ಸರ್ಕಾರಿ ಶಾಲೆಯಲ್ಲಿ ಏಪ್ರಿಲ್‌ ಕೂಲ್‌ ದಿನ ಆಚರಣೆ!

KannadaprabhaNewsNetwork | Published : Apr 4, 2025 12:46 AM

ಸಾರಾಂಶ

ಏ. ೧ರಂದು ಬಹುತೇಕರು ಎಪ್ರಿಲ್ ಫೂಲ್ ದಿನ (ಮೂರ್ಖರ ದಿನ) ಆಚರಣೆ ಮಾಡುತ್ತಾರೆ. ಆದರೆ, ತಾಲೂಕಿನ ಅಲಗಿಲವಾಡ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪಕ್ಷಿಗಳಿಗೆ ಕುಡಿಯಲು ನೀರು ಮತ್ತು ಆಹಾರ ನೀಡುವ ಮೂಲಕ "ಏಪ್ರಿಲ್ ಕೂಲ್‌ ದಿನ " ಆಚರಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಮಹದೇವಪ್ಪ ಎಂ. ಸ್ವಾಮಿ

ಕನ್ನಡಪ್ರಭ ವಾರ್ತೆ ಶಿರಹಟ್ಟಿ

ಏ. ೧ರಂದು ಬಹುತೇಕರು ಎಪ್ರಿಲ್ ಫೂಲ್ ದಿನ (ಮೂರ್ಖರ ದಿನ) ಆಚರಣೆ ಮಾಡುತ್ತಾರೆ. ಆದರೆ, ತಾಲೂಕಿನ ಅಲಗಿಲವಾಡ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪಕ್ಷಿಗಳಿಗೆ ಕುಡಿಯಲು ನೀರು ಮತ್ತು ಆಹಾರ ನೀಡುವ ಮೂಲಕ "ಏಪ್ರಿಲ್ ಕೂಲ್‌ ದಿನ " ಆಚರಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಬಿಸಿಲ ಧಗೆಗೆ ಕುಡಿಯಲು ನೀರು ಸಿಗದೆ ಪ್ರಾಣಿ, ಪಕ್ಷಿಗಳು ಪರದಾಡುತ್ತಿವೆ. ಅದರಲ್ಲೂ ನಗರ ಪ್ರದೇಶಗಳಲ್ಲಂತೂ ಬೇಸಿಗೆಯ ಬಿಸಿಲಿನ ತಾಪಕ್ಕೆ ನೀರಿನ ದಾಹಕ್ಕೆ ಮೂಕಪ್ರಾಣಿ, ಪಕ್ಷಿಗಳು ಬಲಿಯಾಗುತ್ತಿವೆ. ಇದನ್ನು ತಡೆಯುವ ನಿಟ್ಟಿನಲ್ಲಿ ಈ ಶಾಲೆಯ ವಿದ್ಯಾರ್ಥಿಗಳು- ಶಿಕ್ಷಕರು ಪಕ್ಷಿ, ಪ್ರಾಣಿಗಳಿಗೆ ನೀರು, ಆಹಾರ ಪೂರೈಸುವ ಕೆಲಸ ಮಾಡುತ್ತಿದ್ದು, ಜನರಲ್ಲಿ ಜಾಗೃತಿ ಮೂಡಿಸುವ ಜತೆಗೆ ಮನೆ ಮಾಳಿಗೆ, ಚಾವಣಿ, ಅಕ್ಕ-ಪಕ್ಕದ ಗಿಡಗಳಿಗೆ ಮಣ್ಣಿನ ಮಡಕೆ ಕಟ್ಟಿ, ದಿನನಿತ್ಯ ಬೆಳಗ್ಗೆ ಮತ್ತು ಸಂಜೆ ನೀರು, ಕಾಳು ಹಾಕುತ್ತಿದ್ದಾರೆ.

