ಕನ್ನಡಪ್ರಭ ವಾರ್ತೆ, ಬೆಂಗಳೂರು
ರಾಜ್ಯದಲ್ಲಿ ಇದುವರೆಗೆ ಪ್ರತಿ ಲೀಟರ್ ಡೀಸೆಲ್ ಮೇಲೆ ಮಾರಾಟ ತೆರಿಗೆ ಶೇ.18.44ರಷ್ಟಿತ್ತು. ಅದನ್ನು ಮಂಗಳವಾರದಿಂದಲೇ ಜಾರಿಗೆ ಬರುವಂತೆ ಶೇ.21.17ಕ್ಕೆ ಹೆಚ್ಚಿಸಲಾಗಿದೆ. ಇದರಿಂದ ಮಾರಾಟ ತೆರಿಗೆ ದರ ಶೇ.2.73 ರಷ್ಟು ಹೆಚ್ಚಳವಾಗಿದೆ. ಪರಿಣಾಮ ರಾಜ್ಯಾದ್ಯಂತ ಪ್ರತಿ ಲೀಟರ್ ಡೀಸೆಲ್ ದರ 2 ರು. ಏರಿಕೆಯಾಗಿ, 91.02 ರು. ತಲುಪಿದೆ. ಪರಿಷ್ಕೃತ ದರ ಮಧ್ಯರಾತ್ರಿಯಿಂದಲೇ ರಾಜ್ಯಾದ್ಯಂತ ಜಾರಿಗೆ ಬಂದಿದೆ. ಇದುವರೆಗೆ ರಾಜ್ಯದಲ್ಲಿ ಪ್ರತಿ ಲೀಟರ್ ಡೀಸೆಲ್ ದರ 89.02 ರು. ಇತ್ತು.
ಸರ್ಕಾರದ ಸಮರ್ಥನೆ:ರಾಜ್ಯದಲ್ಲಿ ಡೀಸೆಲ್ ಮೇಲಿನ ಮಾರಾಟ ತೆರಿಗೆ ದರ ಹೆಚ್ಚಿಸಿದ ಬಳಿಕವೂ ರಾಜ್ಯದಲ್ಲಿ ಪರಿಷ್ಕೃತ ದರವು ನೆರೆ ರಾಜ್ಯಗಳಿಗಿಂತ ಕಡಿಮೆ ಇದೆ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ.
ಸರಕು ಸೇವಾ ದರ ಹೆಚ್ಚಳ?:
ಟೋಲ್ ದರ ಹೆಚ್ಚಳದ ಜೊತೆಗೆ ಈಗ ಡೀಸೆಲ್ ದರ ಏರಿಕೆಯಾಗಿರುವುದರಿಂದ ರಾಜ್ಯದಲ್ಲಿ ಎಲ್ಲ ರೀತಿಯ ವಾಹನಗಳ ಸರಕು ಸೇವೆಗಳ ದರ ಹೆಚ್ಚಳವಾಗುವ ಸಾಧ್ಯತೆ ಇದೆ. ಸರಕು ಸೇವೆಗಳ ದರ ಏರಿಕೆಯಾದರೆ ಎಲ್ಲ ರೀತಿಯ ದಿನಬಳಕೆ ವಸ್ತುಗಳ ಬೆಲೆಯೂ ಏರಿಕೆಯಾಗುವ ಆತಂಕವಿದೆ.ಈ ಎರಡೂ ದರ ಏರಿಕೆಯಿಂದ ಸರಕು ಸೇವಾ ವಾಹನಗಳ ಕಾರ್ಯಾಚರಣೆಗೆ ಎಷ್ಟು ಹೊರೆ ಬೀಳಲಿದೆ ಎಂದು ಕೆಲ ದಿನಗಳ ಕಾಲ ಲೆಕ್ಕಾಚಾರ ಮಾಡಿ ನಂತರ ಸರಕು ಸೇವೆಗಳ ದರ ಏರಿಕೆ ಬಗ್ಗೆ ಆಲೋಚಿಸಲು ರಾಜ್ಯ ಲಾರಿ ಮಾಲೀಕರ ಸಂಘ ಮುಂದಾಗಿದೆ. ಸರಕು ಸೇವೆಗಳ ದರ ಏರಿಕೆಯಾದರೆ ತಾನಾಗಿಯೇ ಆಹಾರೋತ್ಪನ್ನಗಳು, ದಿನಸಿ, ತರಕಾರಿ ಸೇರಿದಂತೆ ಎಲ್ಲಾ ದಿನಬಳಕೆ ವಸ್ತುಗಳ ಬೆಲೆಯೂ ಏರಿಕೆಯಾಗಲಿದೆ.