ಕನ್ನಡಪ್ರಭ ವಾರ್ತೆ ಹಾಸನ
ಬೇಲೂರು ತಾಲೂಕು ಕಚೇರಿ ಮುಂಭಾಗದಲ್ಲಿ ನಾಡೋಜ ಸಾಲುಮರದ ತಿಮ್ಮಕ್ಕರವರು ನೆಟ್ಟು ಬೆಳೆಸಿದ್ದ ಮರಗಳನ್ನು ತೆರವು ಮಾಡಿರುವ ತಹಸೀಲ್ದಾರ್‌ರನ್ನು ಅಮಾನತು ಮಾಡಬೇಕು ಹಾಗೂ ಈ ವರ್ಷದ ಮೈಸೂರು ದಸರಾ ಉದ್ಘಾಟನೆಯನ್ನು ನಾಡೋಜ ಸಾಲುಮರದ ತಿಮ್ಮಕ್ಕರವರ ಅಮೃತ ಹಸ್ತದಿಂದ ನೆರವೇರಿಸಲು ಸರಕಾರ ಮುಂದಾಗಬೇಕು ಎಂದು ಮಲೆನಾಡು ರಕ್ಷಣಾ ಸೇನೆ ಜಿಲ್ಲಾಧ್ಯಕ್ಷ ಬಿ.ಎಸ್. ದರ್ಶನ್ ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ನಾಡೋಜ ಸಾಲುಮರದ ತಿಮ್ಮಕ್ಕ ಅವರು ಪದ್ಮಶ್ರೀ ಪುರಸ್ಕೃತರು ಹಾಗೂ ಪರಿಸರ ರಾಯಭಾರಿ ಕ್ಯಾಬಿನೆಟ್ ದರ್ಜೆ ಕರ್ನಾಟಕ ಸರ್ಕಾರ ಇವರ ಪರಿಸರ ಪ್ರೇಮದ ಬಗ್ಗೆ ವಿಶ್ವವಿಖ್ಯಾತಿ ಪಡೆದಿದ್ದು. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ೨೦೧೮ -೧೯ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ರಾಜ್ಯದ ೨೨೪ ವಿಧಾನಸಭಾ ಕ್ಷೇತ್ರದಲ್ಲಿ ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನವನಗಳನ್ನು ಘೋಷಣೆ ಮಾಡಿ ಅನುಷ್ಠಾನಗೊಳಿಸುವ ಮೂಲಕ ಸಾಲುಮರದ ತಿಮ್ಮಕ್ಕರವರಿಗೆ ಬಹುದೊಡ್ಡ ಗೌರವ ಸಲ್ಲಿಸಲಾಗಿದೆ. ಬಹುಮುಖ್ಯವಾಗಿ ೨೦೧೬ನೇ ಸಾಲಿನಲ್ಲಿ ಬಿಬಿಸಿಯು ಬಿಡುಗಡೆ ಮಾಡಿದ ವಿಶ್ವದ ೧೦೦ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ನಾಡೋಜ ಡಾ. ಸಾಲುಮರದ ತಿಮ್ಮಕ್ಕ ರವರ ಹೆಸರು ಸೇರಿರುವುದು ದೇಶಕ್ಕೆ ಸಂದ ಗೌರವ ಎಂದರು.
ಬಿಬಿಸಿಯು ತಿಮ್ಮಕ್ಕನವರನ್ನು ಪ್ರಭಾವಿ ಮತ್ತು ಸ್ಫೂರ್ತಿದಾಯಕ ಮಹಿಳೆ ಎಂದು ಘೋಷಿಸಿದ್ದಾರೆ ಹಾಗೂ ಭಾರತ ಸರ್ಕಾರವು ಸಿಬಿಎಸ್‌ಇ ಪಠ್ಯಕ್ರಮದಲ್ಲಿಯೂ ಸಾಲುಮರದ ತಿಮ್ಮಕ್ಕನವರ ಪರಿಸರ ಪ್ರೇಮ ಮತ್ತು ಸಾಧನೆಯ ಬಗ್ಗೆ ಪಠ್ಯವನ್ನು ಅಳವಡಿಸಿದೆ. ಕರ್ನಾಟಕ ಸರ್ಕಾರವು ಸಹ ಇದೇ ವಿಷಯವನ್ನು ಸಾಕ್ಷರತಾ ಆಂದೋಲನದ ಪಠ್ಯಕ್ರಮದಲ್ಲಿ ಅಳವಡಿಸಿದೆ ಮತ್ತು ಕನ್ನಡ ಮಾಧ್ಯಮ ಮತ್ತು ಇಂಗ್ಲಿಷ್ ಮಾಧ್ಯಮದ ಒಂದರಿಂದ ಒಂಬತ್ತನೇ ತರಗತಿ ಹಾಗೂ ಎಸ್‌ಎಸ್‌ಎಲ್‌ಸಿ ಪಠ್ಯಕ್ರಮದಲ್ಲಿ ಹಾಗೂ ೧೨ನೇ ತರಗತಿಯ ರಾಜ್ಯಶಾಸ್ತ್ರದ ಪಠ್ಯದಲ್ಲಿ ಅಳವಡಿಸಿದೆ ಎಂದು ಹೇಳಿದರು.