ರಾಹುಲ್ ಜೀ ದೊಡ್ಮನಿ
ಪ್ರತಿವರ್ಷ ಬೇಸಿಗೆ ಕಾಲದಲ್ಲಿ ಅಫಜಲ್ಪುರ ತಾಲೂಕಿನಾದ್ಯಂತ ಕುಡಿವ ನೀರಿಗಾಗಿ ಹಾಹಾಕಾರ ಶುರುವಾಗುವುದು ಸಾಮಾನ್ಯ ಸಂಗತಿಯಾಗಿದೆ. ಆದರೆ ಈ ಬಾರಿ ಬೇಸಿಗೆ ಆರಂಭದಲ್ಲೇ ಹಾಹಾಕಾರ ಶುರುವಾಗಿದೆ. ಅದರಲ್ಲೂ ತಾಲೂಕಿನ ಜೀವನದಿ ಎನಿಸಿರುವ ಭೀಮಾ ನದಿಗೆ ಅಡ್ಡಲಾಗಿ ಕಟ್ಟಿರುವ ಸೊನ್ನ ಭೀಮಾ ಬಾಂದಾರು ಸಂಪೂರ್ಣ ಬರಿದಾಗಿ ಆತಂಕ ಮೂಡಿಸಿದೆ.
ಅಫಜಲ್ಪುರ ತಾಲೂಕಿನ ಸ್ಟೇಷನ್ ಗಾಣಗಾಪೂರ, ಬಳೂರ್ಗಿ, ಚಿಂಚೋಳಿ, ಮಾತೋಳಿ, ಹೊಸೂರ, ಕರ್ಜಗಿ, ಮಾಶಾಳ, ಬಡದಾಳ, ಗೊಬ್ಬೂರ(ಬಿ), ರೇವೂರ(ಕೆ), ಕೋಗನೂರ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಈಗಾಗಲೇ ನೀರಿನ ಸಮಸ್ಯೆ ತಾಂಡವವಾಡುತ್ತಿದೆ. ಈ ಗ್ರಾಮಗಳೆಲ್ಲ ಭೀಮಾ ನದಿಯಿಂದ ದೂರ ಇರುವ ಗ್ರಾಮಗಳಾಗಿವೆ. ಇಲ್ಲಿ ಸಾಮಾನ್ಯವಾಗಿ ಪ್ರತಿವರ್ಷ ನೀರಿನ ಸಮಸ್ಯೆ ಉಲ್ಬಣವಾಗುತ್ತಿತ್ತು. ಆದರೆ ಈ ಬಾರಿ ಭೀಮಾ ನದಿಗೆ ಹೊಂದಿಕೊಂಡಿರುವ ಊರುಗಳಲ್ಲೂ ಕೂಡ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಭೀಮಾ ನದಿ ಸಂಪೂರ್ಣ ಬರಿದಾಗಿದ್ದು ನದಿ ಪಾತ್ರದ ಊರುಗಳ ಜನ ಕೂಡ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಬ್ಯಾರೇಜ್ ಇತಿಹಾಸದಲ್ಲಿ ಮೊದಲ ಬಾರಿಗೆ ಹಿನ್ನೀರಲ್ಲಿ ತಳ ಕಾಣುತ್ತಿದೆ:
