ಕನ್ನಡಪ್ರಭ ವಾರ್ತೆ ಮಳವಳ್ಳಿ
ತಾಲೂಕಿನ ಮಲ್ಲಿಕ್ಯಾತನಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ ಟೋಲ್ ಸಂಗ್ರಹ ಕೇಂದ್ರದಲ್ಲಿ ತಾಲೂಕಿನ ಜನರ ವಾಹನಗಳಿಗೆ ಯಾವುದೇ ಮಿತಿ ಅಳವಡಿಸದೇ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ಎನ್.ಎಲ್ ಭರತ್‌ರಾಜ್ ಒತ್ತಾಯಿಸಿದರು.ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 20 ಕಿಮೀ ವ್ಯಾಪ್ತಿಯ ನಾಗರಿಕರು ಉಚಿತವಾಗಿ ಪ್ರಯಾಣಿಸಬಹುದು ಎಂಬ ಮೀತಿಯನ್ನು ತೆಗೆದುಹಾಕಿ ಆಧಾರ್ ಕಾರ್ಡ್, ಗುರುತಿನ ಚೀಟಿ ಹಾಗೂ ಇತರೆ ದಾಖಲೆಗಳನ್ನು ಪರಿಗಣಿಸಿ ಮುಕ್ತ ಅವಕಾಶವನ್ನು ಕಲ್ಪಿಸಬೇಕೆಂದು ತಿಳಿಸಿದರು.
ರಾಜ್ಯ ಹೆದ್ದಾರಿಗಿಂತಲೂ ರಾಷ್ಟ್ರೀಯಯ ಹೆದ್ದಾರಿ ಕಳಪೆ ಗುಣಮಟ್ಟದಿಂದ ಕೂಡಿದೆ. ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೂ ಮುನ್ನೆಚ್ಚಕೆ ಕ್ರಮ ವಹಿಸಿಲ್ಲ. ಚರಂಡಿ ಹಾಗೂ ಫುಟ್‌ಪಾತ್ ಅನ್ನು ಸಮರ್ಪಕವಾಗಿ ನಿರ್ವಹಿಸಿಲ್ಲ. ಬಸ್ ನಿಲ್ದಾಣಗಳು ಅವೈಜ್ಞಾನಿಕತೆವಾಗಿ ಕೂಡಿದೆ ಎಂದರು.ರಾಷ್ಟ್ರೀಯ ಹೆದ್ದಾರಿಗೆ ಇರಬೇಕಾದ ಗುಣಮಟ್ಟ ರಸ್ತೆಯನ್ನಾಗಿ ಮಾರ್ಪಾಡಿಸದೇ ಟೋಲ್ ಸಂಗ್ರಹಕ್ಕೆ ಮುಂದಾಗಿರುವುದು ಸರಿಯಲ್ಲ. ಸಮಸ್ಯೆಗಳನ್ನು ಸರಿಪಡಿಸಿ ನಂತರ ಟೋಲ್ ಸಂಗ್ರಹಕ್ಕೆ ಮುಂದಾಗದೆ ಏಕಾಏಕಿ ಟೋಲ್ ಸಂಗ್ರಹ ಪ್ರಾರಂಭ ಮಾಡಿರುವುದು ನಾಗರಿಕ ವಿರೋಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೆದ್ದಾರಿ ಸಮಸ್ಯೆಗಳನ್ನು ಬಗೆಹರಿಸಲು ಜನಪರ ಸಂಘಟನೆಗಳು ಪ್ರತಿಭಟನೆ ಮಾಡಿದ್ದರೂ ಕೂಡ ಕ್ರಮ ಕೈಗೊಂಡಿಲ್ಲ, ಸಮಸ್ಯೆಗಳನ್ನು ಸರಿಪಡಿಸುವವರೆಗೆ ಟೋಲ್ ಸಂಗ್ರಹ ನಿಲ್ಲಿಸದಿದ್ದರೆ ತಾಲೂಕಿನ ವಿವಿಧ ಸಂಘಟನೆಗಳು ಹಾಗೂ ನಾಗರಿಕರೊಡಗೂಡಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿರು.ಸುದ್ದಿಗೋಷ್ಠಿಯಲ್ಲಿ ಪ್ರಾಂತ ರೈತ ಸಂಘದ ತಾಲೂಕು ಕಾರ್ಯದರ್ಶಿ ಎನ್.ಲಿಂಗರಾಜಮೂರ್ತಿ ಹಾಗೂ ಮುಖಂಡರಾದ ನಂಜುಂಡಸ್ವಾಮಿ, ಮರಿಲಿಂಗೇಗೌಡ ಉಪಸ್ಥಿತರಿದ್ದರು.
ಇಂದು ವಿದ್ಯುತ್ ವ್ಯತ್ಯಯಮದ್ದೂರು:
ಸೆಸ್ಕ್ ವತಿಯಿಂದ ನಗರ ಉಪ ವಿಭಾಗದ ಕಾರ್ಯ ಮತ್ತು ಪಾಲನಾ ಘಟಕ- 2 ಶಾಖಾ ವ್ಯಾಪ್ತಿಯ ಎಫ್ -1 ಮದ್ದೂರು ಮತ್ತು ಎಫ್- 10 ಮಠದದೊಡ್ಡಿ ಎನ್.ಜೆ.ವೈ. ಫೀಡರ್ ವಿದ್ಯುತ್ ಮಾರ್ಗದ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ 66/11ಕೆವಿ ಮದ್ದೂರು ವಿದ್ಯುತ್ ವಿತರಣಾ ಕೇಂದ್ರದಿಂದ ಹೊರ ಹೊಮ್ಮುವ 11 ಕೆವಿ. ಎಫ್ -1 ಮದ್ದೂರು ಮಾರ್ಗದ ಕೊಲ್ಲಿ ಸರ್ಕಲ್, ಕೊಪ್ಪ ಸರ್ಕಲ್, ಶಿವಪುರ, ಹಳೇ ಎಂ.ಸಿ ರಸ್ತೆ, ವಿವಿ ನಗರ 9 ನೇ ಕ್ರಾಸ್ ಎಫ್ -10 ಮಠದದೊಡ್ಡಿ ಎನ್.ಜೆ.ವೈ ಫೀಡರ್‌ನ ಗ್ರಾಮಗಳಾದ ಕ್ಯಾತಘಟ್ಟ, ಬೊಮ್ಮನದೊಡ್ಡಿ, ಮಠದದೊಡ್ಡಿ, ವೈದ್ಯನಾಥಪುರ, ನಗರಕೆರೆ, ಉಪ್ಪಿನಕೆರೆ, ಸೋಂಪುರ, ಉಪ್ಪಾರದೊಡ್ಡಿ, ಮಾಲಗಾರನಹಳ್ಳಿ ಹಾಗೂ ಅಜ್ಜಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಏ.24 ರಂದು ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರ ಸಹಕರಿಸಬೇಕೆಂದು ಸೆಸ್ಕ್ ಅಧಿಕಾರಿಗಳು ಮನವಿ ಮಾಡಿದ್ದಾರೆ.