ಏಪ್ರಿಲ್‌ 26ರಿಂದ ಶಿವಮೊಗ್ಗದಲ್ಲಿ ವಿಶಿಷ್ಟ ಹಣ್ಣು, ಆಹಾರ ಮೇಳ

KannadaprabhaNewsNetwork |  
Published : Apr 24, 2025, 12:03 AM IST
ಪೊಟೊ: 23ಎಸ್‌ಎಂಜಿಕೆಪಿ01ಶಿವಮೊಗ್ಗ ನವಿಲೆಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬುಧವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ  ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್.ಸಿ.ಜಗದೀಶ್ ಮಾತನಾಡಿದರು.  | Kannada Prabha

ಸಾರಾಂಶ

ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವದ ಅಂಗವಾಗಿ ನವಿಲೆ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಏ.26 ರಿಂದ 28ರ ವರೆಗೆ ವೈವಿಧ್ಯಮಯ ಹಣ್ಣು, ಆಹಾರ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್.ಸಿ.ಜಗದೀಶ್ ತಿಳಿಸಿದರು.

ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವ । ವಿಶೇಷ ಹಣ್ಣುಗಳ ಪ್ರದರ್ಶನ, ಮಾರಾಟ । 28ರ ವರೆಗೆ ಕಾರ್‍ಯಕ್ರಮ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವದ ಅಂಗವಾಗಿ ನವಿಲೆ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಏ.26 ರಿಂದ 28ರ ವರೆಗೆ ವೈವಿಧ್ಯಮಯ ಹಣ್ಣು, ಆಹಾರ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್.ಸಿ.ಜಗದೀಶ್ ತಿಳಿಸಿದರು.

ನಗರದಲ್ಲಿ ಬುಧವಾರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗದ ಕೃಷಿ ವಿಜ್ಞಾನ ಕೇಂದ್ರವು 2025ಕ್ಕೆ ತನ್ನ 25 ವರ್ಷಗಳ ನಿರಂತರ ರೈತಪರ ಸೇವಾ ಕೊಡುಗೆಯನ್ನು ಪೂರೈಸಿ ರಜತ ಮಹೋತ್ಸವ ಆಚರಿಸಿಕೊಳ್ಳುವ ಪ್ರಯುಕ್ತ ಶಿವಮೊಗ್ಗದ ಕೃಷಿ ವಿಜ್ಞಾನ ಕೇಂದ್ರ, ನವಿಲೆ ಆವರಣದಲ್ಲಿ ಏ.26 ರಿಂದ 28ರ ವರೆಗೆ ‘ಹಣ್ಣು ಮತ್ತು ಆಹಾರ ಮೇಳ’ವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಮಾವಿನ ಹಣ್ಣಿನ 30 ವಿಶಿಷ್ಟ ತಳಿಗಳಾದ ಆಲ್ಫಾನ್ಸೋ, ಬಾದಾಮಿ, ಕೇಸರ್, ಮಲಗೋವಾ, ಮಲ್ಲಿಕಾ, ನೀಲಂ, ರಸಪುರಿ, ಸಿಂಧೂರ, ತೋತಾಪುರಿ, ಅಪ್ಪೆ ಮಿಡಿ ತಳಿಗಳ ಪ್ರದರ್ಶನ ಮತ್ತು ಮಾರಾಟವಿರುತ್ತದೆ. ಅಲ್ಲದೆ, 20 ವಿವಿಧ ಹಲಸಿನ ತಳಿಗಳಾದ ಸಿದ್ದು ಹಲಸು, ಶಂಕರ, ಸರ್ವಋತು, ರುದ್ರಾಕ್ಷಿ. ಕೆಂಪು, ಚಂದ್ರ ಹಲಸು, ಹೆಬ್ಬಾಳ ಸೇರಿದಂತೆ ಸಖರಾಯಪಟ್ಟಣದ ಸ್ಥಳೀಯ ವಿಶೇಷ ತಳಿಗಳು, ವಿವಿಧ ತಳಿಯ ಬಾಳೆ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಬಿಜಾಪುರ, ಬಾಗಲಕೋಟೆ ಮತ್ತಿತರ ಭಾಗಗಳಿಂದ ಥಾಮ್ಸನ್ ಸೀಡ್‌ಲೆಸ್, ಶರದ್, ಕೃಷ್ಣ ಶರದ್ ಇತ್ಯಾದಿ ತಳಿಯ ರುಚಿಕರ ದ್ರಾಕ್ಷಿ ಹಣ್ಣುಗಳು ಆಗಮಿಸುತ್ತಿವೆ. ಬೆಂಗಳೂರು ಗ್ರಾಮಾಂತರ ಭಾಗದಿಂದ ಬೆಂಗಳೂರು ಬ್ಲೂ ದ್ರಾಕ್ಷಿ ಬರಲಿದೆ. ಗೆಡ್ಡೆ-ಗೆಣಸು ತಳಿಗಳು, ಬೇಲದ ಹಣ್ಣು, ಅಂಜೂರ ಹಣ್ಣು, ಬಿಜಾಪುರದ ನಿಂಬೆ ಹಣ್ಣು, ಮತ್ತು ಇವುಗಳ ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಏರ್ಪಡಿಸಲಾಗಿದೆ ಎಂದರು.

