ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ಕುವೆಂಪು ರಂಗಮಂದಿರದಲ್ಲಿ ಗುರುವಾರ ಜಿಲ್ಲಾಡಳಿತ, ಜಿಪಂ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ಡಿ. ದೇವರಾಜ ಅರಸುರವರ 111ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಿಂದುಳಿದ ವರ್ಗಗಳ ಉದ್ದಾರಕ, ಸಾಮಾಜಿಕ ಹರಿಕಾರ ಡಿ.ದೇವರಾಜ ಅರಸುರವರು ಕೇವಲ ಆಡಳಿತಗಾರನಾಗಿ ಉಳಿಯದೆ, ಶೋಷಿತ ಸಮುದಾಯಗಳಿಗೆ ರಾಜಕೀಯ ಮತ್ತು ಸಾಮಾಜಿಕ ಧ್ವನಿ ನೀಡುವ ಮೂಲಕ ಕರ್ನಾಟಕದ ರಾಜಕಾರಣದ ದಿಕ್ಕನ್ನೇ ಬದಲಿಸಿದ ಅಪರೂಪದ ಜನನಾಯಕ ಡಿ. ದೇವರಾಜ ಅರಸು. ಭೂಸುಧಾರಣೆ, ಮೀಸಲಾತಿ ಹಾಗೂ ಜೀತಪದ್ಧತಿ ನಿರ್ಮೂಲನೆಯಂತಹ ಕ್ರಾಂತಿಕಾರಿ ಹೆಜ್ಜೆಗಳ ಮೂಲಕ ಅವರು ಬರೆದ ಸಾಮಾಜಿಕ ನ್ಯಾಯದ ಇತಿಹಾಸ ಇಂದಿಗೂ ಸಾರ್ವಕಾಲಿಕ ಎಂದರು.
ಕುವೆಂಪು ವಿವಿ ಪ್ರಾಧ್ಯಾಪಕರಾದ ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಉಪನ್ಯಾಸ ನೀಡಿ, ಮುಂದಣ ಅಭಿವೃದ್ಧಿಗೆ ಹಿಂದಣ ಅವಲೋಕನ ಅತಿ ಅಗತ್ಯ. ಡಿ.ದೇವರಾಜ ಅರಸುರವದ್ದು ಜೀವಂತ ಚರಿತ್ರೆ. ಅವರದ್ದು ಅನುಭವ ರೂಪಿತ, ತೆಂಗಿನ ಮರದಂತಹ ವ್ಯಕ್ತಿತ್ವ. ಅರಸುರವರ ಜೀವನ ಚರಿತ್ರೆಗೆ ವಿಶಿಷ್ಟ ಸ್ಥಾನ ಇದೆ. ರೈತರು, ಕಾರ್ಮಿಕರು, ಜಲಗಾರರು, ಕುಶಲಕರ್ಮಿ ಸೇರಿದಂತೆ ಎಲ್ಲ ಹಿಂದುಳಿದ ವರ್ಗಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟವರು ಎಂದು ತಿಳಿಸಿದರು.ಕೃಷಿ ಮತ್ತು ಹಳ್ಳಿ ಬದುಕನ್ನು ಪ್ರೀತಿಸಿದ ಇವರು ಜನರ ನೋವು, ನಲಿವಿಗೆ ಸ್ಪಂದಿಸಿದ ವಿಶೇಷ ವ್ಯಕ್ತಿ. ಪ್ರಪ್ರಥಮವಾಗಿ ಜೀತ ಮುಕ್ತಗೊಳಿಸಿದ ಇವರು ಕನಿಷ್ಟ ಕೂಲಿ, ಋಣ ಪರಿಹಾರ ಕಾಯ್ದೆ, ನೀರಾವರಿಗೆ ಪ್ರೋತ್ಸಾಹ, ಮಣ್ಣು ಸಂರಕ್ಷಿಸುವ ಕಾಯ್ದೆ, ಗೃಹ ನಿರ್ಮಾಣ, ಸರ್ವರಿಗೂ ಶಿಕ್ಷಣ, ಮಲ ಹೊರುವ ಪದ್ದತಿ ನಿಷೇಧ, ಪೌರ ಕಾರ್ಮಿಕವೇತನ, ವೃದ್ಧಾಪ್ಯ ವೇತನ, ಮಾಸಾಶನ, ವೃಕ್ಷ ಸಂರಕ್ಷಣೆ ಕಾಯ್ದೆ ಹೀಗೆ ಹಿಂದುಳಿದವರ ಉದ್ದಾರಕ್ಕೆ ನಾನಾ ಕಾಯ್ದೆ ಜಾರಿಗೆ ತಂದರು. ಕರ್ನಾಟಕದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಚಿತ್ರಣವನ್ನು ಬದಲಿಸಿದ ಇವರು ಭೂ ಸುಧಾರಣೆ ಕಾಯ್ದೆ ಜಾರಿಗೆ ತಂದು ಶಾಶ್ವತವಾಗಿ ಇತಿಹಾಸದ ಪುಟ ಸೇರಿದ್ದಾರೆ. ಇಂತಹ ವ್ಯಕ್ತಿಯ ತತ್ವಗಳ ಅನುಷ್ಟಾನಕ್ಕೆ ನಾವೆಲ್ಲ ಶ್ರಮಿಸಿದರೆ ಅವರ ಜಯಂತಿ ಆಚರಣೆ ಸಾರ್ಥಕವಾದಂತೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ವಿ.ರಾಜು ಮಾತನಾಡಿ, ನಗರದಲ್ಲಿ ಅರಸುರವರ ಭವನಕ್ಕೆ ಈಗಾಗಲೇ 1 ಕೋಟಿ ರು. ಖರ್ಚಾಗಿದ್ದು, ಉಳಿದ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕೆಂದು ಮನವಿ ಮಾಡಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಆರ್.ಅವಿನ್ ಸ್ವಾಗತಿಸಿದರು. ಹಿಂದುಳಿದ ವರ್ಗಗಳ, ದಲಿತ ಒಕ್ಕೂಟದ ಪದಾಧಿಕಾರಿಗಳು, ವಿವಿಧ ಸಂಘಟನೆಯ ಮುಖಂಡರು, ಜಿಲ್ಲಾ ಮಟ್ಟದ ಅಧಿಕಾರಿಗಳು, ವಿದ್ಯಾರ್ಥಿಗಳು ಹಾಜರಿದ್ದರು.