೯/೧೧ಗೆ ಅನುಮೋದನೆ ಆದೇಶ ಪತ್ರ ಇನ್ನು ತಾಲೂಕು ಮಟ್ಟದಲ್ಲೇ ಸಿಗಲಿದೆ: ಅಶೋಕ್‌ ರೈ

KannadaprabhaNewsNetwork |  
Published : Sep 19, 2024, 01:48 AM IST
ಫೋಟೋ: ೧೭ಪಿಟಿಆರ್-ಸಭೆ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಆರ್. ವೆಂಕಟಾಚಲಪತಿ ಉಪಸ್ಥಿತಿಯಲ್ಲಿ ಶಾಸಕ ಅಶೋಕ್ ರೈ ನೇತೃತ್ವದಲ್ಲಿ ಏಕ ನಿವೇಶನ ವಿನ್ಯಾಸ ಅನುಮೋದನೆ ಕುರಿತು ಸಭೆ ನಡೆಯಿತು. | Kannada Prabha

ಸಾರಾಂಶ

ಕಡಬ ತಾಲೂಕಿನ ಮಂದಿ ಪುತ್ತೂರು ಪೂಡಾದಲ್ಲಿ ಆದೇಶ ಪಡೆಯಬೇಕಾಗುತ್ತದೆ. ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮಂದಿಗೂ ಪುತ್ತೂರು ಪೂಡಾದಲ್ಲಿಯೇ ಆದೇಶ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಪುತ್ತೂರು

ಅಭಿವೃದ್ಧಿಯ ಹಿನ್ನಲೆಯಲ್ಲಿ ೯/೧೧ ಆದೇಶ ಪಡೆಯಲು ಜನತೆಗೆ ಬಹಳ ತೊಡಕಾಗಿದ್ದ ಎರಡು ಪ್ರಮುಖ ನಿಮಯಗಳನ್ನು ಸರ್ಕಾರ ಸಡಿಲಗೊಳಿಸಿದ್ದು, ೨೫ ಸೆಂಟ್ಸ್ ಅಭಿವೃದ್ಧಿಗೆ ಇನ್ನು ಮುಂದೆ ಅರ್ಜಿ ಸಲ್ಲಿಸಿದ ೧೫ ದಿನಗಳೊಳಗೆ ತಾಲೂಕು ಕೇಂದ್ರಗಳಲ್ಲಿ ಆದೇಶ ದೊರೆಯಲಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಾಹಿತಿ ನೀಡಿದರು.

ಅವರು ಪುತ್ತೂರು ತಾಲೂಕು ಆಡಳಿತದ ಸೌಧದ ತಹಸೀಲ್ದಾರರ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏಕ ನಿವೇಶನ ವಿನ್ಯಾಸ ಅನುಮೋದನೆ ವಿಚಾರದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಆರ್. ವೆಂಕಟಾಚಲಪತಿ ಹಾಗೂ ವಿವಿಧ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯನ್ನು ನಡೆಸಿ ಮಾತನಾಡಿದರು. ೯/೧೧ ಆದೇಶ ನೀಡಲು ಈ ಹಿಂದೆ ಇದ್ದ ರಸ್ತೆ ಹಾಗೂ ದಾನಪತ್ರದ ಎರಡೂ ನಿಯಮಗಳನ್ನೂ ಸರಳಗೊಳಿಸಲಾಗದೆ. ಅರ್ಜಿ ಸಲ್ಲಿಸಿದ ಭೂಮಿಗೆ ಸಂಪರ್ಕ ರಸ್ತೆ ಇದ್ದರೆ ಸಾಕು ೨೫ ಸೆಂಟ್ಸ್ ತನಕದ ಅಭಿವೃದ್ಧಿಗೆ, ಮನೆಕಟ್ಟವವರಿಗೆ ಯಾವುದೇ ಸಮಸ್ಯೆ ಇಲ್ಲದೆ ಆದೇಶಪತ್ರ ಕೈಗೆ ದೊರಕುವ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು. ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಆರ್. ವೆಂಕಟಾಚಲಪತಿ ಮಾತನಾಡಿ ಈ ಹಿಂದೆ ಗ್ರಾಪಂಗಳಲ್ಲಿ ಈ ಆದೇಶ ನೀಡಲಾಗುವ ವ್ಯವಸ್ಥೆ ಇತ್ತು. ಆದರೆ ಇದನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬರು ಹೈಕೋರ್ಟಿಗೆ ಮೊರೆ ಹೋದ ಕಾರಣ ಈ ಆದೇಶ ನೀಡುವ ಜವಾಬ್ದಾರಿಯನ್ನು ನಗರಪಾಲಿಕಾ ಪ್ರಾಧಿಕಾರಗಳಿಗೆ ನೀಡಲಾಯಿತು. ಇದರಿಂದ ಗ್ರಾಮೀಣ ಭಾಗದವರಿಗೆ ಭಾರಿ ಸಮಸ್ಯೆ ಉಂಟಾಗಿತ್ತು. ಮುಡಾದಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯಿಂದ ಹಿಡಿದು ಆದೇಶ ಸಿಗುವ ತನಕ ಹಳ್ಳಿಯ ರೈತನೊಬ್ಬ ತಿಂಗಳುಗಟ್ಟಲೆ ಅಲೆಯಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಇದೀಗ ೨೫ ಸೆಂಟ್ಸ್ ತನಕ ಭೂಮಿಯಲ್ಲಿ ಅಭಿವೃದ್ಧಿ ಮಾಡಲು ತಾಲೂಕು ಮಟ್ಟದಲ್ಲಿಯೇ ಆದೇಶ ಸಿಗಲಿದೆ. ಗ್ರಾಪಂ ಮೂಲಕ ಅರ್ಜಿ ಸಲ್ಲಿಸಿದರೆ ಮುಂದಿನ ಹಂತದಲ್ಲಿ ತಾಲೂಕು ಪ್ರಾಧಿಕಾರದ ಅಧಿಕಾರಿ ಸ್ಥಳಪರಿಶೀಲನೆ ನಡೆಸಿ ೧೨ರಿಂದ ೧೫ ದಿನಗಳ ಒಳಗೆ ೯/೧೧ ಆದೇಶಪತ್ರ ನೀಡುವ ಕೆಲಸ ನಡೆಯಲಿದೆ ಎಂದು ತಿಳಿಸಿದರು.

