ಡಂಬಳ: ರೈತರ ಖಾತೆಗೆ ಜಮಾ ಆಗಿರುವ ಬೆಳೆ ಹಾನಿ ವಿಮೆ ಹಣವನ್ನು ಬ್ಯಾಂಕ್ ಅಧಿಕಾರಿಗಳು ಸಾಲಕ್ಕೆ ಜಮಾ ಮಾಡದೇ ರೈತರಿಗೆ ನೀಡಬೇಕು. ವಿಳಂಬ ಮಾಡಿದರೆ ಬ್ಯಾಂಕ್ ಎದುರು ಹೋರಾಟ ನಡೆಸಬೇಕಾಗುತ್ತದೆ ಎಂದು ಮುಖಂಡ ಗೋಣಿಬಸಪ್ಪ ಎಸ್. ಕೊರ್ಲಹಳ್ಳಿ ಎಚ್ಚರಿಸಿದ್ದಾರೆ.
ಡಂಬಳ ಗ್ರಾಮದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಅಧಿಕಾರಿಗಳಿಗೆ ಬುಧವಾರ ಈ ಕುರಿತು ಮನವಿ ಸಲ್ಲಿಸಿದ ಬಳಿಕ ಅವರು ಮಾತನಾಡಿದರು. 2024-25ನೇ ಸಾಲಿನ ಬೆಳೆಹಾನಿ ಮತ್ತು ಗೋವಿನಜೋಳ ಬೆಳೆ ವಿಮೆ ಹಣ ರೈತರ ಬ್ಯಾಂಕ್ ಖಾತೆಗೆ ಜಮಾ ಆಗಿದೆ. ರೈತರು ಬ್ಯಾಂಕ್‌ಗೆ ಹಣ ಪಡೆಯಲು ಹೋದರೆ ಬ್ಯಾಂಕ್ ಅಧಿಕಾರಿಗಳು ಹಣ ಪಾವತಿಸಲು ಹಿಂದೇಟು ಹಾಕುತ್ತಿದ್ದಾರೆ. ಅತಿವೃಷ್ಟಿ, ಅನಾವೃಷ್ಟಿಯಿಂದ ಸಾಲದ ದವಡೆಗೆ ಸಿಲುಕಿ ಸಂಕಷ್ಟದಲ್ಲಿರುವ ರೈತರಿಗೆ ಬೆಳೆಹಾನಿ ಮತ್ತು ಬೆಳೆ ವಿಮೆ ಹಣ ನೀಡಬೇಕು. ಬ್ಯಾಂಕ್ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ ಡಂಬಳ ಕೇಂದ್ರಸ್ಥಾನ ಸೇರಿದಂತೆ ವಿವಿಧ ಗ್ರಾಮದ ರೈತರ ಸಮ್ಮುಖದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದರು.ರೈತರ ಸಾಲದ ಖಾತೆಗೆ ಹಣ ಜಮಾ ಮಾಡುವುದಾಗಿ ಬ್ಯಾಂಕ್ ಅಧಿಕಾರಿಗಳು ಹೇಳುತ್ತಾರೆ. ಬ್ಯಾಂಕ್‌ನಲ್ಲಿ ಸಾಲ ಮಾಡುವಾಗ ನಾವು ನಮ್ಮ ಜಮೀನು ಅಡಮಾನ ಇಟ್ಟಿರುತ್ತೇವೆ. ಬೆಲೆಬಾಳುವ ಜಮೀನುಗಳನ್ನು ಅಡಮಾನ ಇಟ್ಟು