ನವದೆಹಲಿ : ಉದ್ಧವ್‌ ಠಾಕ್ರೆ ಬಣದ ಶಿವಸೇನೆಯ (ಶಿವಸೇನಾ-ಯುಬಿಟಿ) 6 ಬಂಡಾಯ ಲೋಕಸಭಾ ಸಂಸದರು ಏಕನಾಥ್‌ ಶಿಂಧೆ ಬಣವನ್ನು ಸೇರಲಿದ್ದಾರೆ ಎಂಬ ವದಂತಿಗಳ ನಡುವೆಯೇ, ಗುರುವಾರ ನಿಗದಿಯಾಗಿದ್ದ ಮಹತ್ವದ ಸಂಸದೀಯ ಪಕ್ಷದ ಸಭೆಗೆ ಗೈರಾಗಿದ್ದಾರೆ ಹಾಗೂ ಶಿಂಧೆ ಬಣದ ಶಿವಸೇನೆ ಸೇರುವ ಬಗ್ಗೆ ಲೋಕಸಭಾ ಸ್ಪೀಕರ್‌ಗೆ ಮಾಹಿತಿ ನೀಡಿದ್ದಾರೆ. ಈ ಮೂಲಕ ಈಗಾಗಲೇ ಒಂದು ಸಲ ಹೋಳಾಗಿರುವ ಸೇನೆ ಪುನಃ ಹೋಳಾಗುವುದು ಬಹುತೇಕ ನಿಚ್ಚಳವಾಗಿದೆ.

ಗುರುವಾರ ಬೆಳಿಗ್ಗೆ 11 ಗಂಟೆಗೆ ಸಂಸತ್ ಭವನದ ಸಂಕೀರ್ಣದಲ್ಲಿರುವ ಪಕ್ಷದ ಕಚೇರಿಯಲ್ಲಿ ಶಿವಸೇನೆ (ಯುಬಿಟಿ) ಸಭೆ ನಿಗದಿಪಡಿಸಿತ್ತು. ಇದಕ್ಕೆ ಹಾಜರಾಗುವಂತೆ ನಿರ್ದೇಶಿಸುವ 3 ಸಾಲಿನ ವಿಪ್ ಅನ್ನು ಬುಧವಾರ ತನ್ನ ಸಂಸದರಿಗೆ ಜಾರಿಗೊಳಿಸಿತ್ತು. ಇದರ ಹೊರತಾಗಿಯೂ ಸಂಸದರಾದ ನಾಗೇಶ್ ಅಸ್ತಿಕರ್, ಸಂಜಯ್ ದೇಶಮುಖ್, ಸಂಜಯ್ ಜಾಧವ್, ಸಂಜಯ್ ಪಾಟೀಲ್, ಓಂಪ್ರಕಾಶ್ ರಾಜೇ ನಿಂಬಾಳ್ಕರ್ ಮತ್ತು ಭಾವುಸಾಹೇಬ್ ವಾಕ್ಚೌರೆ ಸಭೆಗೆ ಗೈರಾಗಿದ್ದಾರೆ.

ಸ್ಪೀಕರ್‌ ಬಿರ್ಲಾಗೆ ಪತ್ರ- ಠಾಕ್ರೆ ಬಗ್ಗೆ ಕಿಡಿ:

ಇದರ ನಡುವೆ, 6 ಭಿನ್ನಮತೀಯ ಸಂಸದರು ಶಿಂಧೆ ನೇತೃತ್ವದ ಶಿವಸೇನೆಯೊಂದಿಗೆ ವಿಲೀನಗೊಳ್ಳುವ ಪತ್ರಕ್ಕೆ ಸಹಿ ಹಾಕಿದ್ದಾರೆ ಮತ್ತು ಅದನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.


