ಏತ ನೀರಾವರಿ ಯೋಜನೆಗಳಿಗೆ ಅನುಮೋದನೆ : ಸಚಿವ ಎಸ್ ಮಧು ಬಂಗಾರಪ್ಪ

KannadaprabhaNewsNetwork | Published : Jul 3, 2025 11:48 PM
ಪೊಟೊ: 03ಎಸ್‌ಎಂಜಿಕೆಪಿ06ಶಿವಮೊಗ್ಗ ನಗರದ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಗುರುವಾರ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪನವರು ಸಾರ್ವಜನಿಕರ ಆಹವಾಲು ಸ್ವೀಕರಿಸಿದರು.  | Kannada Prabha

ಸಾರಾಂಶ

ನಂದಿಬೆಟ್ಟದಲ್ಲಿ ಜು.2 ರಂದು ನಡೆದ ಐತಿಹಾಸಿಕ ಸಚಿವ ಸಂಪುಟ ಸಭೆಯಲ್ಲಿ ಜಿಲ್ಲೆಗೆ 307.80 ಕೋಟಿ ಮೊತ್ತದ ಏತ ನೀರಾವರಿ ಯೋಜನೆಗಳ ಕಾಮಗಾರಿಗಳಿಗೆ ಆಡಳಿತಾತ್ಮ ಅನುಮೋದನೆ ದೊರೆತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನಂದಿಬೆಟ್ಟದಲ್ಲಿ ಜು.2 ರಂದು ನಡೆದ ಐತಿಹಾಸಿಕ ಸಚಿವ ಸಂಪುಟ ಸಭೆಯಲ್ಲಿ ಜಿಲ್ಲೆಗೆ 307.80 ಕೋಟಿ ಮೊತ್ತದ ಏತ ನೀರಾವರಿ ಯೋಜನೆಗಳ ಕಾಮಗಾರಿಗಳಿಗೆ ಆಡಳಿತಾತ್ಮ ಅನುಮೋದನೆ ದೊರೆತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸೊರಬ ತಾಲೂಕಿನ ದಂಡಾವತಿ ಡ್ಯಾಂ ಮಾರ್ಪಡಿತ ಯೋಜನೆ ಕಾಮಗಾರಿಗಳಿಗೆ ಅನುಮೋದನೆ ದೊರೆತಿದ್ದು, ಯಾವುದೇ ರೈತರ ಜಮೀನು ಹಾಗೂ ಮನೆಗಳನ್ನು ಮುಳುಗಡೆಗೊಳಿಸದೇ ವಿನ್ಯಾಸಗೊಳಿಸಲಾಗಿದೆ ಎಂದು ತಿಳಿಸಿದರು.

ಸೊರಬ ತಾಲೂಕಿನ ಯಡಗೊಪ್ಪ ಗ್ರಾಮದ ಹತ್ತಿರ ದಂಡಾವತಿ ನದಿಗೆ 38.50 ಕೋಟಿ ರು. ವೆಚ್ಚದಲ್ಲಿ ಬ್ಯಾರೇಜ್ ನಿರ್ಮಿಸಿ 15 ಕೆರೆಗಳನ್ನು ತುಂಬಿಸುವ ಯೋಜನೆ, ದಂಡಾವತಿ ಮತ್ತು ವರದಾ ನದಿಗಳಿಗೆ ಅಡ್ಡಲಾಗಿ 54.70 ಕೋಟಿ ರು. ವೆಚ್ಚದಲ್ಲಿ ಬ್ಯಾರೇಜ್ /ಬ್ರಿಡ್ಜ್ ಕಂ ಬ್ಯಾರೇಜ್‌ಗಳನ್ನು ನಿರ್ಮಿಸುವ ಯೋಜನೆ, ಗುಡವಿ ಗ್ರಾಮದ ಹತ್ತಿರ ವರದಾ ನದಿಗೆ ಅಡ್ಡಲಾಗಿ 75.60 ಕೋಟಿ ರು. ವೆಚ್ದದಲ್ಲಿ ಬ್ಯಾರೇಜ್ ನಿರ್ಮಿಸಿ 0.1017 ಟಿಎಂಸಿ ನೀರನ್ನೆತ್ತಿ 32 ಕೆರೆಗಳನ್ನು ತುಂಬಿಸುವ ಯೋಜನೆಗೆ ಅನುಮೋದನೆ ದೊರೆತಿದೆ ಎಂದು ತಿಳಿಸಿದರು.

