ಕನ್ನಡಪ್ರಭ ವಾರ್ತೆ ಬೈಲಹೊಂಗಲ ನಗರದ ದಿ. ಟಿಪ್ಪುಸುಲ್ತಾನ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿಯಲ್ಲಿ ಠೇವಣಿ ಇಟ್ಟಿದ್ದ ₹1.50 ಲಕ್ಷ ಹಣವನ್ನು ಅವಧಿ ಪೂರ್ಣಗೊಂಡಿದ್ದರೂ ಮರಳಿ ನೀಡದಿರುವುದನ್ನು ಖಂಡಿಸಿ, ಕುಟುಂಬಸ್ಥರು ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ನಗರದ ದಿ. ಟಿಪ್ಪುಸುಲ್ತಾನ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿಯಲ್ಲಿ ಠೇವಣಿ ಇಟ್ಟಿದ್ದ ₹1.50 ಲಕ್ಷ ಹಣವನ್ನು ಅವಧಿ ಪೂರ್ಣಗೊಂಡಿದ್ದರೂ ಮರಳಿ ನೀಡದಿರುವುದನ್ನು ಖಂಡಿಸಿ, ಕುಟುಂಬಸ್ಥರು ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.ಸಮಾಜ ಸೇವಕ ರಫೀಕ್ ಬಡೇಘರ, ಕಿತ್ತೂರು ಕರ್ನಾಟಕ ಸೇನೆಯ ಜಿಲ್ಲಾಧ್ಯಕ್ಷ ಶಿವಾನಂದ ಕೋಲಕಾರ ಮಾತನಾಡಿ, ಕಿಲ್ಲೇದಾರ ಗಲ್ಲಿಯ ನಿವಾಸಿ ಇಮ್ತಿಯಾಜ ಸುತಗಟ್ಟಿ ದೃಷ್ಟಿಹೀನರಾಗಿದ್ದು, ಮನೆಯ ಮುಂಭಾಗದಲ್ಲಿ ಸಣ್ಣ ಡಬ್ಬಿ ಇಟ್ಟು ಉಪಜೀವನ ನಡೆಸುತ್ತಿದ್ದಾರೆ. ಅವರ ಕುಟುಂಬದಲ್ಲಿ ಅಂಗವಿಕಲ ತಾಯಿ, ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ತಂಗಿ, ಪತ್ನಿ ಹಾಗೂ ಮೂರು ಪುತ್ರಿಯರು ಮತ್ತು ಒಬ್ಬ ಪುತ್ರ ಇದ್ದು, ಅಲ್ಪ ಆದಾಯದಲ್ಲೇ ಜೀವನ ಸಾಗಿಸುತ್ತಿದ್ದಾರೆ. ಈ ಕುರಿತು ನಗರಸಭೆಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಶಾಶ್ವತ ಪರಿಹಾರ ಸಿಕ್ಕಿಲ್ಲ ಎಂದು ಆರೋಪಿಸಿದರು.ಇದಲ್ಲದೇ ಮನೆ ನಿರ್ಮಾಣಕ್ಕಾಗಿ ಸೊಸೈಟಿಯಲ್ಲಿ ಠೇವಣಿ ಇಟ್ಟಿದ್ದ ಹಣವನ್ನು ಮರಳಿ ಪಡೆಯಲು ಅನೇಕ ಬಾರಿ ಮನವಿ ಮಾಡಿದರೂ ಸ್ಪಂದನೆ ಸಿಗಲಿಲ್ಲ. ನ್ಯಾಯಾಲಯದಿಂದ ಹಣ ವಾಪಸ್ಸು ನೀಡುವಂತೆ ಆದೇಶ ಬಂದಿದ್ದರೂ, ಸೊಸೈಟಿಯವರು ಅದನ್ನು ಪಾಲಿಸಿಲ್ಲ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಉಪವಿಭಾಗಾಧಿಕಾರಿ ಪ್ರವೀಣ ಜೈನ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಉಪವಿಭಾಗಾಧಿಕಾರಿ ಸಮಸ್ಯೆಯನ್ನು ಆಲಿಸಿ, ತಕ್ಷಣ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಇದರಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಹಿಂಪಡೆಯಲಾಯಿತು.
ಈ ಸಂದರ್ಭದಲ್ಲಿ ಕರುನಾಡ ರಕ್ಷಣಾ ವೇದಿಕೆ ರೈತ ಘಟಕದ ಉತ್ತರ ಕರ್ನಾಟಕ ರಾಜ್ಯಾಧ್ಯಕ್ಷ ಅಪ್ಪಾಸಾಹೇಬ ಲಕ್ಕುಂಡಿ, ಮಂಜುನಾಥ ಮರೆಶೆಟ್ಟಿ, ಶಿವಾನಂದ ಕುರಬೆಟ್ಟ, ರಿತೇಶ ಪಾಟೀಲ, ಆನಂದಗೌಡ ಪಾಟೀಲ, ನಾಗರಾಜ ಸಂಗೊಳ್ಳಿ, ಸೋಯೇಬ ಸಂಗೊಳ್ಳಿ, ಅಭಿಷೇಕ ಕಲಾಲ, ಹಮ್ಜೇಸಾಬ ನಂದಗಡ, ಸುಭಾನಿ ನಂದಗಡ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.