ಮನುಷ್ಯರಾದರೆ ನೀರು, ಆಹಾರ ಕೇಳಿ ಸೇವಿಸುತ್ತಾರೆ. ಆದರೆ ಮೂಕ ಪ್ರಾಣಿ, ಪಕ್ಷಿಗಳಿಗೆ ಹಾಗಾಗುವುದಿಲ್ಲ. ಅವುಗಳ ಸ್ಥಿತಿಯನ್ನು ಎಲ್ಲರೂ ಅರ್ಥಮಾಡಿಕೊಂಡು ಬೇಸಿಗೆ ಕಾಲದಲ್ಲಿ ನಿಮ್ಮ ಮನೆ ಅಂಗಳದಲ್ಲಿ ಪಾತ್ರೆಗಳಲ್ಲಿ ನೀರನ್ನು ಇಟ್ಟರೆ ಸಾಕು ಎನ್ನುತ್ತಾರೆ ಶಾಲೆಯ ಮುಖ್ಯ ಶಿಕ್ಷಕ ಹಾಲೇಶ ಜಕ್ಕಲಿ.

ಈ ಶಾಲೆಯ ವಿದ್ಯಾರ್ಥಿಗಳ ಕಾರ್ಯ ಇತರ ವಿದ್ಯಾರ್ಥಿಗಳು, ಸಾರ್ವಜನಿಕರಿಗೂ ಪ್ರೇರಣೆಯಾಗಲಿ ಎನ್ನುವ ಉದ್ದೇಶ ಶಿಕ್ಷಕರದು. ಬೇಸಿಗೆ ಸುಡು ಬಿಸಿಲಿಗೆ ನಾವೇ ಸುಟ್ಟು ಹೋಗುತ್ತೇವೆ. ಅಂತಹುದರಲ್ಲಿ ಪಕ್ಷಿಗಳು ಹೇಗಿರುತ್ತವೆ ಎನ್ನುವ ಆತಂಕವನ್ನು ವಿದ್ಯಾರ್ಥಿಗಳು ಹೊರ ಹಾಕಿದ್ದರಿಂದ ಅವರಿಂದಲೇ ಈ ಕೆಲಸ ಮಾಡಿಸುತ್ತಿದ್ದೇವೆ ಎನ್ನುತ್ತಾರೆ.

ಆಧುನೀಕರಣ, ನಗರೀಕರಣದಿಂದಾಗಿ ಮರಗಿಡಗಳ ಸಂಖ್ಯೆ ಕಡಿಮೆಯಾಗಿ ಪಕ್ಷಿಗಳಿಗೆ ಆಶ್ರಯ ಹಾಗೂ ನೀರು ಎರಡೂ ಇಲ್ಲವಾಗಿವೆ. ಕೆರೆ-ಕಟ್ಟೆಗಳು ಬತ್ತಿರುವುದರಿಂದ ಮನುಷ್ಯರಷ್ಟೇ ಅಲ್ಲದೇ, ಕುಡಿಯಲು ನೀರಿಲ್ಲದೆ ಪ್ರಾಣಿ-ಪಕ್ಷಿಗಳೂ ಹೈರಾಣಾಗಿವೆ. ಅಲಗಿಲವಾಡ ಶಾಲೆಯ ೧ರಿಂದ ೫ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಶಾಲೆ ಆವರಣ ಸೇರಿದಂತೆ ಮನೆ ಸುತ್ತ-ಮುತ್ತಲಿನ ಗಿಡಗಳಲ್ಲಿ ಮಣ್ಣಿನ ಮಡಕೆಗಳನ್ನು ಕಟ್ಟಿ, ಸಾವಿರಾರು ಪಕ್ಷಿಗಳ ದಾಹ ನೀಗಿಸುತ್ತಿದ್ದಾರೆ.

ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಈ ಕಾರ್ಯಕ್ಕೆ ಪಾಲಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಜತೆಗೆ ಪಕ್ಷಿಗಳಿಗೆ ನೀರೊದಗಿಸುವ ಕಾರ್ಯಕ್ಕೆ ಕೈಜೋಡಿಸುತ್ತಿದ್ದಾರೆ.

ಎಲ್ಲ ವಿದ್ಯಾರ್ಥಿಗಳು ತಮ್ಮ ಮನೆಯ ಚಾವಣಿ, ಸುತ್ತ-ಮುತ್ತಲಿನ ಗಿಡಗಳಿಗೆ ಮಣ್ಣಿನ ಮಡಕೆ ಕಟ್ಟಿ ನೀರು ಹಾಕುವ ಕಾರ್ಯ ಮಾಡುತ್ತಿದ್ದಾರೆ ಮುಖ್ಯ ಶಿಕ್ಷಕ ಹಾಲೇಶ ಜಕ್ಕಲಿ ಹೇಳಿದರು.

Share this article