ಜಿ ದೇವರಾಜ ನಾಯ್ಡು
ಕನ್ನಡಪ್ರಭ ವಾರ್ತೆ ಹನೂರುಸ್ವಾತಂತ್ರ್ಯ ಬಂದು 76 ವರ್ಷ ಕಳೆದರೂ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ತಪ್ಪಲಿನಲ್ಲಿರುವ ಕುಗ್ರಾಮಗಳಿಗೆ ಸೌಲಭ್ಯಗಳು ಮರೀಚಿಕೆಯಾಗಿದ್ದು, ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ 25ಕ್ಕೂ ಹೆಚ್ಚು ಕುಗ್ರಾಮಗಳು ಇಂದಿಗೂ ಮೂಲಭೂತ ಸೌಲಭ್ಯಗಳು ಇಲ್ಲದೆ ನಾಗರಿಕ ಪ್ರಪಂಚದಿಂದ ದೂರ ಉಳಿದಿವೆ. ಗ್ರಾಮಗಳಿಗೆ ಮುಖ್ಯಮಂತ್ರಿ ಕ್ಯಾಬಿನೆಟ್ ಸಭೆಯಲ್ಲಿ ಸೌಲಭ್ಯಗಳನ್ನು ನೀಡಲು ವಿಶೇಷ ಪ್ಯಾಕೇಜ್ ಘೋಷಣೆ ಮಾಡುವರೇ ಎಂದು ಇಲ್ಲಿನ ಜನತೆ ದಶಕಗಳಿಂದ ಕಾಣುತ್ತಿರುವ ಕನಸು ನನಸಾಗುವುದೇ ಕಾದು ನೋಡಬೇಕಾಗಿದೆ.
ಆರೋಗ್ಯ ಹದಗೆಟ್ಟರೆ ಡೋಲಿಯೇ ತುರ್ತುವಾಹನ:ಮಲೆಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ ವಾಸಿಸುವ ಬೇಡಗಂಪಣರು ಹಾಗೂ ಬುಡಕಟ್ಟು ಸೋಲಿಗ ಸಮುದಾಯದ ನಿವಾಸಿಗಳು ಹಲವಾರು ದಶಕಗಳಿಂದಲೂ ವಾಸಿಸುತ್ತಿದ್ದು, ಜನಪ್ರತಿನಿಧಿಗಳು ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಇಲ್ಲಿನ ಜನತೆ ಕಾಡು ಪ್ರಾಣಿಗಳಿಗಿಂತಲೂ ಕಡೆಯಾಗಿ ಜೀವನ ಸಾಗಿಸುತ್ತಿದ್ದಾರೆ. ಮಲೆಮಹದೇಶ್ವರ ಬೆಟ್ಟದ ತಪ್ಪಲ್ಲಿನ ಕಾಡಂಚಿನ ಗ್ರಾಮಗಳಲ್ಲಿ ಆರೋಗ್ಯ ಹದಗೆಟ್ಟರೆ ಇಲ್ಲಿನ ಜನತೆ ರಸ್ತೆ ಸರಿ ಇಲ್ಲದ ಕಾರಣ ಡೋಲಿ (ನ್ಯಾಣೆ) ಕಟ್ಟಿಕೊಂಡು ನಾಲ್ವರು ನಿವಾಸಿಗಳು ಅಸರೆಯಲ್ಲಿ ಹತ್ತಾರು ಕಿಲೋಮೀಟರ್ ದಟ್ಟಕಾಡಿನ ನಡುವೆ ಕಾಡುಪ್ರಾಣಿಗಳ ಭಯದಲ್ಲೇ ಜೀವವನ್ನು ಕೈಯಲ್ಲಿ ಹಿಡಿದು ಆಸ್ಪತ್ರೆಗೆ ಸಾಗಿಸುವ ಪರಿಸ್ಥಿತಿ ಇನ್ನೂ ಜೀವಂತವಾಗಿದೆ.
