ಕನ್ನಡಪ್ರಭ ವಾರ್ತೆ ಅರಕಲಗೂಡು
17ರ ಶುಕ್ರವಾರ ಮಧ್ಯಾಹ್ನ 12.35 ರಿಂದ 1.46ಕ್ಕೆ ಸಲ್ಲುವ ಮೇಷ ಲಗ್ನದಲ್ಲಿ ಶ್ರೀ ಅರಸೀಕಟ್ಟೆ ಅಮ್ಮನವರ ರಥೋತ್ಸವ ಜರುಗಲಿದೆ. ಹಾಸನ ಜಿಲ್ಲೆ ಸೇರಿದಂತೆ ಕೊಡಗು ಜಿಲ್ಲೆಯ ಸಹಸ್ರಾರು ಭಕ್ತರ ಇಷ್ಟ ದೇವತೆ, ಶಕ್ತಿ ದೇವತೆ ಅರಸೀಕಟ್ಟೆ ಅಮ್ಮ ದೇವಿ ಜಾತ್ರಾ ಮಹೋತ್ಸವದ ನಿಮಿತ್ತ ಪೂಜಾ ವಿಶೇಷಗಳ ಜೊತೆಗೆ 2 ದಿನಗಳ ಕಾಲ ದೇವಾಲಯ ಸಮಿತಿಯು ಆಯೋಜಿಸಿರುವ ವೈವಿಧ್ಯಮಯ ಚಟುವಟಿಕೆಗಳು ಭಕ್ತರ ಮತ್ತು ಜನಮನಗೆಲ್ಲಲಿವೆ.
ಜ. 17ರ ಶುಕ್ರವಾರ ಬೆಳಗ್ಗೆ 8ಗಂಟೆಗೆ ದೇವಾಲಯದ ಆವರಣದಲ್ಲಿ ಗ್ರಾಮೀಣ ಸ್ಪರ್ಧೆಗಳು ಪ್ರಾರಂಭಗೊಳ್ಳಲಿವೆ. ಪುರುಷರಿಗಾಗಿ ಗೋಣಿಚೀಲದ ಓಟ, ಮೂರುಕಾಲು ಓಟ, ಒಂಟಿಕಾಲು ಓಟ, ಕಾಯಿ ಒಡೆಯುವ ಸ್ಫರ್ಧೆ, ಕೋಲಾಟ ಸ್ಪರ್ಧೆಗಳು, ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ನೀರು ತುಂಬಿದ 2 ಬಿಂದಿಗೆಗಳನ್ನು ಹೊತ್ತು ಓಡುವುದು, ಚಮಚದಲ್ಲಿ ನಿಂಬೆಹಣ್ಣಿಟ್ಟುಕೊಂಡು ಓಡುವುದು, ಕುಂಟಬಿಲ್ಲೆ ಮತ್ತು ಪುರುಷರು ಮತ್ತು ಮಹಿಳೆಯರಿಗಾಗಿ ಹಗ್ಗಜಗ್ಗಾಟ, ಕಣ್ಣುಕಟ್ಟಿಕೊಂಡು ಮಡಿಕೆ ಒಡೆಯುವುದು, ಹಾಗೂ 16ವರ್ಷದ ಮಕ್ಕಳಿಗೆ ಸ್ಲೋ ಸೈಕಲ್ ರೇಸ್, ಸಂಗೀತ ಕುಚಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.ಏಕವ್ಯಕ್ತಿ ಸ್ಪರ್ಧೆಗಳಿಗೆ ಪ್ರಥಮ 1 ಸಾವಿರ ರು, ದ್ವಿತೀಯ 750 ರು. ಮತ್ತು ತೃತೀಯ ಬಹುಮಾನವಾಗಿ 500 ರು. ನಿಗದಿತ ಮಾಡಲಾಗಿದೆ. ಗುಂಪು ಸ್ಪರ್ಧೆಗಳಾದ ಕೋಲಾಟ ಮತ್ತು ಹಗ್ಗಜಗ್ಗಾಟಗಳಿಗೆ ಪ್ರಥಮ 3 ಸಾವಿರ, ದ್ವಿತೀಯ 2 ಸಾವಿರ ಮತ್ತು ತೃತೀಯ 1 ಸಾವಿರ ರು. ನಗದು ಬಹುಮಾನ ಮತ್ತು ಪ್ರಶಂಸನಾ ಪತ್ರ ದೊರೆಯಲಿದೆ.17ರ ಶುಕ್ರವಾರ ಬೆಳಿಗ್ಗೆ 7.30ಕ್ಕೆ ರಾಮನಾಥಪುರದ ಬಸವೇಶ್ವರ ಸರ್ಕಲ್‌ನಿಂದ ಕೊಣನೂರು, ಕೆರೆಕೋಡಿ ಮಾರ್ಗವಾಗಿ ಅರಸೀಕಟ್ಟೆಯವರೆಗೆ ಮ್ಯಾರಥಾನ್ ರನ್ನಿಂಗ್ ರೇಸ್ ಸ್ಪರ್ಧೆ ಇದ್ದು, ವಿಜೇತರಿಗೆ ಪ್ರಥಮ 5 ಸಾವಿರ, ದ್ವಿತೀಯ 4 ಸಾವಿರ ಮತ್ತು ತೃತೀಯ 3 ಸಾವಿರ ರು. ನಗದು ಬಹುಮಾನವಿರುತ್ತದೆ.
ಅರಸೀಕಟ್ಟೆ ಅಮ್ಮ ದೇವಿಗೆ ರಥೋತ್ಸವ ಮತ್ತು ಜಾತ್ರಾಮಹೋತ್ಸವದ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುವ ಹಿನ್ನೆಲೆಯಲ್ಲಿ ಜ.16ರಿಂದ ಮತ್ತು 18 ರಂದು ಮೂರು ದಿನಗಳ ಕಾಲ ಕ್ಷೇತ್ರದಲ್ಲಿ ಬಲಿ ಕೊಡುವುದನ್ನು ನಿಷೇಧಿಸಲಾಗಿದೆ.