ಬಿ.ರಾಮಪ್ರಸಾದ್ ಗಾಂಧಿ
ಹರಪನಹಳ್ಳಿ: ತಾಲೂಕಿನ ಜಗಳೂರು ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಅರಸೀಕೆರೆಯಿಂದ ಉಚ್ಚಂಗಿದುರ್ಗಕ್ಕೆ ಸಂಚರಿಸುವ ರಾಜ್ಯ ಹೆದ್ದಾರಿ ವಿಪರೀತ ಹಾಳಾಗಿದೆ. ಈ ಭಾಗದ ಜನತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಪ್ರತಿದಿನ ಹಿಡಿಶಾಪ ಹಾಕುತ್ತಿದ್ದಾರೆ.ಅರಸೀಕೆರೆಯಿಂದ ಉಚ್ಚಂಗಿದುರ್ಗಕ್ಕೆ 13 ಕಿ.ಮೀ. ದೂರವಿದೆ. ಉಚ್ಚಂಗಿದುರ್ಗದಲ್ಲಿ ಪಾಳೇಗಾರರ ಕಾಲದಲ್ಲಿ ವೈಭವದಿಂದ ಮೆರೆದು ಈಗ ಹಾಳಾದ ಏಳು ಸುತ್ತಿನ ಕೋಟೆ, ಕೊತ್ತಲು ಇದೆ. ಈ ಬೆಟ್ಟದ ತುತ್ತ ತುದಿಗೆ ಇತಿಹಾಸ ಪ್ರಸಿದ್ಧ ಉಚ್ಚಂಗೆಮ್ಮ ದೇವಾಲಯವಿದೆ. ಈ ದೇವಸ್ಥಾನಕ್ಕೆ ಮಂಗಳವಾರ, ಶುಕ್ರವಾರ ಹಾಗೂ ಹುಣ್ಣಿಮೆ ದಿನಗಳಂದು ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸಿ ದೇವಿ ದರ್ಶನ ಪಡೆಯುತ್ತಾರೆ. ಭರತ ಹುಣ್ಣಿಮೆ ಹಾಗೂ ಜಾತ್ರಾ ಸಮಯದಲ್ಲಿ ಭಕ್ತರ ಸಂಖ್ಯೆ ಇನ್ನೂ ಹೆಚ್ಚಳವಾಗುತ್ತದೆ. ಆ ಎಲ್ಲ ಭಕ್ತರು ಬರುವುದು ಈ ರಾಜ್ಯ ಹೆದ್ದಾರಿ 47ರಲ್ಲಿಯೇ. ಈ ರಸ್ತೆಯಲ್ಲಿ ಪ್ರತಿದಿನ 5-6 ಸಾವಿರ ವಾಹನಗಳು ಸಂಚರಿಸುತ್ತವೆ. ಮಂಗಳವಾರ, ಶುಕ್ರವಾರ, ಹುಣ್ಣಿಮೆ ದಿನ ಇನ್ನೂ ಹೆಚ್ಚು ವಾಹನಗಳು ಈ ಮಾರ್ಗವಾಗಿ ದೇವಿ ದರ್ಶನಕ್ಕೆ ಬರುತ್ತವೆ. ಆದರೆ ವಿಪರ್ಯಾಸ ಎಂದರೆ ಈ ರಸ್ತೆ ಎಷ್ಟು ಹದಗೆಟ್ಟಿದೆ ಎಂದರೆ ಹೇಳಲಸಾಧ್ಯ. ಗರ್ಭಿಣಿಯರು ಹೆರಿಗೆಗೆ ದಾವಣಗೆರೆಗೆ ಹೋದರೆ ಮಾರ್ಗ ಮಧ್ಯದಲ್ಲಿಯೇ ಹೆರಿಗೆ ಆಗುವ ಸಂಭವವಿದೆ. ಇತರ ರೋಗಿಗಳದ್ದು ಸಂಚಾರ ಕಷ್ಟ.ಈ ರಸ್ತೆಯಲ್ಲಿ ಅಪಘಾತಗಳಿಗೇನು ಕಡಿಮೆ ಇಲ್ಲ. ಸಾಕಷ್ಟು ಜನರು ಬೈಕ್ ಮೇಲಿಂದ ಬಿದ್ದು ಕೈ ಕಾಲು ಮುರಿದುಕೊಂಡಿದ್ದಾರೆ.