ಸಾಲ ಪಡೆದಿದ್ದೇವೆ. ಸಂಕಷ್ಟದ ಸಮಯದಲ್ಲಿ ರೈತರಿಗೆ ಸಾಲ ಮರುಪಾವತಿಸಲು ಸಾಧ್ಯವಾಗುವುದಿಲ್ಲ. ಆದರೆ ಅಧಿಕಾರಿಗಳು ವಿಮೆ ಹಣ ನೀಡಲು ವಿಳಂಬ ಮಾಡುತ್ತಿದ್ದಾರೆ. ಬ್ಯಾಂಕ್‌ಗೆ ಅಲೆದು ಸುಸ್ತಾಗಿದ್ದೇವೆ. ಎರಡು-ಮೂರು ದಿನಗಳಲ್ಲಿ ರೈತರಿಗೆ ಹಣ ಪಾವತಿ ಮಾಡದೇ ಹೋದರೆ ಹೋರಾಟ ಅನಿವಾರ್ಯ ಎಂದರು.ರೈತರಾದ ಭೀಮಪ್ಪ ಬಚನಹಳ್ಳಿ, ಪಿ.ಎಸ್. ಹುಡೇದ, ಬಿ.ಎಚ್. ಶಿವರಡ್ಡಿ, ಎಸ್.ಎಂ. ಶಿವರಡ್ಡಿ, ಯು.ಎಸ್. ಸಂದಿಗೌಡ, ಸುರೇಶ ಬೆಟಗೇರಿ, ಸಿದ್ದಪ್ಪ ಪಲ್ಲೇದ, ಭರಮಪ್ಪ ಎಪ್ಪೇರಿ, ಯಲ್ಲಪ್ಪ ಮೇವುಂಡಿ, ಈರಣ್ಣ ಚನ್ನಹಳ್ಳಿ, ಪ್ರಹ್ಲಾದ ಬಚನಹಳ್ಳಿ, ಶೇಖಪ್ಪ ಕರಿಗಾರ, ಭೀಮಪ್ಪ ಯಂಡಿಗೇರಿ, ಹನುಮಪ್ಪ ಬಚನಹಳ್ಳಿ, ಮೈಲಾರಪ್ಪ ಹರಿಜನ, ಗವಿಸಿದ್ದಪ್ಪ ಉಪ್ಪಾರ ಇದ್ದರು.
ಶಾಸಕರ ಸೂಚನೆ: ಸಮಸ್ಯೆ ಕುರಿತು ಮುಖಂಡ ಗೋಣಿಬಸಪ್ಪ ಎಸ್. ಕೊರ್ಲಹಳ್ಳಿ ಅವರು ಶಾಸಕ ಜಿ.ಎಸ್. ಪಾಟೀಲ ಅವರ ಗಮನಕ್ಕೆ ತಂದರು. ತಕ್ಷಣ ಶಾಸಕ ಜಿ.ಎಸ್. ಪಾಟೀಲ ಅವರು ಬ್ಯಾಂಕ್ ಸಹಾಯಕ ವ್ಯವಸ್ಥಾಪಕ ಶ್ರೀಧರ ದೊಡ್ಡಮನಿ ಅವರೊಂದಿಗೆ ಮಾತನಾಡಿ, ರೈತರು ಸಂಕಷ್ಟದಲ್ಲಿದ್ದಾರೆ. ಬೆಳೆಹಾನಿ ಮತ್ತು ಬೆಳೆ ವಿಮೆ ಹಣವನ್ನು ರೈತರ ಸಾಲದ ಖಾತೆಗೆ ಜಮಾ ಮಾಡಿಕೊಳ್ಳಬೇಡಿ. ರೈತರು ಉತ್ತಿ ಬಿತ್ತುವ ಸಮಯವಾಗಿದ್ದರಿಂದ ರೈತರಿಗೆ ಹಣದ ಆವಶ್ಯಕತೆ ಇರುತ್ತದೆ. ಸಂಕಷ್ಟದಲ್ಲಿರುವ ರೈತರಿಗೆ ಬ್ಯಾಂಕ್ ಅಧಿಕಾರಿಗಳು ಸಹಾಯ ಮಾಡಬೇಕು ಎಂದು ಸೂಚನೆ ನೀಡಿದರು.