ವಿಶೇಷ ವರದಿಕನ್ನಡಪ್ರಭ ವಾರ್ತೆ ಮಡಿಕೇರಿ
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಇಂದಿರಾ ಕ್ಯಾಂಟೀನ್ ಯೋಜನೆಗೆ ಈಗ ಮರುಜೀವ ಬಂದಂತಿದ್ದು, ಕೊಡಗು ಜಿಲ್ಲೆಯ ಮೂರು ಕಡೆಗಳಲ್ಲಿ ನೂತನವಾಗಿ ಇಂದಿರಾ ಕ್ಯಾಂಟೀನ್ ಆರಂಭಿಸಲು ಸರ್ಕಾರದಿಂದ ಅನುಮೋದನೆ ದೊರಕಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2017ರಲ್ಲಿ ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್ ಆರಂಭಿಸಿದ್ದರು. ಇದೀಗ ತಮ್ಮ ಅವಧಿಯಲ್ಲಿ ರಾಜ್ಯಾದ್ಯಂತ ಮತ್ತಷ್ಟು ಕ್ಯಾಂಟೀನ್ ತೆರೆಯುವ ಯೋಜನೆ ರೂಪಿಸಲಾಗಿದ್ದು, ಕೊಡಗಿನಲ್ಲಿ ಮೂರು ಹೊಸ ಕ್ಯಾಂಟೀನ್‌ಗಳು ನಿರ್ಮಾಣ ಆಗಲಿದೆ.
ಇಂದಿರಾ ಕ್ಯಾಂಟೀನ್ ಮೂಲಕ 5 ರುಪಾಯಿಗೆ ಬೆಳಗ್ಗಿನ ಉಪಹಾರ ಮತ್ತು 10 ರುಪಾಯಿಗೆ ಮಧ್ಯಾಹ್ನ, ರಾತ್ರಿ ಊಟವನ್ನು ವಿತರಿಸುವ ಯೋಜನೆಯಾಗಿದ್ದು, ಈಗಾಗಲೇ ಮಡಿಕೇರಿ ಹಾಗೂ ವಿರಾಜಪೇಟೆಯಲ್ಲಿ ಎರಡು ಇಂದಿರಾ ಕ್ಯಾಂಟಿನ್‌ಗಳು ಕಾರ್ಯ ನಿರ್ವಹಿಸುತ್ತಿದೆ. ಇದೀಗ ಹೊಸದಾಗಿ ಜಿಲ್ಲೆಯ ಸೋಮವಾರಪೇಟೆಯಲ್ಲಿ ತಾಲೂಕು ಪಂಚಾಯಿತಿ, ಕುಶಾನಗರದಲ್ಲಿ ಪಟ್ಟಣ ಪಂಚಾಯಿತಿ ಹಾಗೂ ಮಡಿಕೇರಿಯಲ್ಲಿ ನಗರಸಭೆಯ ಮೂಲಕ ಇಂದಿರಾ ಕ್ಯಾಂಟೀನ್ಗಳು ಕಾರ್ಯ ನಿರ್ವಹಿಸಲಿದೆ.* ಆಸ್ಪತ್ರೆ ಬಳಿ ಕ್ಯಾಂಟೀನ್ ಬೇಕು
ಇದೀಗ ಮಡಿಕೇರಿಯ ನೂತನ ಖಾಸಗಿ ಬಸ್ ನಿಲ್ದಾಣದ ಬಳಿ ಇಂದಿರಾ ಕ್ಯಾಂಟೀನ್ ಇದೆ. ಆದರೆ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿತ್ತು. ಅಲ್ಲದೆ ನಿರ್ವಹಣೆ ಕೊರತೆಯೂ ಇದೆ ಎನ್ನಲಾಗಿತ್ತು. ಆದ್ದರಿಂದ ಇದನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಆದರೆ ಇದೀಗ ಮಡಿಕೇರಿಗೆ ಮತ್ತೊಂದು ಹೊಸ ಇಂದಿರಾ ಕ್ಯಾಂಟೀನ್ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆ ಸಮೀಪದಲ್ಲೇ ಕ್ಯಾಂಟೀನ್ ಆರಂಭಿಸಬೇಕೆಂದು ಪ್ರಮುಖರು ಆಗ್ರಹಿಸಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಆಸ್ಪತ್ರೆಗೆ ಆಗಮಿಸುವವರಿಗೆ ಅನುಕೂಲ ಆಗಲಿದೆ.* ಜಿಲ್ಲೆಯಲ್ಲಿ ಎರಡು ಕ್ಯಾಂಟೀನ್
