ಕನ್ನಡಪ್ರಭ ವಾರ್ತೆ ವಿಜಯಪುರ
ಜಿಲ್ಲೆಯ ವಾಣಿಜ್ಯ, ಕೈಗಾರಿಕೆ ಮತ್ತು ವ್ಯವಹಾರ ಉದ್ಯಮಗಳು, ಟ್ರಸ್ಟ್‌ಗಳು, ಸಮಾಲೋಚನಾ ಕೇಂದ್ರಗಳು, ಆಸ್ಪತ್ರೆಗಳು, ಪ್ರಯೋಗಾಲಯ, ಮನೋರಂಜನಾ ಕೇಂದ್ರಗಳು ಮತ್ತು ಹೊಟೇಲ್ ಸೇರಿದಂತೆ ಅಂಗಡಿ ಮುಂಗಟ್ಟುಗಳಲ್ಲಿ ಕನ್ನಡ ಭಾಷೆಯ ಶೇ.60ರಷ್ಟು ಕನ್ನಡ ನಾಮಪಲಕ ಅಳವಡಿಸುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾಡಳಿತ ಮುಂದಾಗಿದೆ. ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ನೇತೃತ್ವದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಕನ್ನಡಪರ ಸಂಘಟನೆಗನ್ನು ಒಳಗೊಂಡು ಸಂಘ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ರಾಜ್ಯೋತ್ಸವದ ಅಂಗವಾಗಿ ನಗರದ ವಿವಿಧ ಅಂಗಡಿಗಳಿಗೆ ತೆರಳಿ ಕಡ್ಡಾಯವಾಗಿ ಕನ್ನಡದಲ್ಲಿ ಶೇ.60 ರಷ್ಟು ನಾಮಫಲಕಗಳನ್ನು ಅಳವಡಿಸುವ ಕುರಿತು ಜಾಗೃತಿ ಮೂಡಿಸಿದರು.ನಗರದ ಬಿಎಲ್‌ಡಿಇ ಆಸ್ಪತ್ರೆ ಆವರಣದಿಂದ ಜಾಗೃತಿ ಅಭಿಯಾನ ಆರಂಭವಾಗಿ ಗಾಂಧಿ ವೃತ್ತದವರೆಗೂ ನಡೆಯಿತು. ಸರ್ಕಾರದ ಆದೇಶದಂತೆ ಅಂಗಡಿ ಮುಂಗಟ್ಟುಗಳ ಮೇಲೆ ಕಡ್ಡಾಯವಾಗಿ ಕನ್ನಡ ನಾಮ ಫಲಕಗಳನ್ನು ಅಳವಡಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು. ನಾಮಫಲಕಗಳು ಶೇ.60 ರಷ್ಟು ಕನ್ನಡ ಭಾಷೆಯಲ್ಲಿರಬೇಕು, ಶೇ.40 ರಷ್ಟು ಉಳಿದ ಭಾಷೆಗಳನ್ನು ಬಳಸಬಹುದಾಗಿದ್ದು, ಇದನ್ನು ಅಕ್ಟೋಬರ್ 31ರೊಳಗೆ ಅನುಷ್ಠಾನಕ್ಕೆ ತರಬೇಕೆಂದು ತಿಳಿಸಲಾಯಿತು. ಕನ್ನಡದಲ್ಲಿ ನಾಮಫಲಕವಿರದ ಅಂಗಡಿ, ಸಂಸ್ಥೆಗಳ ಮೇಲೆ ಕ್ರಮ ವಹಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ನಾಮಫಲಕಗಳಲ್ಲಿ ಕನ್ನಡವನ್ನು ಶೇ.60ಕ್ಕೂ ಹೆಚ್ಚು ಬಳಸಿದ ಅಂಗಡಿ ಮಾಲೀಕರನ್ನು ಅಭಿನಂದಿಸಲಾಯಿತು.ಈ ವೇಳೆ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ, ಡಿಹೆಚ್‌ಒ ಸಂಪತ್ತ ಗುಣಾರಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಿವಾನಂದ ಮಾಸ್ತಿಹೋಳಿ, ಜಿಪಂ ಮುಖ್ಯ ಯೋಜನಾಧಿಕಾರಿ ಸಿ.ಬಿ.ಕುಂಬಾರ, ಅಧಿಕಾರಿಗಳಾದ ಶಿವನಗೌಡ ಪಾಟೀಲ, ಮಹಾವೀರ ಬೋರಣ್ಣವರ, ನಾರಾಯಣಪ್ಪ ಕುರುಬರ, ಮಹೇಶ ಪೋತದಾರ, ಶಿವಾನಂದ ಗೂಗವಾಡ, ಪುಂಡಲಿಕ ಮಾನವರ, ಉಮಾಶ್ರೀ ಕೋಳಿ, ಸಿದ್ದಪ್ಪ ಬಿಂಜಗೇರಿ, ವಿನಯಕುಮಾರ ಪಾಟೀಲ, ರಾಜಶೇಖರ ದೈವಾಡಿ, ಸಂತೋಷ ಭೋವಿ, ಶಿರಸ್ತೇದಾರ ಸಲೀಂ ಬಿಜಾಪೂರ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯೆ ದ್ರಾಕ್ಷಾಯಿಣಿ ಹುಡೇದ, ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಕರವೇ ಪದಾಧಿಕಾರಿಗಳಾದ ಎಂ.ಸಿ.ಮುಲ್ಲಾ, ಫಯಾಜ ಕಲಾದಗಿ, ಅಭಿಷೇಕ ಚಕ್ರವರ್ತಿ ವಿವಿಧ ಇಲಾಖೆಗಳ ಅಧಿಕಾರಿಗಳು, ವಿವಿಧ ಕನ್ನಡಪರ ಸಂಘಟನೆಯ ಸದಸ್ಯರು, ಮುಖಂಡರು ಉಪಸ್ಥಿತರಿದ್ದರು.