ಕಡಬ ತಾಲೂಕಿನ ಮಂದಿ ಪುತ್ತೂರು ಪೂಡಾದಲ್ಲಿ ಆದೇಶ ಪಡೆಯಬೇಕಾಗುತ್ತದೆ. ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮಂದಿಗೂ ಪುತ್ತೂರು ಪೂಡಾದಲ್ಲಿಯೇ ಆದೇಶ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಪುತ್ತೂರು ಉಪವಿಭಾಗದ ಬೆಳ್ತಂಗಡಿ, ಸುಳ್ಯ ಹಾಗೂ ಪುತ್ತೂರು ತಾಲೂಕಿಗೆ ಸೇರಿದಂತೆ ಈ ನಿಯಮ ಜಾರಿಗೊಂಡಿದ್ದು, ಸರ್ಕಾರದ ಆದೇಶದಲ್ಲಿ ಕಡಬ ತಾಲೂಕು ಹೆಸರು ಸೇರಿಲ್ಲವಾದರೂ ಈ ಭಾಗಕ್ಕೂ ಅನ್ವಯವಾಗಲಿದೆ. ಬೆಳ್ತಂಗಡಿಗೆ ಮೂಡುಬಿದಿರೆ ಪ್ರಾಧಿಕಾರದ ಅಧಿಕಾರಿ ಬರಲಿದ್ದಾರೆ. ಪುತ್ತೂರು ಹಾಗೂ ಸುಳ್ಯ ತಾಲೂಕಿಗೆ ಪುತ್ತೂರು ಪೂಡಾ ಕಾರ್ಯದರ್ಶಿ ಬಂದು ಆದೇಶ ನೀಡುವ ಕೆಲಸ ಮಾಡಲಿದ್ದಾರೆ. ಕಡಬ ತಾಲೂಕಿನವರು ಪುತ್ತೂರು ಪೂಡಾ ಕಚೇರಿಯನ್ನು ಅವಲಂಬಿಸಬೇಕಾಗುತ್ತದೆ. ೯/೧೧ ಮಾಡಿಸುವ ಪ್ರತಿಯೊಬ್ಬರೂ ತಮ್ಮ ಗ್ರಾಪಂ ಕಚೇರಿಗಳಲ್ಲಿ ದಾಖಲೆಗಳ ಸಹಿತ ಅರ್ಜಿ ಸಲ್ಲಿಸಬೇಕಾಗುತ್ತದೆ.

ನಗರ ಮತ್ತು ಗ್ರಾಮಾಂತರ ಯೋಜನಾ ಜಂಟಿ ನಿರ್ದೇಶಕಿ ಡಾ. ಪಂಕಜ, ಉಪನಿರ್ದೇಶಕ ಡಾ. ಹನುಮಂತರಾಯಪ್ಪ, ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳಾದ ಪುತ್ತೂರಿನ ನವೀನ್‌ಕುಮಾರ್ ಭಂಡಾರಿ, ಬೆಳ್ತಂಗಡಿಯ ಭವಾನಿಶಂಕರ, ಸುಳ್ಯದ ರಾಜಣ್ಣ, ಬಂಟ್ವಾಳದ ಸಚಿನ್ ಕುಮಾರ್, ಪುತ್ತೂರು ಪೂಡಾ ಕಾರ್ಯದರ್ಶಿ ಅಭಿಲಾಷ್, ಪುತ್ತೂರು ನಗರಯೋಜನಾ ಪ್ರಾಧಿಕಾರದ ಸದಸ್ಯರಾದ ನಿಹಾಲ್ ರೈ, ಲ್ಯಾನ್ಸಿ ಮಸ್ಕರೇನಸ್ ಹಾಗೂ ಅನ್ವರ್ ಖಾಸಿಂ ಉಪಸ್ಥಿತರಿದ್ದರು. ತಹಸೀಲ್ದಾರ್ ಪುರಂದರ ಹೆಗ್ಡೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲು ಸಾಲು ರಜೆ, ಪ್ರವಾಸಿ ತಾಣ ರಷ್‌
ಭೂಮಿ ಮಾರಿದ ಇನ್ಫಿ ಬಗ್ಗೆ ಕಾರ್ತಿ ತೀವ್ರ ಆಕ್ರೋಶ