ಭದ್ರಾವತಿ ತಾಲೂಕಿನ ಗೋಣಿಬೀಡು ಗ್ರಾಮದ ಹತ್ತಿರ 54 ಕೋಟಿ ರು. ಅಂದಾಜು ವೆಚ್ಚದಲ್ಲಿ ಭದ್ರಾ ನದಿಯಿಂದ 0.19 ಟಿಎಂಸಿ ನೀರನ್ನು ಕಂಬದಾಳ್ ಹೊಸೂರು ಸಿಂಗನಮನೆ, ಗ್ಯಾರೇಜ್ ಕ್ಯಾಂಪ್, ಶಂಕರಘಟ್ಟ, ಹುಣಸೆಕಟ್ಟೆ, ಗೋಣಿಬೀಡು, ತಮ್ಮಡಿಹಳ್ಳಿ, ರಾಮಿನಕೊಪ್ಪ ಮತ್ತು ಸುತ್ತಮುತ್ತಲಿನ ಗ್ರಾಮಗಳ 2 ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ಭದ್ರಾವತಿ ಪಟ್ಟಣದ ಭದ್ರಾನದಿ ಎಡ ಮತ್ತು ಬಲದಂಡೆಯ ಪ್ರಹಾಹ ಪೀಡಿತ ಪ್ರದೇಶಗಳನ್ನು ರಕ್ಷಿಸಲು 50 ಕೋಟಿ ರು. ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿ ಹಾಗೂ 35 ಕೋಟಿ ರು. ವೆಚ್ಚದಲ್ಲಿ ಭದ್ರಾ ನದಿಗೆ ಅಡ್ಡಲಾಗಿ ರಸ್ತೆ ಸೇತುವೆ ನಿರ್ಮಾಣ ಮತ್ತು ಡೊಣಬಘಟ್ಟ, ಕಾಗೆಕೊಡುಮಗ್ಗೆ, ಹೊಳೆಹೊನ್ನೂರು ಗ್ರಾಮದ ಭದ್ರಾವತಿ ಮುಖ್ಯ ರಸ್ತೆ ನಡುವೆ ಸಂಪರ್ಕ ರಸ್ತೆ ಕಾಮಗಾರಿಗೆ ಅನುಮೋದನೆ ದೊರೆತಿದ್ದು, ಇನ್ನು ಒಂದೂವರೆ ವರ್ಷದೊಳಗೆ ಈ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದರು.

ಕುಡಿಯುವ ನೀರಿನ ಯೋಜನೆಗೆ ಅಂದಾಜು ಪಟ್ಟಿ ಸಲ್ಲಿಕೆ:

ಸೊರಬ ತಾಲೂಕಿನಲ್ಲಿ 561 ಕೋಟಿ ರು. ಮೊತ್ತದಲ್ಲಿ ಕುಡಿಯುವ ನೀರು ಯೋಜನೆಗಳಿಗೆ ಅಂದಾಜು ಪಟ್ಟಿ ಸಿದ್ದಪಡಿಸಿದ್ದು, ಮುಂದಿನ ದಿನಗಳಲ್ಲಿ ಅನುಮೋದನೆ ಪಡೆಯಲಾಗುವುದು.

ಚಂದ್ರಗುತ್ತಿ ಪ್ರಾಧಿಕಾರ ರಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ದೇವಸ್ಥಾನದ ಅಭಿವೃದ್ಧಿಗಾಗಿ ೨೦ ಎಕರೆ ಜಮೀನು ಹಸ್ತಾಂತರಗೊಂಡಿದೆ. ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಹಾಗೂ ಜಿಲ್ಲಾ ಕ್ರೀಡಾ ಅಭಿವೃದ್ಧಿಗೆ ವಿವಿಧ ಕಾಮಗಾರಿಗಳ ಕುರಿತು ಜಿಲ್ಲಾಧಿಕಾರಿಗಳು ಹಾಗೂ ವಿವಿಧ ಪ್ರತಿನಿಧಿಗಳೊಂದಿಗೆ ಜೂ.27 ರಂದು ಸಭೆ ನಡೆಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದ್ದೇನೆ. ನೆಹರು ಕ್ರೀಡಾಂಗಣದ ಸಮಗ್ರ ಅಭಿವೃದ್ಧಿಗೆ 16.25 ಕೋಟಿ ಸೇರಿದಂತೆ ಒಟ್ಟಾರೆ ಜಿಲ್ಲೆಯ ಸಮಗ್ರ ಕ್ರೀಡಾಭಿವೃದ್ಧಿಗೆ 32.25 ಕೋಟಿಗಳ ಪ್ರಸ್ತಾವನೆಯನ್ನು ಪಡೆಯಲಾಗಿದೆ ಎಂದರು.