2022ರಲ್ಲಿ ಮಾತ್ರ ಈ ಭಾಗದಲ್ಲಿ ಆಯ್ದ ಸ್ಥಳಗಳಲ್ಲಿ ಮಾತ್ರ ಕೇವಲ 5 ಕಿ.ಮೀ. ಕಾಂಕ್ರಿಟ್ ರಸ್ತೆ ನಿರ್ಮಾಣವಾಗಿದ್ದು ಬಿಟ್ಟರೆ ಸುಮಾರು ವರ್ಷಗಳಿಂದ ಈ ಭಾಗದ ರಸ್ತೆ ಅಭಿವೃದ್ಧಿಗೊಂಡಿಲ್ಲ. ಮಳೆ ಬಂದರಂತೂ ಈ ರಸ್ತೆಯ ಸ್ಥಿತಿ ಹೇಳತೀರದು. ಸಾಕಷ್ಟು ದೊಡ್ಡ ಗುಂಡಿಗಳು ಬಿದ್ದಿವೆ. ಮಳೆನೀರು ತುಂಬಿ ಕೆರೆಯಂತಾಗಿ ಬಿಡುತ್ತದೆ. ಅ.8ರ ರಾತ್ರಿ ಮಳೆ ಬಂದಿದ್ದರಿಂದ ಅ.9ರ ಬೆಳಿಗ್ಗೆ ಎಂಟು ಗಂಟೆವರೆಗೆ ನೀರು ಸರಿದಿಲ್ಲ. ಸಂಚಾರ ಬಂದ್ ಆಗಿತ್ತು.ಈ ಸಂಬಂಧ ಇಲ್ಲಿಯ ಜನರು ಅನೇಕ ಭಾರಿ ಸಂಬಂಧ ಪಟ್ಟವರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಈಗಲೂ ಜನಪ್ರತಿನಿಧಿಗಳು, ಅಧಿಕಾರಿಗಳು ಎಚ್ಚೆತ್ತುಕೊಂಡು ರಸ್ತೆ ಅಭಿವೃದ್ಧಿ ಪಡಿಸದಿದ್ದರೆ ಉಗ್ರ ಹೋರಾಟ ಮಾಡಲು ಸಿದ್ಧತೆ ನಡೆಸಿದ್ದಾರೆ.
ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಅರಸೀಕೆರೆ, ಉಚ್ಚಂದುರ್ಗ ರಸ್ತೆ ವಿಪರೀತ ಹಾಳಾಗಿದೆ. ಬೇಗ ಅಭಿವೃದ್ಧಿ ಪಡಿಸಬೇಕು. ಇಲ್ಲದಿದ್ದರೆ ರಸ್ತೆ ಗುಂಡಿಗಳಲ್ಲಿ ಭತ್ತ, ರಾಗಿ ನಾಟಿ ಮಾಡಿ ಹೋರಾಟ ಮಾಡುತ್ತೇವೆ ಎನ್ನುತ್ತಾರೆ ರೈತ ಮುಖಂಡ ಪಣಿಯಾಪುರ ಲಿಂಗರಾಜ.ಅರಸೀಕೆರೆ- ಉಚ್ಚಂಗಿದುರ್ಗ ರಸ್ತೆ ಕಥೆ ಹೇಳತೀರದು. ತಮ್ಮದೇ ಸರ್ಕಾರವಿದ್ದಾಗಲೂ ಈ ಭಾಗದ ಶಾಸಕರು ರಸ್ತೆ ಅಭಿವೃದ್ಧಿ ಪಡಿಸಿಲ್ಲ. ನಮ್ಮ ಭಾಗಕ್ಕೆ ಮಲತಾಯಿ ಧೋರಣೆ ಆಗುತ್ತಿದೆ. ಉಗ್ರ ಹೋರಾಟ ಅನಿವಾರ್ಯ ಎನ್ನುತ್ತಾರೆ ಅಖಿಲ ಭಾರತ ಕಿಸಾನ್ ಸಭಾ ಜಿಲ್ಲಾದ್ಯಕ್ಷ ಗುಡಿಹಳ್ಳಿ ಹಾಲೇಶ.
ಅರಸೀಕೆರೆ -ಉಚ್ಚಂಗಿದುರ್ಗ ರಸ್ತೆ ಅಭಿವೃದ್ಧಿಗೆ ಜಗಳೂರು ಶಾಸಕರು ಎಸ್.ಎಚ್.ಡಿಪಿ ಯೋಜನೆಯಲ್ಲಿ ಸೇರಿಸಿದ್ದಾರೆ. ಪ್ರಸ್ತಾವನೆ ಕಳಿಸಲಾಗಿದೆ. ಇನ್ನೂ ಅನುಮೋದನೆ ಸಿಕ್ಕಿಲ್ಲ ಎನ್ನುತ್ತಾರೆ ಎಇಇ, ಹರಪನಹಳ್ಳಿ ಲೋಕೋಪಯೋಗಿ ಇಲಾಖೆ ರಾಘವೇಂದ್ರ.ಅರಸೀಕೆರೆ- ಉಚ್ಚಂಗಿದುರ್ಗ ಮಾರ್ಗದಲ್ಲಿ ರಸ್ತೆಯೇ ಇಲ್ಲ. ಇಷ್ಟು ವರ್ಷ ಯಾರ ದೃಷ್ಟಿ ಬಿದ್ದಿಲ್ಲ ಎನ್ನುವುದೇ ದುರದೃಷ್ಟದ ಸಂಗತಿ. ಶೀಘ್ರ ದಿನಾಂಕ ನಿಗದಿ ಮಾಡಿ ಹೋರಾಟದ ನೇತೃತ್ವ ವಹಿಸುತ್ತೇನೆ ಎನ್ನುತ್ತಾರೆ ಪಾಂಡೊಮಟ್ಟಿ ಕಮ್ಮತ್ತಹಳ್ಳಿ ವಿರಕ್ತ ಮಠ ಗುರುಬಸವ ಸ್ವಾಮೀಜಿ.