ಕನ್ನಡಪ್ರಭ ವಾರ್ತೆ ಮೈಸೂರು
ಯುವಕರು ದುಶ್ಚಟಗಳಿಂದ ದೂರವಿದ್ದು ಯೋಗ, ಧ್ಯಾನದಿಂದ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಬಹುದು ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಕೆ.ಎಸ್. ರವೀಂದ್ರನಾಥ್ ಸಲಹೆ ನೀಡಿದರು.ನಗರದ ಕೆಆರ್ ಎಸ್ ರಸ್ತೆಯಲ್ಲಿರುವ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರವು ಸೋಮವಾರ ಆಯೋಜಿಸಿದ್ದ ಕಾರ್ಡಿಯೋ ಯೋಗ ಸಮ್ಮಿತ್- 2025 ಕುರಿತ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಅವರು ವರ್ಚುವಲ್ ಮೂಲಕ ಉದ್ಘಾಟಿಸಿ ಮಾತನಾಡಿದರು.
ಇತ್ತೀಚೆಗೆ ಯುವಕರಲ್ಲಿ ಹೃದ್ರೋಗ ಹೆಚ್ಚಾಗುತ್ತಿದ್ದು ಅವರ ಒತ್ತಡದ ಜೀವನಶೈಲಿ, ವಾಯುಮಾಲಿನ್ಯ ಹಾಗೂ ಇತರೆ ಕಾಯಿಲೆಗಳು ಹೆಚ್ಚಾಗಲು ಕಾರಣ. ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಯೋಗ ಪ್ರಮುಖ ಪಾತ್ರ ವಹಿಸುತ್ತದೆ. ಯೋಗದಿಂದ ಸಾಕಷ್ಟು ಅನುಕೂಲವಿದೆ. ಮನಸ್ಸಿನ ನಿಯಂತ್ರಣದ ಮೂಲಕ ಆರೋಗ್ಯ ಕಾಪಾಡಿಕೊಳ್ಳಬಹುದು. ಮಧುಮೇಹ ಕೂಡ ಹೃದ್ರೋಗಕ್ಕೆ ಕಾರಣವಾಗಿದ್ದು, ಯೋಗ ಜೀವನಶೈಲಿಯಿಂದ ಇದನ್ನು ತಡೆಗಟ್ಟಬಹುದು ಎಂದು ಅವರು ಹೇಳಿದರು.ಯೋಗ ಗುರು ಡಾ. ರಾಘವೇಂದ್ರ ರಾವ್ ಮಾತನಾಡಿ, ಯೋಗ ಭಾರತವು ಸಾಕ್ಷಾತ್ಕರಿಸಿಕೊಂಡಿರುವ ಒಂದು ಜೀವನ ದೃಷ್ಟಿಯಾಗಿದೆ. ದಿನೇ ದಿನೇ ಯೋಗ ಮಾಡುತ್ತಿರುವುದು ಉತ್ತಮ ಬೆಳವಣಿಗೆ. ಆದರೆ, ಯೋಗ ಸಂಶೋಧನೆಯಲ್ಲಿ ಹಿಂದೆ ಉಳಿದಿದೆ. ಈಗಾಗಲೇ ಮಲ್ಟಿ ಸೆಂಟ್ರಿಕ್ ಸ್ಟಡಿ ನಡೆಯುತ್ತಿದ್ದು, ಯೋಗದಿಂದ ನಮ್ಮ ದೇಹವು ಆರೋಗ್ಯದಿಂದ ಇರುತ್ತದೆ ಎಂದು ತಿಳಿಸಿದರು.
ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ವೈದ್ಯಕೀಯ ಅಧೀಕ್ಷಕ ಡಾ.ಕೆ.ಎಸ್. ಸದಾನಂದ, ಆದಿಚುಂಚನಗಿರಿ ವಿವಿ ಕುಲಪತಿ ಡಾ.ಎಂ.ಎ. ಶೇಖರ್, ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ಪ್ರಾಂಶುಪಾಲ ಡಾ.ಕೆ.ಎಸ್. ರಾಧಾಕೃಷ್ಣ ರಾಮರಾವ್, ಸಹಾಯಕ ನಿರ್ದೇಶಕ ಡಾ.ಎಲ್.ಎನ್. ಶೆಣೈ ಮೊದಲಾದವರು ಇದ್ದರು.ಸಜ್ಜೆಹುಂಡಿಯಲ್ಲಿ ಆರೋಗ್ಯ ತಪಾಸಣಾ ಶಿಬಿರ
ಕನ್ನಡಪ್ರಭ ವಾರ್ತೆ ಮೈಸೂರುತಾಲೂಕಿನ ಮೋಸಂಬಾಯನಹಳ್ಳಿ ಗ್ರಾಪಂ ವ್ಯಾಪ್ತಿಗೆ ಬರುವ ಸಜ್ಜೆಹುಂಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀನಿವಾಸನ್ ಸರ್ವಿಸಸ್ ಟ್ರಸ್ಟ್, ಹಾರ್ಟ್ ಸಂಸ್ಥೆ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಉಚಿತ ಆರೋಗ್ಯ ಶಿಬಿರ ನಡೆಯಿತು.
