ್ಕೆ ಹಲವು ಪ್ರದೇಶಗಳಲ್ಲಿ ಮಾಹಿತಿ ಕಾರ್ಯಾಗಾರಗಳನ್ನು ಏರ್ಪಡಿಸಿ ರೈತರಿಗೆ ಮಾಹಿತಿ ನೀಡಲಾಗಿದೆ. ಹನಿ ನೀರಾವರಿಗೆ ಸಾಮಾನ್ಯ ವರ್ಗದವರಿಗೂ ಶೇ. ೯೦ರಷ್ಟು ಸಹಾಯಧನ ಇದ್ದು, ರೈತರು ಅದರ ಉಪಯೋಗ ಪಡೆದುಕೊಳ್ಳಬೇಕು ಎಂದರು. ಪಶು ವೈದ್ಯಾಧಿಕಾರಿ ವಿವೇಕಾನಂದ ಹೆಗಡೆ ಮಾತನಾಡಿ, ಸೆಪ್ಟೆಂಬರ್ ತಿಂಗಳಿನಲ್ಲಿ ರೇಬಿಸ್ ಲಸಿಕಾ ಅಭಿಯಾನವನ್ನು ಹಮ್ಮಿಕೊಂಡಿದ್ದು, ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಲಸಿಕಾ ಅಭಿಯಾನವನ್ನು ನಡೆಸಿ ನಾಯಿಗಳಿಗೆ ರೇಬಿಸ್ ಲಸಿಕೆ ನೀಡಿದ್ದೇವೆ. ಮಕ್ಕಳಲ್ಲಿ ರೇಬಿಸ್ ರೋಗದ ಜಾಗೃತಿ ಮೂಡಿಸಲು ಎಲ್ಲ ಶಾಲೆಗಳಿಗೆ ಹೋಗಿ ಮಾಹಿತಿ ನೀಡಲಾಗಿದೆ ಎಂದರು. ಪಟ್ಟಣ ಪ್ರದೇಶಗಳಲ್ಲಿ ಮತ್ತು ಗ್ರಾಮಗಳಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಪಟ್ಟಣ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳು ಬೀದಿನಾಯಿಗಳ ನಿಯಂತ್ರಣಕ್ಕೆ ಅನುದಾನ ಮೀಸಲಿಟ್ಟು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಡಳಿತ ಅಧಿಕಾರಿ ಬಸವರಾಜ್ ಸಲಹೆ ನೀಡಿದರು. ಸಭೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ದೇವರಾಜ್ ಹಿತ್ತಲಕೊಪ್ಪ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