ಹಿಂದುಳಿದ ವರ್ಗಗಳ ಸಾಮಾಜಿಕ ನ್ಯಾಯದ ದನಿ ಅರಸು

KannadaprabhaNewsNetwork |  
Published : Aug 21, 2025, 01:00 AM IST
ದೊಡ್ಡಬಳ್ಳಾಪುರದ ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಬುಧವಾರ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸ್‌ ಮತ್ತು ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. | Kannada Prabha

ಸಾರಾಂಶ

ದೊಡ್ಡಬಳ್ಳಾಪುರ: ಹಿಂದುಳಿದ ವರ್ಗಗಳ ಸಮಗ್ರ ಅಭ್ಯುದಯದ ಆಶಯವನ್ನು ಬಿತ್ತುವ ಮೂಲಕ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ವ್ಯವಸ್ಥಿತವಾಗಿ ಜಾರಿಗೆ ತಂದ ಕೀರ್ತಿ ಡಿ.ದೇವರಾಜ ಅರಸು ಅವರಿಗೆ ಸಲ್ಲುತ್ತದೆ ಎಂದು ಶ್ರೀ ದೇವರಾಜ್‌ ಅರಸ್‌ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಜೆ.ರಾಜೇಂದ್ರ ಹೇಳಿದರು.

ದೊಡ್ಡಬಳ್ಳಾಪುರ: ಹಿಂದುಳಿದ ವರ್ಗಗಳ ಸಮಗ್ರ ಅಭ್ಯುದಯದ ಆಶಯವನ್ನು ಬಿತ್ತುವ ಮೂಲಕ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ವ್ಯವಸ್ಥಿತವಾಗಿ ಜಾರಿಗೆ ತಂದ ಕೀರ್ತಿ ಡಿ.ದೇವರಾಜ ಅರಸು ಅವರಿಗೆ ಸಲ್ಲುತ್ತದೆ ಎಂದು ಶ್ರೀ ದೇವರಾಜ್‌ ಅರಸ್‌ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಜೆ.ರಾಜೇಂದ್ರ ಹೇಳಿದರು.

ಇಲ್ಲಿನ ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳು ಹಾಗೂ ಲಯನ್ಸ್‌ ಕ್ಲಬ್‌, ಎನ್‌ಎಸ್‌ಎಸ್‌ ನೇತೃತ್ವದಲ್ಲಿ ಬುಧವಾರ ಆಯೋಜಿಸಲಾಗಿದ್ದ ಹಿಂದುಳಿದ ವರ್ಗಗಳ ಹರಿಕಾರ ಡಿ.ದೇವರಾಜ ಅರಸ್‌ ಹಾಗೂ ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಜನ್ಮದಿನಾಚರಣೆ, ಸದ್ಭಾವನಾ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅರಸು ಹಾಗೂ ರಾಜೀವ್‌ಗಾಂಧಿ ತಮ್ಮ ಕಾರ್ಯವ್ಯಾಪ್ತಿ ಮತ್ತು ಆಲೋಚನಾ ಬದ್ದತೆಯಿಂದ ದೇಶದ ಭವಿಷ್ಯವನ್ನು ಸದೃಢಗೊಳಿಸಿದ್ದಾರೆ. ಜಾಲಪ್ಪನವರ ರಾಜಕಾರಣದ ದಿಕ್ಕುದೆಸೆಯನ್ನು ಸ್ಪಷ್ಟಗೊಳಿಸಿದ್ದು ದೇವರಾಜ್‌ ಅರಸ್‌. ಹೀಗಾಗಿಯೇ ಅವರ ಹೆಸರನ್ನೇ ವಿದ್ಯಾ ಸಂಸ್ಥೆಗೆ ಇಡಲಾಗಿದೆ. ಎಲ್ಲ ವರ್ಗಗಳ ದನಿಯಾಗಿ, ಯುವಜನರ ಆಶೋತ್ತರಗಳನ್ನು ಪ್ರಭಾವಿಸಿದ್ದು, ಅವರ ಆದರ್ಶಗಳು ಪಾಲನೀಯ ಎಂದರು.