ಶಿಬಿರವನ್ನು ಗ್ರಾಪಂ ಅಧ್ಯಕ್ಷೆ ಸಾಕಮ್ಮ ಮತ್ತು ಹೃದಯ ರೋಗ ತಜ್ಞ ಡಾ. ದಿಶಾಂತ್, ಎಸ್ಸಿ, ಎಸ್ಟಿ ಸಮುದಾಯ ಅಭಿವೃದ್ಧಿ ಅಧಿಕಾರಿ ರಮೇಶ್, ಹಾರ್ಟ್ ಸಂಸ್ಥೆ ಸಂಯೋಜಕ ಶಿವಲಿಂಗ ಉದ್ಘಾಟಿಸಿದರು. ಶಿಬಿರದಲ್ಲಿ ಒಟ್ಟು 103 ರೋಗಿಗಳನ್ನು ಸಾಮಾನ್ಯ ರೋಗ ತಜ್ಞರು ತಪಾಸಣೆ ನಡೆಸಿದರು.70 ರೋಗಿಗಳಿಗೆ ಇಸಿಜಿ ಪರೀಕ್ಷೆ ಮಾಡಲಾಯಿತು, ಈ ತಪಾಸಣೆಯಲ್ಲಿ 3 ರೋಗಿಗಳಿಗೆ ತೊಂದರೆ ಇದ್ದು ಇವರನ್ನು ಹೆಚ್ಚಿನ ಪರೀಕ್ಷೆಗೆ ರೆಪರಲ್ ಮಾಡಲಾಯಿತು.
50 ಜನರಿಗೆ ಶ್ವಾಸಕೋಶ ಪರೀಕ್ಷೆ ಮಾಡಲಾಯಿತು. ಇದರಲ್ಲಿ 15 ಜನರಿಗೆ ತೊಂದರೆ ಇದ್ದು ಇವರನ್ನು ಹೆಚ್ಚಿನ ಪರೀಕ್ಷೆ ಮತ್ತು ಚಿಕಿತ್ಸೆಗೆ ಮೈಸೂರಿನ ನಾರಾಯಣ ಹೆಲ್ತ್ ಆಸ್ಪತ್ರೆಗೆ ಹೋಗಲು ತಿಳಿಸಲಾಯಿತು.52 ಜನರಿಗೆ ಕಣ್ಣಿನ ತಪಾಸಣೆ ನಡೆಸಿ ಅದರಲ್ಲಿ 10 ಜನರಿಗೆ ಪೊರೆ ಇದ್ದು ಇವರಿಗೆ ಶಸ್ತ್ರ ಚಿಕಿತ್ಸೆ ಮಾಡಿಕೊಳ್ಳಲು ಸಲಹೆ ನೀಡಲಾಯಿತು. ಹಾಗೂ 4 ಜನರಿಗೆ ದುರ್ಮಾಸ ಶಸ್ತ್ರಚಿಕಿತ್ಸೆಗೂ ಕೂಡ ರೆಫರಲ್ ಮಾಡಲಾಯಿತು.
20 ಜನರಿಗೆ ಸಮೀಪ ದೃಷ್ಟಿ ದೋಷ ಮತ್ತು ದೂರ ದೃಷ್ಟಿ ದೋಷವಿರುವವರನ್ನು ಕನ್ನಡ ಪರೀಕ್ಷೆ ಮಾಡಿಸಿಕೊಂಡು ಬಳಸಲು ತಿಳಿಸಲಾಯಿತು.ಶಾಲೆಯ ಎಲ್ಲಾ ಮಕ್ಕಳಿಗೂ ಕಣ್ಣಿನ ತಪಾಸಣೆ ನಡೆಸಿದ್ದು ವಿಶೇಷವಾಗಿತ್ತು. 1 ಮಗುವಿಗೆ ಹಾರ್ಟ್ ಸಮಸ್ಯೆ ಇದ್ದು ಇ ಸಿ.ಜಿ., ಎಕೋ ಪರೀಕ್ಷೆ ಮಾಡಿಸಲು ಪೋಷಕರ ಬಳಿ ಸಮಾಲೋಚನೆ ನಡೆಸಲಾಯಿತು.
ವೈದ್ಯರು ತಪಾಸಣೆ ನಡೆಸಿ ಅವಶ್ಯಕತೆ ಇರುವ ಎಲ್ಲಾ ರೋಗಿಗಳಿಗೆ ಉಚಿತ ಔಷಧಿ ವಿತರಿಸಲಾಯಿತು.