ಇಂತಹ ಮಹಾನ್ ವೃಕ್ಷ ಮಾತೆ ತಮ್ಮದೇ ಊರಿನ ತಾಲೂಕು ಕಚೇರಿಯ ಮುಂಭಾಗದಲ್ಲಿ ಹಲವಾರು ವರ್ಷಗಳಿಂದ ಮರಗಳನ್ನು ನೆಟ್ಟು ಪೋಷಿಸಿದ್ದು, ಇದೇ ಎರಡು ವರ್ಷಗಳ ಹಿಂದೆ ಹೋಗಿದ್ದ ಗಿಡಗಳನ್ನು ತೆಗೆದು ಮತ್ತೆ ಹೊಸ ಸಸಿಗಳನ್ನು ನೆಟ್ಟು ಜನರಿಗೆ ನೆರಳು ಹಾಗೂ ಪ್ರಾಣಿ ಪಕ್ಷಿಗಳಿಗೆ ಹಣ್ಣು ದೊರೆಯುವ ಉದ್ದೇಶದಿಂದ ಗಿಡಗಳನ್ನು ಪೋಷಿಸುತ್ತಿದ್ದರು. ಆದರೆ ಕೆಲವು ದಿನಗಳ ಹಿಂದೆ ಬೇಲೂರಿನ ತಹಸೀಲ್ದಾರ್ ಅವರು ಇಂಥಹ ಮಹಾನ್ ವೃಕ್ಷಮಾತೆ ನೆಟ್ಟಿದ್ದ ಗಿಡಗಳನ್ನು ಏಕಾಏಕಿ ತೆರವುಗೊಳಿಸಿ ವ್ಯಕ್ತಮಾತೆಯ ಮನಸ್ಸಿಗೆ ಹಾಗೂ ಪ್ರಕೃತಿಗೆ ತುಂಬಲಾರದ ನಷ್ಟವನ್ನು ಮಾಡಿದ್ದು, ಈ ವಿಚಾರವಾಗಿ ಸ್ಥಳೀಯರು ದೂರವಾಣಿ ಮೂಲಕ ಅವರ ದತ್ತು ಮಗರಾದ ಬಳ್ಳೂರು ಉಮೇಶ್ ರವರಿಗೆ ನಾಡ ಚೇತನ ಪ್ರಶಸ್ತಿ ಹೀಗೆ ನೂರಾರು ಪ್ರಶಸ್ತಿಗಳು ಸಾವಿರಾರು ಸನ್ಮಾನಗಳನ್ನು ಪಡೆದ ಸಾಲುಮರದ ತಿಮ್ಮಕ್ಕರವರು ಸಾಮಾನ್ಯರಲ್ಲಿ ಸಾಮಾನ್ಯರಾಗಿ ಜೀವಿಸುತ್ತಿದ್ದು, ಈ ಬಾರಿಯ ದಸರಾ ಉದ್ಘಾಟನೆಯನ್ನು ಇವರ ಅಮೃತದಿಂದ ಮಾಡಿಸಿದ್ದಲ್ಲಿ ಮೈಸೂರು ದಸರಾ ಹಾಗೂ ಕರ್ನಾಟಕ ರಾಜ್ಯ ಸರ್ಕಾರ ಬಹುದೊಡ್ಡ ಗೌರವವನ್ನು ನೀಡಿ ನಾಡ ಜನತೆಗೆ ಉತ್ತಮ ಸಂದೇಶವನ್ನು ನೀಡಿದಂತಾಗುತ್ತದೆ ಎಂದು ಈ ಮೂಲಕ ತಿಳಿಸುತ್ತೇವೆ ಎಂದು ಹೇಳಿದರು. ಈ ಒಂದು ಮನವಿಗೆ ಜಿಲ್ಲಾಡಳಿತ ಹಾಗೂ ಕರ್ನಾಟಕ ಸರ್ಕಾರ ಸ್ಪಂದಿಸುತ್ತದೆ ಎಂಬ ಅಭಿಲಾಷೆಯಿಂದ ಮನವಿ ಸಲ್ಲಿಸುತ್ತೇವೆ ಹಾಗೂ ಈ ಒಂದು ಸದುದ್ದೇಶದ ಕಾರ್ಯಕ್ಕೆ ಸಹಕರಿಸಬೇಕೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಲೆನಾಡು ರಕ್ಷಣಾ ಸೇನೆ ಉಪಾಧ್ಯಕ್ಷರಾದ ನಾಗೇಂದ್ರ ಪಟೇಲ್, ಸಂಚಾಲಕ ಯುವರಾಜ್, ಸಹ ಸಂಚಾಲಕರಾದ ರಾಜೇಶ್ ಗೌಡ, ಆನಂದ್, ಸತೀಶ್, ಪರೀಕ್ಷಿತ್ ಇತರರು ಉಪಸ್ಥಿತರಿದ್ದರು.