ಸಿದ್ಧೇಶ್ವರ ಬ್ಯಾಂಕಿನ 13 ನಿರ್ದೇಶಕರ ಸ್ಥಾನ ಡೋಲಾಯಮಾನ?

KannadaprabhaNewsNetwork |  
Published : Oct 03, 2026, 03:00 AM IST
ಸಿದ್ಧೇಶ್ವರ ಬ್ಯಾಂಕಿನ 13 ನಿರ್ದೇಶಕರ ಸ್ಥಾನ ಡೋಲಾಯಮಾನ? | Kannada Prabha

ಸಾರಾಂಶ

ವಿಜಯಪುರ: ಯಾವುದೇ ಸಹಕಾರಿ ಬ್ಯಾಂಕಿನಲ್ಲಿ ನಿರಂತರವಾಗಿ 10 ವರ್ಷಗಳು ಹಾಗೂ ಅದಕ್ಕಿಂತ ಹೆಚ್ಚಿನ ಅವಧಿಗೆ ನಿರ್ದೇಶಕರಾಗುವಂತಿಲ್ಲ ಎಂದು ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949 (ತಿದ್ದುಪಡಿ) 2025ರ ಆ.1ರಿಂದ ಜಾರಿಗೆ ಬಂದಿದ್ದರಿಂದ ಶತಮಾನ ಕಂಡ ನಗರದ ಶ್ರೀ ಸಿದ್ಧೇಶ್ವರ ಬ್ಯಾಂಕಿನ 19 ನಿರ್ದೇಶಕರಲ್ಲಿ 13 ನಿರ್ದೇಶಕರು ಮುಂದುವರೆಯಲು ಅರ್ಹರಲ್ಲ ಎಂದು ಬ್ಯಾಂಕಿನ ಸದಸ್ಯ ಭೀಮನಗೌಡ ಬಿರಾದಾರ ನಾಗರಾಳಹುಲಿ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಯಾವುದೇ ಸಹಕಾರಿ ಬ್ಯಾಂಕಿನಲ್ಲಿ ನಿರಂತರವಾಗಿ 10 ವರ್ಷಗಳು ಹಾಗೂ ಅದಕ್ಕಿಂತ ಹೆಚ್ಚಿನ ಅವಧಿಗೆ ನಿರ್ದೇಶಕರಾಗುವಂತಿಲ್ಲ ಎಂದು ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949 (ತಿದ್ದುಪಡಿ) 2025ರ ಆ.1ರಿಂದ ಜಾರಿಗೆ ಬಂದಿದ್ದರಿಂದ ಶತಮಾನ ಕಂಡ ನಗರದ ಶ್ರೀ ಸಿದ್ಧೇಶ್ವರ ಬ್ಯಾಂಕಿನ 19 ನಿರ್ದೇಶಕರಲ್ಲಿ 13 ನಿರ್ದೇಶಕರು ಮುಂದುವರೆಯಲು ಅರ್ಹರಲ್ಲ ಎಂದು ಬ್ಯಾಂಕಿನ ಸದಸ್ಯ ಭೀಮನಗೌಡ ಬಿರಾದಾರ ನಾಗರಾಳಹುಲಿ ಆರೋಪಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ಪ್ರಕಾರ ಈಗಿರುವ 19 ನಿರ್ದೇಶಕರಲ್ಲಿ 13 ನಿರ್ದೇಶಕರು 10 ವರ್ಷಗಳ ಅವಧಿ ಪೂರೈಸಿದ್ದು, ಹೀಗಾಗಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಅಥವಾ ಅವರನ್ನು ಅನರ್ಹಗೊಳಿಸುವ ಕೆಲಸ ಆಗಬೇಕಿದೆ ಎಂದು ಹೇಳಿದರು.

