ಕನ್ನಡಪ್ರಭ ವಾರ್ತೆ ರಾಮನಗರ
ನಗರದಲ್ಲಿ ನಡೆಯುತ್ತಿರುವ ಶಕ್ತಿದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವದ ಪ್ರಯುಕ್ತ ಕರಗ ನಡೆಯುವ ಪ್ರಮುಖ 12 ದೇವಾಲಯಗಳಿಗೆ ಸೋಮವಾರ ಸಂಜೆ ಮಡಿಲಕ್ಕಿ ಸಮರ್ಪಿಸಿ, ವಿಶೇಷ ಪೂಜೆ ಸಲ್ಲಿಕೆ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಹಿಂದೂ ಸಂಪ್ರದಾಯದಲ್ಲಿ ಆಷಾಢ, ಶ್ರಾವಣ ಹಾಗೂ ನವರಾತ್ರಿಯ ಸಮಯದಲ್ಲಿ ದೇವತೆಗಳಿಗೆ ಮಡಿಲಕ್ಕಿ ಕೊಡುವುದು ವಾಡಿಕೆ. ಹಾಗಾಗಿ ಕಳೆದ ಮೂರು ವರ್ಷಗಳಿಂದ ನಾನು ಸತತವಾಗಿ ನಗರದ ಶ್ರೀ ಚಾಮುಂಡೇಶ್ವರಿ ಕರಗ ನಡೆಯುವ ಸಮಯದಲ್ಲಿ ನಗರದ ಎಲ್ಲ ದೇವತೆಗಳಿಗೆ ಮಡಿಲಕ್ಕಿ ಸೇವೆ ಮಾಡುತ್ತಾ ಬಂದಿದ್ದೇನೆ. ತಾಯಿ ಚಾಮುಂಡೇಶ್ವರಿ ಈ ಕ್ಷೇತ್ರದ ಜನರ ಕಷ್ಟ ಸುಖಗಳನ್ನು ಕೇಳಲು ನನಗೆ ಜವಾಬ್ದಾರಿ ನೀಡಿ ಆಶೀರ್ವಾದ ಸಹ ಮಾಡಿದ್ದು, ಆ ತಾಯಿಯ ಹಬ್ಬವನ್ನು ಬಹಳ ಶ್ರದ್ಧಾ- ಭಕ್ತಿಯಿಂದ ಎಲ್ಲರೊಂದಿಗೆ ಆಚರಣೆ ಮಾಡುತ್ತಿದ್ದೇನೆ ಎಂದರು.ಮಡಿಲಕ್ಕಿ ಎನ್ನುವ ಪದ ಹೆಣ್ಣಿನ ಮುತ್ತೈದೆತನವನ್ನು ಸೂಚಿಸುತ್ತದೆ. ಆ ಹಿನ್ನೆಲೆಯಲ್ಲಿ ನಾವು ನಮ್ಮ ಸಂಪ್ರದಾಯ, ಸಂಸ್ಕೃತಿ, ಆಚಾರ- ವಿಚಾರಗಳನ್ನು ಮುಂದುವರಿಸಿಕೊಂಡು ಹೋಗುವ ಜೊತೆಗೆ ಅದರ ಮಹತ್ವವನ್ನು ಹಿರಿಯರು, ಇಂದಿನ ಯುವ ಜನಾಂಗಕ್ಕೂ ತಿಳಿಸುವ ಕೆಲಸ ಮಾಡುವ ಅಗತ್ಯವಿದೆ ಎಂದು ಹೇಳಿದರು.
ಶ್ರೀ ಚಾಮುಂಡೇಶ್ವರಿ ತಾಯಿ ಈ ನಾಡಿನ ಶಕ್ತಿದೇವತೆ ಆಗಿದ್ದು, ಹಿಂದಿನಿಂದಲೂ ಈ ತಾಯಿಯನ್ನು ನಂಬಿ ಪೂಜಿಸಿದವರನ್ನು ರಕ್ಷಣೆ ಮಾಡುತ್ತಾ ಪಟ್ಟಣದಲ್ಲಿ ಶಾಂತಿ, ಸೌಹಾರ್ದತೆ ನೆಲೆಸುವಂತೆ ನೋಡಿಕೊಂಡಿದ್ದಾಳೆ. ಆದ್ದರಿಂದಲೇ ರಾಮನಗರ ಮಣ್ಣಿಗೆ ವಿಶೇಷ ಸ್ಥಾನ, ಗೌರವ ಲಭಿಸಿದೆ ಎಂದು ಇಕ್ಬಾಲ್ ಹುಸೇನ್ ರವರು ದೇವಿಯ ಮಹಿಮೆಯನ್ನು ಬಣ್ಣಿಸಿದರು.
ದ್ಯಾವರಸೇಗೌಡನದೊಡ್ಡಿ ಶ್ರೀ ಚಾಮುಂಡೇಶ್ವರಿ ದೇವತೆ, ಕೊಂಕಾಣಿದೊಡ್ಡಿ ಆದಿಶಕ್ತಿ, ಗಾಂಧಿನಗರ ಆದಿಶಕ್ತಿ, ಶಕ್ತಿದೇವತೆ ಚಾಮುಂಡೇಶ್ವರಿ ಅಮ್ಮನವರ ದೇವಾಲಯ, ಶೆಟ್ಟಿಹಳ್ಳಿ ಬೀದಿ ಆದಿಶಕ್ತಿ, ತೋಪ್‌ಖಾನ್ ಮೊಹಲ್ಲಾದ ಮುತ್ತುಮಾರಮ್ಮ, ಬಾಲಗೇರಿ ಬಿಸಿಲು ಮಾರಮ್ಮ, ಮಗ್ಗದಕೇರಿ ಮಾರಮ್ಮ, ಬಂಡಾರಮ್ಮ, ಟ್ರೂಪ್ಲೇನ್ ಬಂಡಿ ಮಹಂಕಾಳಮ್ಮ, ಐಜೂರು ಆದಿಶಕ್ತಿಪುರದ ಆದಿಶಕ್ತಿ ಅಮ್ಮನವರ ದೇವಾಲಯಗಳಿಗೆ ಹರಿಸಿನ ಕುಂಕುಮ, ಸೀರೆ, ಬಳೆ, ವೀಳ್ಯದೆಲೆ, ಅಡಿಕೆ ಹೊಂಬಾಳೆ, ಮಡಿಲಕ್ಕಿ ಸಾಮಾನು, ಬಿಚ್ಚಾಲೆ, ಪಂಚ ಫಲಗಳನ್ನು ಒಳಗೊಂಡ ಪೂಜಾ ಸಾಮಗ್ರಿಗಳನ್ನು ಮರದ ಬುಟ್ಟಿಯಲ್ಲಿರಿಸಿ ದೇವತೆಗಳಿಗೆ ಅರ್ಪಿಸಿ ಕಾಣಿಕೆಯನ್ನು ನೀಡುವ ಮೂಲಕ ಶಾಸಕರು ಮಡಿಲಕ್ಕಿ ಸಮರ್ಪಣೆ ಮಾಡಿದರು.