‘ಕಾಂಗ್ರೆಸ್ಸಲ್ಲಿ ಶಿವಸೇನೆ (ಯುಬಿಟಿ) ವಿಲೀನಕ್ಕೆ ಪಕ್ಷದ ನಾಯಕ ಉದ್ಧವ್‌ ಠಾಕ್ರೆ ಠಾಕ್ರೆ ಚಿಂತನೆ ನಡೆಸುತ್ತಿದ್ದರು. ಹೀಗಾಗಿ ನಾವು ಬಂಡಾಯ ಶಿವಸೇನೆ (ಶಿಂಧೆ ಬಣ) ಸೇರಲು ನಿರ್ಧರಿಸಿದ್ದೇವೆ’ ಎಂದು ಅವರು ತಮ್ಮ ನಿರ್ಧಾರಕ್ಕೆ ಕಾರಣ ನೀಡಿದ್ದಾರೆ ಎಂದು ಗೊತ್ತಾಗಿದೆ.

ಆದರೆ ಅವರಿಗೆ ಶಿಂಧೆ ಸೇನೆಯ ಸದಸ್ಯರೆಂದು ಮಾನ್ಯತೆ ನೀಡುವ ಈ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಏಕೆಂದರೆ ಸ್ಪೀಕರ್ ಕಚೇರಿಯು ಪರಿಶೀಲನೆಗಾಗಿ ಕೆಲವು ಸಂಸದರ ಖುದ್ದು ಹಾಜರಾತಿಯನ್ನು ಬಯಸುತ್ತಿದೆ. ಆ ಬಳಿಕ ಮುಂದಿನ ಪ್ರಕ್ರಿಯೆ ನಡೆಯಲಿದೆ. ಸದ್ಯ ಸಹಿಗಳ ಪರಿಶೀಲನೆ ನಡೆಯುತ್ತಿದೆ ಎನ್ನಲಾಗಿದೆ.

ಭಿನ್ನಮತೀಯರ ವಿರುದ್ಧ ರಾವುತ್‌ ಗುಡುಗು:

ಭಿನ್ನಮತೀಯ ಸಂಸದರ ವಿರುದ್ಧ ಶಿವಸೇನೆಯ (ಯುಬಿಟಿ) ಏಕೈಕ ರಾಜ್ಯಸಭಾ ಸಂಸದ ಸಂಜಯ್ ರಾವುತ್ ‘ಗಾಂ**’ ಎಂಬ ಅಶ್ಲೀಲ ಪಪದ ಬಳಸಿ ವಾಗ್ದಾಳಿ ನಡೆಸಿದ್ದಾರೆ ಹಾಗೂ ವಿಪ್‌ ಉಲ್ಲಂಘಿಸಿದ ಬಂಡಾಯ ಸಂಸದರ ಅನರ್ಹತೆಗೆ ಕೋರಲಾಗುವುದು ಎಂದಿದ್ದಾರೆ.

‘ಬಂಡಾಯ ಸಂಸದರಿಗೆ 10 ಕೋಟಿ ರು. ನೀಡಿ ರಾಜಸ್ಥಾನದಲ್ಲಿ ಈಗ ಬಚ್ಚಿಡಲಾಗಿದೆ. ದೇಶದ್ರೋಹಿಗಳು ಮನೆಗೆ ಅಥವಾ ಅವರ ಕ್ಷೇತ್ರಗಳಿಗೆ ಹೋಗಲು ಸಾಧ್ಯವಿಲ್ಲ. ಅವರಿಗೆ ಸರಿಯಾದ ಪಾಠ ಕಲಿಸಲಾಗುವುದು. ಮನೆಗೆ ತಲುಪಲು ಅವರಿಗೆ ಭಾರತೀಯ ವಾಯುಪಡೆಯ ರಕ್ಷಣೆ ಬೇಕಾಗುತ್ತದೆ’ ಎಂದು ಬೆದರಿಕೆ ಹಾಕಿದ್ದಾರೆ. ಅಲ್ಲದೆ, ಪ್ರತಿಪಕ್ಷಗಳೂ ಇನ್ನು ‘ಆಪರೇಷನ್‌’ ಆರಂಭಿಸಲಿವೆ ಎಂದಿದ್ದಾರೆ.

