ಕುಷ್ಟಗಿ, ನರಗುಂದ, ಘಟಪ್ರಭಾ ರೈಲ್ವೆಮಾರ್ಗದ ಸಮೀಕ್ಷೆಗೆ ಅನುಮೋದನೆ ನೀಡಿ

KannadaprabhaNewsNetwork | Published : Apr 5, 2025 12:46 AM

ಸಾರಾಂಶ

ಕುಷ್ಟಗಿಯಿಂದ ಗಜೇಂದ್ರಗಡ, ರೋಣ, ನರಗುಂದ, ಸವದತ್ತಿ, ಯರಗಟ್ಟಿ, ಮುನವಳ್ಳಿ, ಗೋಕಾಕ ಮೂಲಕ ಘಟಪ್ರಭಾ ಸಂಪರ್ಕಿಸುವ ಹೊಸ ಯೋಜನೆ ಪರಿಗಣಿಸಿ ಸಮೀಕ್ಷೆಗೆ ಅನುಮೋದನೆ ನೀಡಬೇಕು.

ಕುಷ್ಟಗಿ:

ಕುಷ್ಟಗಿ-ನರಗುಂದ-ಘಟಪ್ರಭಾ ಹೊಸ ರೈಲ್ವೆ ಮಾರ್ಗದ ಸಮೀಕ್ಷೆಗೆ ಅನುಮೋದನೆ ನೀಡುವಂತೆ ಕುಷ್ಟಗಿ-ನರಗುಂದ ರೈಲ್ವೆ ಹೋರಾಟ ಸಮಿತಿಯಿಂದ ಹುಬ್ಬಳ್ಳಿ ನೈಋತ್ಯ ವಲಯದ ಪ್ರಧಾನ ವ್ಯವಸ್ಥಾಪಕ ಮುಕುಲ್ ಸರನ್ ಮಾಥುರ್ ಅವರ ಕಾರ್ಯದರ್ಶಿ ಜಿ. ಸುನೀಲ್ ಅವರಿಗೆ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ನರಗುಂದ ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಚನ್ನಬಸಪ್ಪ ನಂದಿ, ಈ ರೈಲು ಹೊಸ ಬ್ರಾಡ್‌ಗೇಜ್ ಮಾರ್ಗ ಕುಷ್ಟಗಿಯಿಂದ ಗಜೇಂದ್ರಗಡ, ರೋಣ, ನರಗುಂದ, ಸವದತ್ತಿ, ಯರಗಟ್ಟಿ, ಮುನವಳ್ಳಿ, ಗೋಕಾಕ ಮೂಲಕ ಘಟಪ್ರಭಾ ಸಂಪರ್ಕಿಸುವ ಹೊಸ ಯೋಜನೆ ಪರಿಗಣಿಸಿ ಸಮೀಕ್ಷೆಗೆ ಅನುಮೋದನೆ ನೀಡಬೇಕು.

ಈ ಕುರಿತು ಈಗಾಗಲೇ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ, ಸಂಸದರಾದ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ಪಿ.ಸಿ. ಗದ್ದಿಗೌಡರ್, ಶಾಸಕ ರಾಜಶೇಖರ ಹಿಟ್ನಾಳ ಅವರಿಗೆ ಪ್ರತ್ಯೇಕ ಮನವಿ ಸಲ್ಲಿಸಲಾಗುತ್ತದೆ. ಈ ಮಾರ್ಗದಿಂದ ಸಾರ್ವಜನಿಕ ಸರಕು-ಸಾಗಣೆ. ಪ್ರವಾಸೋದ್ಯಮ ಮತ್ತು ಪ್ರಯಾಣಿಕರ ಸಂಚಾರಕ್ಕೆ ಅನುಕೂಲವಾಗುತ್ತದೆ. ಕೂಡಲೆ ಕ್ರಮಕ್ಕೆ ಮುಂದಾಗಬೇಕು ಎಂದು ಹೇಳಿದರು.

ಕುಷ್ಟಗಿ ರೈಲ್ವೆ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ವೀರೇಶ ಬಂಗಾರಶೆಟ್ಟರ ಮಾತನಾಡಿ, ಗದಗ-ವಾಡಿ ಹೊಸ ರೈಲು ಮಾರ್ಗದಲ್ಲಿ ರೈಲು ಸಂಚಾರಕ್ಕೆ ಪೂರಕವಾಗಿ ಸಿಆರ್‌ಎಸ್‌ ನೇತೃತ್ವದಲ್ಲಿ ಲಿಂಗನಬಂಡಿ-ಕುಷ್ಟಗಿ ಪ್ರಯೋಗಾರ್ಥ ರೈಲು ಸಂಚಾರ ಯಶಸ್ವಿಯಾಗಿದೆ. ಏಪ್ರಿಲ್‌ನಲ್ಲಿ ಕುಷ್ಟಗಿಯಿಂದ ತಳಕಲ್ ಮಾರ್ಗವಾಗಿ ರೈಲು ಸಂಚರಿಸುವ ಬಗ್ಗೆ ಇಲಾಖೆ ಮೂಲಗಳು ಖಾತ್ರಿಪಡಿಸಿವೆ. ಈ ಮಾರ್ಗದ ಜತೆಗೆ ಕುಷ್ಟಗಿ-ಯಶವಂತಪುರ ರೈಲ್ವೆ ಸಂಚಾರ ಸೇವೆ ಆರಂಭಿಸಬೇಕೆನ್ನುವುದು ಬೇಡಿಕೆಯಾಗಿದ್ದು ರೈಲ್ವೆ ಇಲಾಖೆ ಪರಿಗಣಿಸುವ ವಿಶ್ವಾಸವಿದೆ. ಕುಷ್ಟಗಿ-ನರಗುಂದ-ಘಟಪ್ರಭಾ ಹೊಸ ರೈಲ್ವೆ ಮಾರ್ಗದ ಸಮೀಕ್ಷೆಗೆ ಅನುಮೋದನೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ನೈಋತ್ಯ ವಲಯ ಪ್ರಧಾನ ವ್ಯವಸ್ಥಾಪಕರ ಕಚೇರಿಯ ಕಾರ್ಯದರ್ಶಿ ಜಿ. ಸುನೀಲ್, ಈ ಮಾರ್ಗದ ಬೇಡಿಕೆ ಸೂಕ್ತವಾಗಿದ್ದು ಸಂಬಂಧಿಸಿದ ಸಂಸದರಿಂದ ಪ್ರಸ್ತಾಪ ಬಂದಲ್ಲಿ ರೈಲ್ವೆ ಇಲಾಖೆ ಸಮೀಕ್ಷೆಗೆ ಪರಿಗಣಿಸಲಿದೆ ಎಂದರು,

ಇದೇ ವೇಳೆ ರೈಲ್ವೆ ಡಿವಿಜಿನಲ್ ಮ್ಯಾನೇಜರ್ ಮೀನಾ ಬೇಲಾ ಅವರ ಕಚೇರಿಯಲ್ಲಿ ಮನವಿ ಸಲ್ಲಿಸಲಾಯಿತು. ಶಾಂತರಾಜ್ ಗೋಗಿ, ನರಸಿಂಹ ಮುಜುಂದಾರ ಇದ್ದರು.

Share this article