ಆರ್.ಎಲ್.ಜಾಲಪ್ಪ ಲಯನ್ಸ್‌ ಸಂಸ್ಥೆಯ ಅಧ್ಯಕ್ಷ ಪ್ರೊ.ಕೆ.ಆರ್.ರವಿಕಿರಣ್‌ ಮಾತನಾಡಿ, ದೇವರಾಜ ಅರಸ್‌ ಮುಖ್ಯಮಂತ್ರಿಗಳಾಗಿದ್ದ ವೇಳೆ ಉಳುವವನೇ ಭೂಮಿಯ ಒಡೆಯ ಎಂಬ ಘೋಷವಾಕ್ಯದಡಿ ಭೂ ಒಡೆತನವನ್ನು ಶೋಷಿತವರ್ಗಗಳಿಗೆ ನೀಡಿದರು. ಎಲ್.ಜಿ.ಹಾವನೂರ್‌ ಅವರ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸಿ, ಪ್ರಬಲ ಸಮುದಾಯಗಳ ನಡುಗೆ ಹಿಂದುಳಿದ ವರ್ಗಗಳಿಗೂ ಅವಕಾಶ ಮತ್ತು ಸಮಾನತೆಯನ್ನು ಒದಗಿಸುವ ಸಂಕಲ್ಪ ಮಾಡಿದರು. ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಿದ ಹೆಗ್ಗಳಿಕೆ ಅವರದು. ಆರ್.ಎಲ್.ಜಾಲಪ್ಪನವರ ರಾಜಕೀಯ ನಡೆಯಲ್ಲಿ ಅರಸು ಅವರ ಒತ್ತಾಸೆ ಪ್ರಮುಖ ಎಂದು ಅಭಿಪ್ರಾಯಪಟ್ಟರು.

ಯುವಜನರ ಶಕ್ತಿಯಾಗಿದ್ದ ರಾಜೀವ್‌ಗಾಂಧಿ ಡಿಜಿಟಲ್‌ ಇಂಡಿಯಾದ ಪರಿಕಲ್ಪನೆಯನ್ನು ಜಾರಿಗೆ ತರುವ ಸಾಹಸ ಮಾಡಿದವರು. ಆರಂಭಿಕ ಕಾಲಘಟ್ಟದಲ್ಲಿ ದೂರ ಸಂಪರ್ಕ ಕ್ರಾಂತಿಗೆ ಮುನ್ನುಡಿ ಬರೆದ ಅವರು, ಮತದಾನದ ಹಕ್ಕು ವಯೋಮಿತಿಯನ್ನು 18 ವರ್ಷಕ್ಕೆ ಇಳಿಸುವ ಮೂಲಕ ಯುವಶಕ್ತಿಯ ಪ್ರೇರಕರಾದರು. ಅವರ ಜನ್ಮದಿನದ ಸಂದರ್ಭದಲ್ಲಿ ಸದ್ಭಾವನಾ ದಿನಾಚರಣೆ ಆಚರಿಸುತ್ತಿರುವುದು ಅರ್ಥಪೂರ್ಣ ಎಂದರು.

ಇದೇ ವೇಳೆ ಸದ್ಭಾವನಾ ದಿನದ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಲಾಯಿತು. ವಿದ್ಯಾ ಸಂಸ್ಥೆಯ ಗೌರ್ನಿಂಗ್‌ ಕೌನ್ಸಿಲ್‌ ಸದಸ್ಯರಾದ ಎನ್.ತೇಜಸ್ವಿನಿ, ಜೆ.ಆರ್.ರಾಕೇಶ್, ವಿದ್ವತ್‌, ಮಾನವ ಸಂಪನ್ಮೂಲ ನಿರ್ದೇಶಕ ಎನ್.ಎಸ್.ಬಾಬುರೆಡ್ಡಿ, ಡೀನ್‌ ಡಾ.ಶ್ರೀನಿವಾಸರೆಡ್ಡಿ, ವಿವಿಧ ಶೈಕ್ಷಣಿಕ ಘಟಕಗಳ ಪ್ರಾಂಶುಪಾಲರಾದ ಡಾ.ವಿಜಯ್‌ಕಾರ್ತಿಕ್‌, ಡಾ.ಗೌರಪ್ಪ, ಡಾ.ನರಸಿಂಹರೆಡ್ಡಿ, ಡಾ.ಚಿಕ್ಕಣ್ಣ, ಮಹಂತೇಶಪ್ಪ, ರವಿಕುಮಾರ್, ಧನಂಜಯ್, ಜಿಯಾವುಲ್ಲಾಖಾನ್, ಉಪಪ್ರಾಂಶುಪಾಲ ಡಾ.ಶಿವಪ್ರಸಾದ್, ವ್ಯವಸ್ಥಾಪಕ ಯತಿನ್, ದೈಹಿಕ ಶಿಕ್ಷಣ ನಿರ್ದೇಶಕ ದಾದಾಫೀರ್, ವಿವಿಧ ಘಟಕಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿ ಪಾಲ್ಗೊಂಡರು. 

PREV
Read more Articles on

Recommended Stories

‘ಪಿಒಪಿ ಗಣಪ ಬಳಸಲ್ಲ’ ಮುಚ್ಚಳಿಕೆ ಬರೆಸಿ ಉತ್ಸವಕ್ಕೆ ಒಪ್ಪಿಗೆ: ಖಂಡ್ರೆ
ಕರ್ನಾಟಕದಲ್ಲಿ ಅಡಕೆ ಕ್ಯಾನ್ಸರ್‌ ಕಾರಕವೇ? : ಶೀಘ್ರ ವರದಿಗೆ ಕೃಷಿ ಸಚಿವ ಚೌಹಾಣ್ ಸೂಚನೆ