ಅಮಿತ್‌ ಶಾರಿಂದ ದುಷ್ಟ ಯತ್ನ-ಕಾಂಗ್ರೆಸ್‌ ಕಿಡಿ:

ವಿರೋಧ ಪಕ್ಷಗಳಲ್ಲಿ ಪಕ್ಷಾಂತರದ ಬಿರುಗಾಳಿಯ ನಡುವೆಯೇ, ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಕಾಂಗ್ರೆಸ್ ನಾಯಕ ಜೈರಾಂ ರಮೇಶ್, ‘ಎನ್‌ಡಿಎ ಎಂದರೆ ‘ರಾಷ್ಟ್ರೀಯ ಪಕ್ಷಾಂತರಗಾರರ ಒಕ್ಕೂಟ’ (ನ್ಯಾಶನಲ್‌ ಡಿಫೆಕ್ಟರ್ಸ್‌ ಅಲಯನ್ಸ್‌). ಲೋಕಸಭೆಯಲ್ಲಿ 2/3ರಷ್ಟು ಬಹುಮತವನ್ನು ಒಟ್ಟುಗೂಡಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಯತ್ನಿಸುತ್ತಿದ್ದಾರೆ. ಅವರ ದುಷ್ಟ ಪ್ರಯತ್ನಗಳನ್ನು ತಡೆಯಲು ನಮ್ಮ ಪಕ್ಷದ ನಾಯಕತ್ವವು ಮಿತ್ರಪಕ್ಷಗಳೊಂದಿಗೆ ಸಂಪರ್ಕದಲ್ಲಿದೆ’ ಎಂದು ತಿಳಿಸಿದ್ದಾರೆ.

ಟಿಎಂಸಿ, ’ಸೇನಾ’ ಬಲದಿಂದ ಎನ್‌ಡಿಎ ಬಲ 324ಕ್ಕೆ

- 3ನೇ 2ರಷ್ಟು ಬಹುಮತಕ್ಕೆ 38 ಸಂಸದರ ಕೊರತೆ

ನವದೆಹಲಿ: ಇತ್ತೀಚೆಗೆ ಟಿಎಂಸಿಯ 20 ಸಂಸದರು ಬಂಡಾಯ ಎದ್ದು ಎನ್‌ಡಿಎಗೆ ಬೆಂಬಲಿಸಿದ್ದಾರೆ. ಇನ್ನು ಈಗ 6 ಶಿವಸೇನೆ (ಯುಬಿಟಿ) ಸಂಸದರೂ ಎನ್‌ಡಿಎ ಬೆಂಬಲಿಸುವ ನಿರ್ಧಾರ ಪ್ರಕಟಿಸಿದ್ದಾರೆ. ಇದರೊಂದಿಗೆ ಲೋಕಸಭೆಯಲ್ಲಿ ಎನ್‌ಡಿಎ ಬಲ 298ರಿಂದ 324ಕ್ಕೆ ಏರಲಿದೆ.

543 ಸದಸ್ಯ ಬಲದ ಸದನದಲ್ಲಿ 3ನೇ 2ರಷ್ಟು ಬಹುಮತಕ್ಕೆ ಎನ್‌ಡಿಎಗೆ 362 ಸೀಟು ಬೇಕು. ಹೀಗಾಗಿ ಇನ್ನೂ 38 ಸಂಸದರ ಕೊರತೆ ಬೀಳಲಿದೆ. 3ನೇ 2ರಷ್ಟು ಬಹುಮತವು ಕ್ಷೇತ್ರ ಮರುವಿಂಗಡಣೆ ಸೇರಿ ಸಾಂವಿಧಾನಿಕ ಮಸೂದೆಗಳ ಅಂಗೀಕಾರಕ್ಕೆ ಅಗತ್ಯ.