ಕುಕನೂರು:
ಸ್ಥಳೀಯ ವಿದ್ಯಾರ್ಥಿಗಳು ಬಿ.ಎಸ್ಸಿ ನರ್ಸಿಂಗ್ ಅಭ್ಯಾಸಕ್ಕೆ ಬೇರೆಡೆ ಹೋಗುವುದನ್ನು ಗಮನಿಸಿದ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರು ಯಲಬುರ್ಗಾಕ್ಕೆ ನರ್ಸಿಂಗ್ ಕಾಲೇಜು ಮಂಜೂರಾತಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಅವರ ಪ್ರಸ್ತಾವನೆ ಮೇರೆಗೆ ಸರ್ಕಾರ ₹ 6 ಕೋಟಿ ವೆಚ್ಚದಲ್ಲಿ ಕಾಲೇಜು ಮಂಜೂರು ಮಾಡಿ, ಕೆಕೆಆರ್‌ಡಿಬಿ ಅನುದಾನದಲ್ಲಿ ಆರಂಭಿಸಲು ಘೋಷಿಸಿದೆ.
ಹಳೆ ಸಾರ್ವಜನಿಕ ಆಸ್ಪತ್ರೆ ಕಟ್ಟಡದಲ್ಲಿ ಆರಂಭ:ಕಾಲೇಜನ್ನು ತಾತ್ಕಾಲಿಕವಾಗಿ ಯಲುಬುರ್ಗಾ ಪಟ್ಟಣದ 30 ಹಾಸಿಗೆಗಳ ಸಾರ್ವಜನಿಕ ಆಸ್ಪತ್ರೆ ಕಟ್ಟಡದಲ್ಲಿ ಆರಂಭಿಸಲಾಗುತ್ತಿದೆ. ಸದ್ಯ ಈ ಕಟ್ಟಡದಲ್ಲಿ ಯಲಬುರ್ಗಾ ನ್ಯಾಯಾಲಯ ಕಾರ್ಯ ನಿರ್ವಹಿಸುತ್ತಿದ್ದು, ಕೋರ್ಟ್‌ನ ನೂತನ ಕಟ್ಟಡ ಉದ್ಘಾಟನೆ ನಂತರ ನರ್ಸಿಂಗ್ ಕಾಲೇಜ್ ಆರಂಭವಾಗಲಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಹಾಲಿಯಿರುವ ಆಸ್ಪತ್ರೆಯ ಕಟ್ಟಡವನ್ನು ನರ್ಸಿಂಗ್ ಕಾಲೇಜು ಪ್ರಾರಂಭಿಸಲು ಅನುಮೋದನೆ ಸಹ ನೀಡಿದೆ.
ಬಿ.ಎಸ್ಸಿ ನರ್ಸಿಂಗ್ ಕಾಲೇಜು ಕಟ್ಟಡಕ್ಕೆ ಯಲಬುರ್ಗಾ ಪಟ್ಟಣದ ಪಿಜಿ ಸೆಂಟರ್ ಬಳಿ 10 ಎಕರೆ ಸರ್ಕಾರಿ ಜಮೀನು ಲಭ್ಯವಿದ್ದು, ಮುಂದಿನ ದಿನದಲ್ಲಿ ಕಟ್ಟಡ ನಿರ್ಮಿಸಲು ಸಂಪೂರ್ಣ ಅನುದಾನ ಮಂಜೂರಾತಿ ಪಡೆದು ಕಟ್ಟಡ ನಿರ್ಮಿಸುವ ಯೋಜನೆ ಶಾಸಕ ರಾಯರಡ್ಡಿ ಅವರದ್ದಾಗಿದೆ.
ವಿದ್ಯಾರ್ಥಿನಿಲಯ ಕಟ್ಟಲು ಹಾಗೂ 2025-26, 2026-27 ಮತ್ತು 2027-28ನೇ ಸಾಲಿನ 3 ವರ್ಷಗಳ ಅವಧಿಗೆ ಕಾಲೇಜಿನ ಸಿಬ್ಬಂದಿ ವೇತನ ಮತ್ತು ಮೂಲಭೂತ ಸೌಕರ್ಯಗಳಿಗಾಗಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನ ಬಳಕೆ ಮಾಡಲಾಗುತ್ತಿದೆ. ಕಾಲೇಜು ಪ್ರಾರಂಭಿಸಲು ತಾತ್ವಿಕ ಅನುಮೋದನೆ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಮಾನ್ಯತೆ ವರದಿ ಪಡೆಯಲಾಗಿದ್ದು, ಅಗತ್ಯವಾದ ಹುದ್ದೆಗಳಿಗೆ ಮಂಜೂರಾತಿಗಾಗಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಸಹ ಪಡೆಯಲಾಗಿದೆ.
ಯಲಬುರ್ಗಾ ಪಟ್ಟಣದಲ್ಲಿ ಆರಂಭವಾಗುತ್ತಿರುವ ಬಿ.ಎಸ್ಸಿ ನರ್ಸಿಂಗ್ ಕಾಲೇಜ್ ಕೊಪ್ಪಳ ಜಿಲ್ಲೆಯಲ್ಲಿಯೇ ಪ್ರಥಮ ಸರ್ಕಾರಿ ಬಿ.ಎಸ್ಸಿ ನರ್ಸಿಂಗ್ ಕಾಲೇಜ್ ಆಗಿದ್ದು ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.ಯಲಬುರ್ಗಾ ಪಟ್ಟಣಕ್ಕೆ ಸರ್ಕಾರಿ ಬಿ.ಎಸ್ಸಿ ನರ್ಸೀಂಗ್ ಕಾಲೇಜು ಅವಶ್ಯವಿದ್ದು 2025-26ರ ಬಜೆಟ್‌ನಲ್ಲಿ ಘೋಷಿಸಿದ್ದಂತೆ ಸರ್ಕಾರ ಕಾಲೇಜು ಆರಂಭಕ್ಕೆ ತಾತ್ವಿಕ ಅನುಮೋದನೆ ನೀಡಿದೆ. ಯಲಬುರ್ಗಾ, ಕುಕನೂರು ತಾಲೂಕಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ.