ಕನ್ನಡಪ್ರಭ ವಾರ್ತೆ ನಿಪ್ಪಾಣಿ
ವಿಎಸ್‌ಎಂ ಸೋಮಶೇಖರ ಆರ್.ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯ (ವಿಎಸ್‌ಎಂಎಸ್‌ಆರ್‌ಕೆಐಟಿ)ಕ್ಕೆ ಎಂಬಿಎ ಮತ್ತು ಎಂಸಿಎ ಪಿಜಿ ಕೋರ್ಸ್‌ಗಳಿಗೆ ಎಐಸಿಟಿಇಯಿಂದ ಅನುಮೋದನೆ ಸಿಕ್ಕಿದೆ. ಈ ಮೂಲಕ ಕೆಜಿಯಿಂದ ಪಿಜಿಯವರೆಗೆ ವಿದ್ಯಾದಾನ ಮಾಡುವ ಸಂಸ್ಥೆ ನಮ್ಮದಾಗಿದೆ ಎಂದು ಸ್ಥಳೀಯ ವಿದ್ಯಾ ಸಂವರ್ಧಕ ಮಂಡಳದ ಚೇರ್‌ಮನ್ ಚಂದ್ರಕಾಂತ ಕೋಠಿವಾಲೆ ಹೇಳಿದರು.ಸ್ಥಳೀಯ ವಿಎಸ್‌ಎಂಎಸ್‌ಆರ್‌ಕೆಐಟಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಡಿ ಬರುವ ಈ ಎಂಬಿಎ ಮತ್ತು ಎಂಸಿಎ ಕೋರ್ಸ್‌ಗಳನ್ನು ಸುಸಜ್ಜಿತ ನೂತನ ಕಟ್ಟಡದಲ್ಲಿ ನಡೆಸಲಾಗುವುದು. ಕಳೆದ ಅಕ್ಟೋಬರ್ 2024ರಲ್ಲಿ ಈ ಕಟ್ಟಡ ಉದ್ಘಾಟಿಸಲಾಗಿದೆ. ಗಡಿಭಾಗದ ನಮ್ಮ ಮಂಡಳದ ಎಲ್ಲ ಶೈಕ್ಷಣಿಕ ಅಂಗಸಂಸ್ಥೆಗಳಲ್ಲಿ ಸುಮಾರು 400 ಶಿಕ್ಷಕರು ವಿದ್ಯಾದಾನ ಮಾಡುತ್ತಿದ್ದು, ಸುಮಾರು 7 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಗಳು ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಕೇವಲ 18 ವಿದ್ಯಾರ್ಥಿಗಳಿಂದ ಆರಂಭಗೊಂಡ ನಮ್ಮ ವಿಎಸ್‌ಎಂಎಸ್‌ಆರ್‌ಕೆಐಟಿಯ ತಾಂತ್ರಿಕ ವಿಭಾಗಗಳಲ್ಲಿ ಇಂದು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ ನಡೆಸುತ್ತಿರುವುದನ್ನು ನೋಡಿ ಕೇಂದ್ರ ಸಚಿವ ಶ್ರೀ ನಿತೀನ ಗಡ್ಕರಿ ಅವರು ಸಂಸ್ಥೆಯನ್ನು ಶ್ಲಾಘಿಸಿದ್ದಾರೆ. ವಿಟಿಯೂದಿಂದ ನಮ್ಮ ಮಹಾವಿದ್ಯಾಲಯದಲ್ಲಿ ಗಣಿತ ಸಂಶೋಧನಾ ಕೇಂದ್ರಕ್ಕೂ ಅನುಮೋದನೆ ಸಿಕ್ಕಿದ್ದು ನಾಲ್ವರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.
ಕಳೆದ ಹಲವು ಸೆಮಿಸ್ಟರ್‌ನ 31 ವಿದ್ಯಾರ್ಥಿಗಳು ವಿಟಿಯೂ ಟಾಪ್ ನೂರರಲ್ಲಿ ಸ್ಥಾನ ಪಡೆದಿದ್ದಾರೆ. ಅವರಲ್ಲಿ ಮೆಕಾನಿಕಲ್ ವಿಭಾಗದ 7ನೇ ಸೆಮಿಸ್ಟರ್‌ನ ಸಾಕ್ಷಿ ಹಡಲಗೆ ಮತ್ತು ಸಿವಿಲ್ ವಿಭಾಗದ ಮೊದಲನೇ ಸೆಮಿಸ್ಟರ್‌ನ ಭೂಮಿ ಶೇಟಕೆ ವಿಟಿಯೂಗೆ ಪ್ರಥಮ ಬಂದಿದ್ದಾರೆ. ಟಾಪ್ ನೂರರಲ್ಲಿ ಬರುತ್ತಿರುವ ವಿದ್ಯಾರ್ಥಿಗಳಿಗೆ ವಿಎಸ್‌ಎಂದಿಂದ ವರ್ಷಕ್ಕೆ ಲಕ್ಷಾಂತರ ರುಪಾಯಿ ವಿಶೇಷ ನಗದು ಬಹುಮಾನ ರೂಪದಲ್ಲಿ ವಿತರಿಸಲಾಗುತ್ತಿದೆ. ನಮ್ಮ ತಾಂತ್ರಿಕ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಅವರಿಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.ಪ್ರಸಕ್ತ ಶೈಕ್ಷಣಿಕ ವರ್ಷದಿಂದ ವಿಎಸ್‌ಎಂ ಸ್ವತಂತ್ರ ಪದವಿಪೂರ್ವ ಮಹಾವಿದ್ಯಾಲಯವನ್ನೂ ಆರಂಭಿಸಲಾಗಿದೆ. ಈ ಮಹಾವಿದ್ಯಾಲಯಕ್ಕೂ ಸುಸಜ್ಜಿತವಾದ ಸ್ವತಂತ್ರ ಕಟ್ಟಡ ನಿರ್ಮಿಸಲಾಗಿದೆ. ವಿಶೇಷವೆಂದರೆ ಮಹಾವಿದ್ಯಾಲಯಕ್ಕೆ ಅನುಮತಿ ಸಿಕ್ಕ ತಕ್ಷಣ ದಾಖಲಾತಿ ಪೂರ್ಣಗೊಂಡಿವೆ ಎಂದರು. ಈ ಸಂದರ್ಭದಲ್ಲಿ ವೈಸ್ ಚೇರಮನ್ ಪಪ್ಪು ಪಾಟೀಲ, ಕಾರ್ಯದರ್ಶಿ ಸಮೀರ ಬಾಗೇವಾಡಿ, ನಿರ್ದೇಶಕ ಸಂಜಯ ಮೊಳವಾಡೆ, ಸಚಿನ ಹಾಲಪ್ಪನವರ, ಅವಿನಾಶ ಪಾಟೀಲ, ರುದ್ರಕುಮಾರ ಕೋಠಿವಾಲೆ, ಸಂಜಯ ಶಿಂತ್ರೆ, ಸಿಇಒ ಡಾ.ಸಿದ್ಧಗೌಡ ಪಾಟೀಲ, ಪ್ರಾಚಾರ್ಯ ಡಾ.ಉಮೇಶ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.