ಪಿಯುಸಿ ಪರೀಕ್ಷೆ ಫಲಿತಾಂಶ ಉತ್ತಮ :

ಈ ಬಾರಿ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಕ್ರೋಢೀಕೃತ ಫಲಿತಾಂಶ ಶೇ.79.81 ಹಾಗೂ ಹೊಸಬರ ಫಲಿತಾಂಶ ಶೇ.85.19 ಫಲಿತಾಂಶ ದೊರೆತಿದೆ. ಪಿಯುಸಿ ಮೂರನೇ ಪರೀಕ್ಷೆಗೆ ಒಟ್ಟು 1,11,002 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 22,446 ಅಂದರೆ ಶೇ.20.22ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಹಾಜರಾತಿ ಮತ್ತು ಉತ್ತೀರ್ಣದ ಸಂಖ್ಯೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಗಣನೀಯ ಏರಿಕೆಯಾಗಿದೆ. ಅಂಕ ಸುಧಾರಣೆಗೆ 17,398 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದು, 11,937 ವಿದ್ಯಾರ್ಥಿಗಳು ತಮ್ಮ ಅಂಕ ಹೆಚ್ಚಿಸಿಕೊಂಡಿದ್ದಾರೆ ಎಂದರು.

ಗೋಷ್ಠಿಯಲ್ಲಿ ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎಸ್.ರವಿಕುಮಾರ್, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಚಂದ್ರಭೂಪಾಲ್, ಮಾಜಿ ವಿಧಾನ ಪರಿಷತ್ ಶಾಸಕರಾದ ಆಯನೂರು ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್ ಪ್ರಸನ್ನಕುಮಾರ್, ಮುಖಂಡರಾದ ಜಿ.ಡಿ ಮಂಜುನಾಥ್, ರಮೇಶ್ ಶಂಕರಘಟ್ಟ, ಬಿ.ಎ ರಮೇಶ್ ಹೆಗಡೆ, ಚೇತನ್, ಮಧುಸೂದನ್, ಕಲೀಂ ಪಾಶಾ ಇತರೆ ಮುಖಂಡರು ಹಾಜರಿದ್ದರು.

-----------------------

ಶರಾವತಿ ಮುಳುಗಡೆ ಸಂತ್ರಸ್ತರಿಗೆ ನ್ಯಾಯ ಒದಗಿಸಲು ನಿರಂತರವಾಗಿ ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದ್ದು, ಇದೀಗ ಅಡ್ವೊಕೇಟ್ ಜನರಲ್ ಅವರೊಂದಿಗೆ ಸಭೆ ನಡೆಸಿ, ಸುಮಾರು 1800 ಕ್ಕೂ ಹೆಚ್ಚು ದಾಖಲಾತಿಗಳನ್ನು ಸಲ್ಲಿಸಲಾಗಿದೆ. ಹಂತ ಹಂತವಾಗಿ ಸಂತ್ರಸ್ತರಿಗೆ ಸಂಪೂರ್ಣ ನ್ಯಾಯ ಒದಗಿಸಲಾಗುವುದು.

-ಮಧು ಬಂಗಾರಪ್ಪ, ಜಿಲ್ಲಾ ಉಸ್ತುವಾರಿ ಸಚಿವ.

ಸಾರ್ವಜನಿಕರಿಂದ ಅಹವಾಲು ಸ್ವೀಕಾರ

ಶಿವಮೊಗ್ಗ: ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪನವರು ಸಾರ್ವಜನಿಕರ ಆಹವಾಲು ಸ್ವೀಕರಿಸಿದರು. ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಿದರೆ, ಕೆಲವು ಅರ್ಜಿಗಳನ್ನು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಹಸ್ತಾಂತರಿಸಿ ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಿದರು. ಪತ್ರಿಕಾಗೋಷ್ಠಿಯ ನಂತರ ಸಾರ್ವಜನಿಕರಿಂದ ಸುಮಾರು 100 ಕ್ಕೂ ಹೆಚ್ಚು ಕುಂದು ಕೊರತೆಗಳ ಅಹವಾಲುಗಳನ್ನು ಸ್ವೀಕರಿಸಿದರು.

PREV