ನಿರ್ದೇಶಕರ ಸ್ಥಾನಗಳಿಗೆ ಜಿಲ್ಲಾ ಸಹಕಾರಿ ಸಂಘಗಳ ಸಹಕಾರಿ ನಿಬಂಧಕರು ಮತ್ತೆ ಚುನಾವಣೆ ನಡೆಸಬೇಕಾಗುತ್ತದೆ. 13 ಜನರು ಕಾನೂನು ಬಾಹಿರವಾಗಿ ನಿರ್ದೇಶಕರಾಗಿ ಆಯ್ಕೆಯಾಗಿದ್ದರಿಂದ ಬ್ಯಾಂಕಿನ ನಿರ್ದೇಶಕ ಮಂಡಳಿಯಲ್ಲಿ ಬಹುಮತವಿಲ್ಲದಂತಾಗಿದ್ದು, ಸಿಬ್ಬಂದಿ ನೇಮಕಾತಿ ಸೇರಿ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಇವರಿಗೆ ಇಲ್ಲ. ಈ ಕುರಿತು ನಾವು ಈಗಾಗಲೇ 13 ನಿರ್ದೇಶಕರನ್ನು ವಜಾಗೊಳಿಸುವಂತೆ ಕಲಬುರಗಿ ಹೈಕೋರ್ಟ್ ಪೀಠಕ್ಕೆ ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಡೆದಿದೆ. ತಾವು ಅರ್ಹಗೊಳುತ್ತೇವೆ ಎಂಬುದನ್ನು ತಿಳಿದ ತಕ್ಷಣ ನಿರ್ದೇಶಕರೆಲ್ಲ ಸೇರಿ ಬಹುಮತವಿಲ್ಲದಿದ್ದರೂ ತರಾತುರಿಯಲ್ಲಿ ಸಿಬ್ಬಂದಿ ನೇಮಕಾತಿ ಕಾರ್ಯ ನಡೆಸಿದ್ದಾರೆ. 19ರಲ್ಲಿ 13 ನಿರ್ದೇಶಕರ ಸ್ಥಾನಗಳು ಅನರ್ಹವಾಗುವುದರಿಂದ ಬಹುಮತವಿಲ್ಲದಂತಾಗಿ ಇವರು ಮಾಡುವ ಯಾವುದೇ ಠರಾವು ಅನುರ್ಜಿತವಾಗುತ್ತದೆ. ಹಾಗಾಗಿ ನೇಮಕಾತಿಗೆ ಅರ್ಜಿ ಸಲ್ಲಿಸಿದವರು ನಿರ್ದೇಶಕರ ಭರವಸೆಗಳಿಗೆ ಮರುಳಾಗಿ ಮೋಸಹೋಗಬಾರದು ಎಂದು ಹೇಳಿದರು.

ಬ್ಯಾಂಕಿನ ಸದಸ್ಯ ರಾಜಶೇಖರ ತಾಳಿಕೋಟಿ ಮಾತನಾಡಿ, ಶೀಘ್ರದಲ್ಲೇ ಅನರ್ಹರಾಗಲಿರುವ ನಿರ್ದೇಶಕರೆಲ್ಲ ಸೇರಿ ಬ್ಯಾಂಕಿನಲ್ಲಿ 60 ಹುದ್ದೆಗಳ ನೇಮಕಾತಿಗೆ ಅರ್ಜಿ ಕರೆದು ನೇಮಕಾತಿ ಪ್ರಕ್ರಿಯೆ ಮುಂದುವರೆಸಿದ್ದಾರೆ. ಆದರೆ ಇವರು ಮಾಡುವ ಠರಾವು ಸಹ ಅನುರ್ಜಿತವಾಗಲಿದ್ದು, ನೇಮಕಾತಿ ಪ್ರಕ್ರಿಯೆಯೇ ರದ್ದಾಗಲಿದೆ. ಬ್ಯಾಂಕಿನ ಹಿತ ಹಾಗೂ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಹಿತ ಕಾಪಾಡುವ ಉದ್ದೇಶದಿಂದ ನೇಮಕಾತಿ ಪ್ರಕ್ರಿಯೆಗೆ ತಡೆ ನೀಡುವಂತೆ ಕಲಬುರಗಿ ಹೈಕೋರ್ಟ್ ಪೀಠಕ್ಕೆ ಅರ್ಜಿ ಸಲ್ಲಿಸಿದ್ದು, ಇದೀಗ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ಬಗ್ಗೆ ಅರಿತುಕೊಂಡ ಕೆಲ ನಿರ್ದೇಶಕರು ತಮ್ಮ ಸ್ಥಾನಗಳಲ್ಲಿ ಸಂಬಂಧಿಕರನ್ನೇ ನಾಮನಿರ್ದೇಶಿತ ನಿರ್ದೇಶಕರನ್ನಾಗಿಸಲು ಮುಂದಾಗಿದ್ದು, ಇದು ಕೂಡ ಕಾನೂನು ಬಾಹಿರವೇ ಆಗಲಿದೆ. ಅನರ್ಹಗೊಳ್ಳುವ ಎಲ್ಲ ಸ್ಥಾನಗಳಿಗೂ ಚುನಾವಣೆಯೇ ನಡೆಸಬೇಕು ಎಂಬ ನಿಯಮವಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಬ್ಯಾಂಕಿನ ಸದಸ್ಯರಾದ ಮಲ್ಲಿಕಾರ್ಜುನ ಹೊಂಬಳ, ಎಂ.ಎಸ್.ಬಿರಾದಾರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮತಪಟ್ಟಿಯಿಂದ ಹೆಸರು ತೆಗೆಯಲು ಪತ್ರ ನೀಡಿಲ್ಲ
ಯುವ ಪೀಳಿಗೆ ಬಾಪೂಜಿ ತತ್ವ ಅಳವಡಿಸಿಕೊಳ್ಳಿ