ಜಲಕ್ಷಾಮಕ್ಕೆ ತುತ್ತಾದ ಅಫಜಲ್ಪುರಕ್ಕೆ ಏಪ್ರೀಲ್, ಮೇ ಗಂಡಾಂತರ: ಭೀಮಾ ಬ್ಯಾರೇಜ್‌ನಲ್ಲಿ ಸಧ್ಯ ಲಭ್ಯವಿರುವ ನೀರಲ್ಲಿ ಕೃಷಿಗಾಗಿ ಒಂದು ಹನಿ ಬಳಕೆ ಮಾಡದೆ ಕೇವಲ ಕುಡಿಯುವುದಕ್ಕಾಗಿ ಬಳಕೆ ಮಾಡಿಕೊಂಡರೂ ಕೂಡ ಏಪ್ರೀಲ್, ಮೇ ತಿಂಗಳ ವರೆಗೂ ನೀರು ಸಾಕಾಗಲಿದೆ. ಅಲ್ಲಿಂದ ಸಂಪೂರ್ಣ ಜಲಾಶಯ ಬರೀದಾಗಲಿದ್ದು ಅಫಜಲ್ಪುರ ತಾಲೂಕಿನಲ್ಲಿ ಭಾಗಶಃ ಜಲಕ್ಷಾಮ ಉಂಟಾಗುವುದಂತು ಪಕ್ಕಾ ಆಗಿದೆ. ಭೀಮೆಯ ದಡದ ಹಳ್ಳಿಗಳು, ಜಲಾಶಯದ ಅಕ್ಕಪಕ್ಕದ ಹಳ್ಳಿಗಳಲ್ಲೇ ಈಗ ನೀರಿಗಾಗಿ ಪರದಾಟ ಶುರುವಾಗುತ್ತಿದೆ. ಇನ್ನೂ ನದಿ ಇಲ್ಲದ ಭಾಗದಲ್ಲಿನ ಜನ ಜಾನುವಾರುಗಳ ಪರಿಪಾಟಲು ದೇವರಿಗೆ ಪ್ರೀತಿ ಎನ್ನುವಂತಾಗಲಿದೆ. ಇನ್ನೊಂದು ತಿಂಗಳಲ್ಲಿ ನೀರಿನ ಪರ್ಯಾಯ ವ್ಯವಸ್ಥೆಗೆ ಸಂಬಂಧ ಪಟ್ಟವರು ಮುಂದಾಗದಿದ್ದರೆ ಜಲಕಂಟಕದಲ್ಲಿ ಸಿಲುಕಿ ಇಡೀ ತಾಲೂಕಿನ ಜನ ಪರಿತಪಿಸಬೇಕಾಗುತ್ತದೆ.ಭೀಮಾ ನದಿಯಲ್ಲಿನ ನೀರು ತೀರಾ ಕಡಿಮೆಯಾಗಿದ್ದು ಬೇಸಿಗೆ ಮುಗಿಯುವ ತನಕ ಕೇವಲ ಕುಡಿಯುವುದಕ್ಕಾಗಿ ಬಳಕೆ ಮಾಡಬೇಕಾಗುತ್ತದೆ. ಆಲಮಟ್ಟಿ, ನಾರಾಯಣಪೂರ ಜಲಾಶಯದ ನೀರನ್ನೂ ಇಂಡಿ ಬ್ರಾಂಚ್ ಕೆನಾಲ್ ಮೂಲಕ ಸೊನ್ನ್ ಬ್ಯಾರೇಜ್‌ಗೆ ನೀರು ಹರಿಸುವಂತೆ ಸರ್ಕಾರ ಹಾಗೂ ಸಂಬಂಧ ಪಟ್ಟವರಿಗೆ ಮನವಿ ಮಾಡಿದ್ದೇನೆ, ಅಲ್ಲದೆ ಈ ಕುರಿತು ವಿಧಾನಸಭೆ ಅಧಿವೇಶನದಲ್ಲೂ ಧ್ವನಿ ಎತ್ತಿದ್ದೇನೆ. ಎಲ್ಲೆಲ್ಲಿ ನೀರಿನ ಸಮಸ್ಯೆ ವ್ಯಾಪಕವಾಗಿ ಉಲ್ಬಣಸುತ್ತದೋ ಅಂತಲ್ಲಿ ಟ್ಯಾಂಕರ್ ನೀರು ಪೂರೈಕೆ, ಖಾಸಗಿಯವರಿಂದ ಖರೀದಿ ಮಾಡಿ ಜನಸಾಮಾನ್ಯರಿಗೆ ಪೂರೈಕೆ ಮಾಡಲಾಗುತ್ತದೆ.
----
- ಹೆಸರು ಹೇಳಲಿಚ್ಚಿಸದ ಕೆಎನ್‌ಎನ್‌ಎಲ್ ಅಧಿಕಾರಿ