ಅರಕಲಗೂಡಿನ ವಿಜಾಪುರ ಅರಣ್ಯ ಗ್ರಾಮದಲ್ಲಿ ಆರೋಗ್ಯ ತಪಾಸಣಾ ಶಿಬಿರ

KannadaprabhaNewsNetwork | Published : May 31, 2024 2:15 AM

ಸಾರಾಂಶ

ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕ, ಗ್ರಾಮ ಪಂಚಾಯಿತಿ ವಿಜಾಪುರ ಅರಣ್ಯ ಜಂಟಿಯಾಗಿ ಅರಕಲಗೂಡು ತಾಲೂಕಿನ ವಿಜಾಪುರ ಅರಣ್ಯ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿತ್ತು.

ಉಚಿತ ಕಾರ್ಯಕ್ರಮ । ಏಡ್ಸ್ ಪ್ರಿವೆನ್ಷನ್ ಸೊಸೈಟಿ, ಆರೋಗ್ಯ ಇಲಾಖೆ, ವಿವಿಧ ಸಂಸ್ಥೆ ಆಯೋಜನೆ । 63 ಮಂದಿ ಆರೋಗ್ಯ ತಪಾಸಣೆ

ಕನ್ನಡಪ್ರಭ ವಾರ್ತೆ ಅರಕಲಗೂಡು

ತಾಲೂಕಿನ ವಿಜಾಪುರ ಅರಣ್ಯ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಹಾಸನ, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಮತ್ತು ಸಾರ್ವಜನಿಕ ಆಸ್ಪತ್ರೆಯ ಐಸಿಟಿಸಿ ವಿಭಾಗ ಹಾಗೂ ಚೈತನ್ಯ ಸಂಘ ಹಾಸನ ಮತ್ತು ಗ್ರಾಮ ಪಂಚಾಯಿತಿ ವಿಜಾಪುರ ಅರಣ್ಯ ಜಂಟಿಯಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿತ್ತು.

ತಪಾಸಣಾ ಶಿಬಿರವನ್ನು ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ರಾಜೇಗೌಡ ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಸಾರ್ವಜನಿಕ ಆಸ್ಪತ್ರೆಯ ಐಸಿಟಿಸಿ ವಿಭಾಗದ ಆಪ್ತ ಸಮಾಲೋಚಕ ಪರಶುರಾಮ್ ಶಿರೂರ ಮಾತನಾಡಿ, ಸರ್ಕಾರದ ಹಲವಾರು ಆರೋಗ್ಯ ಸೇವೆಯನ್ನು ಜನರಿಗೆ ತಲುಪಿಸುವುದು ಈ ಶಿಬಿರಗಳ ಮುಖ್ಯ ಉದ್ದೇಶವಾಗಿದೆ. ಆರೋಗ್ಯ ಸೇವೆಯನ್ನು ತಲುಪಿಸುವಂತಹ ಕೆಲಸ ಮಾಡುತ್ತಿದೆ. ಆರೋಗ್ಯ ಇಲಾಖೆಯು ಎಲ್ಲರಿಗೂ ಆರೋಗ್ಯ, ಎಲ್ಲೆಡೆಯೋ ಆರೋಗ್ಯ ಎನ್ನುವ ನಿಟ್ಟಿನಲ್ಲಿ ಪ್ರತಿಯೊಬ್ಬ ನಾಗರಿಕನು ಉತ್ತಮ ಆರೋಗ್ಯವಂತ ವ್ಯಕ್ತಿ ಆಗಿರಬೇಕು ಎಂಬ ಉದ್ದೇಶದಿಂದ ಸರ್ಕಾರವು ಈ ರೀತಿಯ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಂಡಿದೆ ಎಂದು ಹೇಳಿದರು.

ಉತ್ತಮ ಪೌಷ್ಟಿಕಾಂಶವುಳ್ಳ ಆಹಾರಗಳನ್ನು ಸೇವಿಸುವುದರ ಮೂಲಕ ಉತ್ತಮ ಆರೋಗ್ಯವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು. ಸರ್ಕಾರದಿಂದ ಸಿಗುವಂತಹ ಹಲವಾರು ಸವಲತ್ತುಗಳು ಲಭ್ಯವಿದ್ದು ನಾಗರಿಕರು ಅದರ ಸದುಪಯೋಗ ಮಾಡಿಕೊಳ್ಳಬೇಕೆಂದು ಆಯುಷ್ಮಾನ್ ಭಾರತ ಕಾರ್ಡ್‌ ಅನ್ನು ಪ್ರತಿಯೊಬ್ಬರು ಮಾಡಿಸಿಕೊಳ್ಳುವುದರ ಮೂಲಕ ಸರ್ಕಾರದಿಂದ ಸಿಗುವಂತ ಉಚಿತ ಆರೋಗ್ಯ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಹಾಗೂ ತಾಲೂಕಿನ ಕೆಲವು ಗ್ರಾಮಗಳಲ್ಲಿ ಡೆಂಘೀ ಪ್ರಕರಣಗಳು ಕಂಡು ಬರುತ್ತಿವೆ. ಸಾರ್ವಜನಿಕರು ತಮ್ಮ ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಸೊಳ್ಳೆಯಿಂದ ರಕ್ಷಣೆ ಪಡೆಯುವಂತಹ ಮಾರ್ಗೋಪಾಯಗಳನ್ನು ಅನುಸರಿಸಿಕೊಂಡು ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ರಕ್ತ ತಪಾಸಣೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು. ಜನರು ಈ ರೀತಿಯ ಉಚಿತ ತಪಾಸಣಾ ಶಿಬಿರಗಳಲ್ಲಿ ಭಾಗವಹಿಸಿ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.

ಈ ಶಿಬಿರದಲ್ಲಿ ಸುಮಾರು 63 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. 63 ಜನರು ಮಧುಮೇಹ, ಅಧಿಕ ರಕ್ತದ ಒತ್ತಡ, ಎಚ್ಐವಿ ಹಾಗೂ ಕ್ಷಯ ರೋಗ ಪರೀಕ್ಷೆಯನ್ನು ಮಾಡಿಸಿಕೊಂಡರು. ಶಿಬಿರದಲ್ಲಿ ಮಲ್ಲಿಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಕರಾದ ಲೋಕೇಶ್, ಐಸಿಟಿಸಿ ಪ್ರಯೋಗಶಾಲಾ ತಂತ್ರಜ್ಞರಾದ ಗೌರಮ್ಮ ಹಾಗೂ ಎನ್‌ಸಿಡಿ ವಿಭಾಗದ ಆಪ್ತ ಸಮಾಲೋಚಕ ಉಮೇಶ್, ಶುಶ್ರೂಷಕಿ ಲಲಿತಾ, ಹಾಸನದ ಚೈತನ್ಯ ಸಂಘದ ಕ್ಷೇತ್ರ ಕಾರ್ಯಕರ್ತ ಚಂದ್ರಶೇಖರ್, ಆಶಾ ಕಾರ್ಯಕರ್ತೆಯರು, ಪಂಚಾಯಿತಿಯ ಸಿಬ್ಬಂದಿ ಭಾಗವಹಿಸಿದ್ದರು.

Share this article