ಪ್ರವಾಸಿಗರ ನಂಬಿ ಬದುಕಿದ್ದವರ ಕೈ ಖಾಲಿ:ಮಲೆಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ಚಾರಣ ನಿಷೇಧ ಹಿನ್ನೆಲೆಯಲ್ಲಿ ಇತ್ತೀಚೆಗೆ ಅರಣ್ಯ ಇಲಾಖೆ ಕಟ್ಟುಪಾಡಿನ ನೆಪವೂಡ್ಡಿ ನಾಗಮಲೆಗೆ ನಿಷೇಧ ಹೇರಿದ ಹಿನ್ನೆಲೆಯಲ್ಲಿ ಇಲ್ಲಿನ ಜನತೆ ಪ್ರವಾಸಿ (ಭಕ್ತರನ್ನೇ) ನಂಬಿ ಬದುಕಿದ್ದ ಇಲ್ಲಿನ ನಿವಾಸಿಗಳು ವ್ಯಾಪಾರ ಇನ್ನಿತರ ವಹಿವಾಟುಗಳನ್ನು ನಡೆಸಿ ತಮ್ಮ ಬದುಕು ಕಟ್ಟಿಕೊಂಡಿದ್ದ ಜನತೆಯ ಕೈಕಟ್ಟಿ ಹಾಕಲಾಗಿದ್ದು, ಇಲ್ಲಿನ ಜನತೆಯ ಗೋಳು ಕೇಳುವವರು ಯಾರು ಇಲ್ಲವಾಗಿದ್ದಾರೆ.ಹಳ್ಳದ ನೀರು ಕೊಳ್ಳಿ ಬೆಳಕು:
ಮಲೆಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಹಳ್ಳದ ನೀರು ಕೊಳ್ಳಿ ಬೆಳಕಿನಲ್ಲಿ ವಾಸಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಇಲ್ಲಿನ ಗ್ರಾಮಗಳಿಗೆ ಮೂಲಭೂತ ಸೌಲಭ್ಯಗಳ ಮರೀಚಿಕೆಯಾಗಿ, ವಿದ್ಯುತ್ ಇಲ್ಲದೆ ಇನ್ನೂ ಸಹ ಬುಡ್ಡಿ ದೀಪಗಳ ಹಾಗೂ ಕೊಳ್ಳಿ ಬೆಳಕಿನಲ್ಲಿ ವಾಸವಾಗಿದ್ದು, ಹಳ್ಳದ ನೀರಿನಲ್ಲಿ ಜೀವನ ಕಟ್ಟಿಕೊಳ್ಳುವ ಪರಿಸ್ಥಿತಿ ಇನ್ನೂ ಇಲ್ಲಿನ ಕುಗ್ರಾಮಗಳಲ್ಲಿ ಜೀವಂತವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕ್ಯಾಬಿನೆಟ್ ಸಭೆಯಲ್ಲಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ಮಾದಪ್ಪನ ಮಕ್ಕಳು ಎಂದೆ ಇಲ್ಲಿನ ಕುಗ್ರಾಮಗಳಲ್ಲಿ ವಾಸಿಸುವ ಜನತೆಗೆ ವಿಶೇಷವಾಗಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ಅಭಿವೃದ್ಧಿಗೊಳಿಸುವರೇ? ಕಾದು ನೋಡಬೇಕಾಗಿದೆ.ಮೂಲ ಸೌಲಭ್ಯಗಳು ಮರೀಚಿಕೆ:ಕೋಟ್ಯಂತರ ಭಕ್ತರ ಆರಾಧ್ಯ ದೈವ ಮಾದಪ್ಪನ ಪೂಜಿಸುವ ಬುಡಕಟ್ಟು ಸಮುದಾಯಗಳೇ ಹೆಚ್ಚಾಗಿ ಇಲ್ಲಿ ವಾಸಿಸುತ್ತಿರುವ ಜನತೆಗೆ ಸ್ವಾತಂತ್ರ್ಯ ಬಂದು 76 ವರ್ಷಗಳು ಕಳೆದರೂ ಇಲ್ಲಿನ ಗ್ರಾಮಗಳಿಗೆ ಮೂಲಭೂತ ಸೌಲಭ್ಯಗಳಿಲ್ಲದೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಇಂಡಿಗನತ್ತ ಗ್ರಾಮದಲ್ಲಿ ಮತದಾನ ಬಹಿಷ್ಕಾರ ಮತಗಟ್ಟೆ ದ್ವಂಸ ಪ್ರಕರಣ ನಡೆದು 40 ಜನರ ಮೇಲೆ ಮೂರು ಪ್ರಕರಣ ದಾಖಲಾಗಿದ್ದು, ಪ್ರಕರಣಕ್ಕೆ ಮುಖ್ಯಮಂತ್ರಿಯ ಸಿದ್ದರಾಮಯ್ಯ ಇತಿಶ್ರೀಯಾಡಬೇಕಿದೆ.
ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಕುಗ್ರಾಮಗಳಲ್ಲಿ ವಾಸಿಸುವ ಬುಡಕಟ್ಟು ಸಮುದಾಯ ನಿವಾಸಿಗಳಿಗೆ ಸರ್ಕಾರದಿಂದ ಯಾವುದೇ ಸೌಲಭ್ಯ ಸಿಗದಿರುವುದರಿಂದ ಇಲ್ಲಿನ ಜನತೆ ಮೂಲ ಸೌಲಭ್ಯಗಳಾದ ರಸ್ತೆ, ಕುಡಿಯುವ ನೀರು, ವಿದ್ಯುತ್ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಅರಣ್ಯದ ಮಧ್ಯಭಾಗದ ಹಳ್ಳ ದಿಣ್ಣೆಗಳ ರಸ್ತೆಗಳಲ್ಲಿ ಕಾಡುಪ್ರಾಣಿಗಳ ಹಾವಳಿಯಿಂದ ಜೀವಭಯದಲ್ಲೇ ವಾಸಿಸುತ್ತಿರುವ 25ಕ್ಕೂ ಹೆಚ್ಚು ಕುಗ್ರಾಮಗಳಿಗೆ ಮೂಲ ಸೌಲಭ್ಯ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕಿದೆ.ಕೆಂಪಯ್ಯ, ತುಳಸಿಕರೆ ನಿವಾಸಿ