ಈ ಹಿಂದೆ ಜಿಲ್ಲೆಯ ಮಡಿಕೇರಿ ಹಾಗೂ ವಿರಾಜಪೇಟೆಯಲ್ಲಿ ಇಂದಿರಾ ಕ್ಯಾಂಟೀನ್ ಗಳನ್ನು ಆರಂಭಿಸಲಾಗಿತ್ತು. ಮಡಿಕೇರಿಯಲ್ಲಿ ಬೆಳಗ್ಗಿನ ಉಪಹಾರಕ್ಕೆ 300 ಟೋಕನ್ ಅವಕಾಶವಿದ್ದು, ಪ್ರತಿ ದಿನ 250 ಮಂದಿ ಉಪಹಾರ ಸ್ವೀಕರಿಸುತ್ತಿದ್ದಾರೆ. ಇಲ್ಲಿ ಪೌರ ಕಾರ್ಮಿಕರು ಹಾಗೂ ಕಾಲೇಜು ವಿದ್ಯಾರ್ಥಿಗಳು ತೆರಳುತ್ತಿದ್ದಾರೆ. ವಿರಾಜಪೇಟೆ ಸರ್ಕಾರಿ ಬಸ್ ನಿಲ್ದಾಣ ಸಮೀಪದ ಕ್ಯಾಂಟೀನ್‌ನಲ್ಲಿ 200 ಟೋಕನ್ ಗೆ ಮಾತ್ರ ಅವಕಾಶವಿದೆ. ಆದರೆ ಇಲ್ಲಿ 250ಕ್ಕೂ ಅಧಿಕ ಮಂದಿ ಆಹಾರ ಸ್ವೀಕರಿಸುತ್ತಿದ್ದಾರೆ. ಮಡಿಕೇರಿಯ ಕ್ಯಾಂಟೀನಲ್ಲಿ ಮೂರು ಮಂದಿ ಸಿಬ್ಬಂದಿ ಇರಬೇಕು. ಆದರೆ ಈಗ ಇಬ್ಬರು ಮಾತ್ರ ಕೆಲಸ ಮಾಡುತ್ತಿದ್ದಾರೆ. ಒಬ್ಬರಿಗೆ ಒಂದು ಟೋಕನ್ ಸಾಲುತ್ತಿಲ್ಲ!ಮಡಿಕೇರಿಯ ಖಾಸಗಿ ಬಸ್ ನಿಲ್ದಾಣ ಬಳಿ ಇರುವ ಇಂದಿರಾ ಕ್ಯಾಂಟೀನ್ ನಲ್ಲಿ ಪ್ರತಿ ದಿನ 60 ಮಂದಿ ಪೌರ ಕಾರ್ಮಿಕರು ಬೆಳಗ್ಗಿನ ಉಪಹಾರ ತೆಗೆದುಕೊಳ್ಳುತ್ತಾರೆ. ಮುಂಜಾನೆ ನಗರವನ್ನು ಸ್ವಚ್ಛಗೊಳಿಸುವ ಕಾಯಕದಲ್ಲಿ ತೊಡಗುವ ಕಾರ್ಮಿಕರಿಗೆ ಇಂದಿರಾ ಕ್ಯಾಂಟೀನಲ್ಲಿ ಉಪಹಾರ ವ್ಯವಸ್ಥೆ ಮಾಡಲಾಗಿದೆ. ಆದರೆ ಒಂದು ಟೋಕನ್ಗೆ ಮೂರು ಇಡ್ಲಿ ಮಾತ್ರ ಪಡೆದುಕೊಳ್ಳಲು ಮಾತ್ರ ಅವಕಾಶ ಇರುವುದರಿಂದ ಪೌರ ಕಾರ್ಮಿಕರಿಗೆ ಸಾಲುತ್ತಿಲ್ಲ. ಇದರಿಂದ ಒಬ್ಬ ಪೌರ ಕಾರ್ಮಿಕರು 2-3 ಟೋಕನ್ ಪಡೆದುಕೊಳ್ಳುವಂತಾಗಿದೆ.ಮಡಿಕೇರಿಗೆ ಮತ್ತೊಂದು ಇಂದಿರಾ ಕ್ಯಾಂಟೀನ್ ನಿರ್ಮಾಣ ಆಗಲಿದ್ದು, ಇದನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಯ ಬಳಿಯೇ ನಿರ್ಮಿಸಬೇಕು. ಆ ಮೂಲಕ ಆಸ್ಪತ್ರೆಗೆ ಬರುವವರಿಗೆ ಇಂದಿರಾ ಕ್ಯಾಂಟೀನ್‌ನಿಂದ ಅನುಕೂಲ ಆಗಲಿದೆ. ಈ ಬಗ್ಗೆ ಶಾಸಕರು ಗಮನ ಹರಿಸಬೇಕು. । ರವಿ ಗೌಡ, ಅಧ್ಯಕ್ಷರು ಕೊಡಗು ಹಿತ ರಕ್ಷಣಾ ವೇದಿಕೆ
--------------ಜಿಲ್ಲೆಯ ಮಡಿಕೇರಿ ಹಾಗೂ ವಿರಾಜಪೇಟೆಯಲ್ಲಿ ಇಂದಿರಾ ಕ್ಯಾಂಟೀನ್‌ಗಳಿದೆ. ಮಡಿಕೇರಿಯಲ್ಲಿ ಇಬ್ಬರು ಸಿಬ್ಬಂದಿ ಮಾತ್ರ ಕೆಲಸ ಮಾಡುತ್ತಿದ್ದಾರೆ. ಇದೀಗ ಜಿಲ್ಲೆಯಲ್ಲಿ ಮೂರು ಹೊಸ ಕ್ಯಾಂಟೀನ್ ನಿರ್ಮಾಣ ಆಗಲಿದೆ.। ರೀನಾ, ವ್ಯವಸ್ಥಾಪಕಿ ಇಂದಿರಾ ಕ್ಯಾಂಟೀನ್
----------------ಮಡಿಕೇರಿ, ಕುಶಾಲನಗರ ಹಾಗೂ ಸೋಮವಾರಪೇಟೆಯಲ್ಲಿ ನೂತನ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಅನುಮೋದನೆ ದೊರಕಿದೆ. ಹಸಿವು ಮುಕ್ತ ಸಮಾಜ ನಿರ್ಮಾಣವೇ ನಮ್ಮ ಗುರಿ. ಬಡವರು, ಕಾರ್ಮಿಕರು ಶ್ರಮಿಕರಿಗೆ ಇನ್ನುಮುಂದೆ ಇಂದಿರಾ ಕ್ಯಾಂಟೀನ್ ಅಭಯವಾಗಲಿದೆ.। ಡಾ. ಮಂತರ್ ಗೌಡ, ಶಾಸಕರು ಮಡಿಕೇರಿ ವಿಧಾನಸಭಾ ಕ್ಷೇತ್ರ