ವಿಶಿಷ್ಟ ಖಾದ್ಯಗಳು:

ಮಲೆನಾಡಿನ ವಿಶಿಷ್ಟ ಸಿಹಿ ಖಾದ್ಯಗಳಾದ ತೊಡೆದೇವು, ಅಪ್ಪೆಮಿಡಿ, ಹಲಸು, ಬಾಳೆ, ಅನಾನಸ್, ಅಂಜೂರ, ಗೇರು, ಮುರುಗಲು, ಪುನರ್ಪುಳಿ, ಸಿರಿಧಾನ್ಯಗಳ ಉತ್ಪನ್ನಗಳು ಮತ್ತು ಸ್ಥಳೀಯ ವಿಶಿಷ್ಟ ಖಾದ್ಯಗಳು, ಜೇನುತುಪ್ಪದ ಮೌಲ್ಯವರ್ಧಿತ ಉತ್ಪನ್ನಗಳು, ದಾವಣಗೆರೆ ಬೆಣ್ಣೆದೋಸೆ, ಹುಬ್ಬಳ್ಳಿ ಮಿರ್ಚಿ ಮಂಡಕ್ಕಿ, ಆಲೂ ಟ್ವಿಸ್ಟರ್ ಇತ್ಯಾದಿ ಖಾದ್ಯಗಳು ಪ್ರಮುಖ ಆಕರ್ಷಣೆಗಳಾಗಿವೆ ಎಂದು ತಿಳಿಸಿದರು.

8 ಲಕ್ಷ ಸಸಿಗಳು ಲಭ್ಯ:

ಕರಿಮೆಣಸು, ಕೋಕಂ, ಏಲಕ್ಕಿ, ದಾಲ್ಚಿನಿ, ಬಿದಿರು, ಕಾಫಿ, ಪುನರ್ಪುಳಿ, ಗೋಡಂಬಿ ಸೇರಿದಂತೆ ವಿವಿಧ ತಳಿಯ 8 ಲಕ್ಷ ಸಸಿಗಳು ರಿಯಾಯ್ತಿ ದರದಲ್ಲಿ ಮಾರಾಟಕ್ಕೆ ಲಭ್ಯವಿದೆ. ಹಣ್ಣುಗಳ ಉತ್ಪನ್ನಗಳಾದ ಜ್ಯೂಸ್, ಜ್ಯಾಮ್, ಜೇನು, ಇತರೆ ಉತ್ಪನ್ನಗಳು, ಸಿರಿಧಾನ್ಯದ ತೊಡೆದೇವು ರೀತಿಯ ಖಾದ್ಯಗಳು ಲಭ್ಯವಿರುತ್ತವೆ ಎಂದರು.

150 ಮಳಿಗೆ:

150 ಕ್ಕೂ ಹೆಚ್ಚಿನ ಮಳಿಗೆಗಳನ್ನು ಸ್ಥಾಪಿಸಲಾಗುತ್ತಿದ್ದು, ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಉತ್ತಮ ಗುಣಮಟ್ಟದ, ರುಚಿಕರ ಹಣ್ಣು ಹಾಗೂ ರೈತರಿಗೆ ಉತ್ತಮ ಮಾರುಕಟ್ಟೆ ಕಲ್ಪಿಸುವುದು ಈ ಮೇಳದ ಉದ್ದೇಶವಾಗಿದೆ ಎಂದು ಹೇಳಿದರು.

ಏ.26ರಂದು ವೈಜ್ಞಾನಿಕ ಜೇನು ಸಾಕಾಣಿಕೆ ಮತ್ತು ಜೇನಿನ ಮೌಲ್ಯವರ್ಧನೆ, ಏ.27 ರಂದು ತಾರಸಿ ತೋಟ ಮತ್ತು ತ್ಯಾಜ್ಯ ವಸ್ತು ನಿರ್ವಹಣೆ, ಏ.28 ರಂದು ಗೋಡಂಬಿ ಬೆಳೆಯ ಉತ್ಪಾದನೆ ಮತ್ತು ಸಂಸ್ಕರಣೆ ಮೊದಲಾದ ವಿಷಯ ಕುರಿತು ತಾಂತ್ರಿಕ ಸಮಾವೇಶ ಆಯೋಜಿಸಲಾಗಿದೆ ಎಂದರು.

ಕುಲಸಚಿವರಾದ ಡಾ.ಕೆ.ಸಿ.ಶಶಿಧರ್ ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಡಿ.ತಿಪ್ಪೇಶ, ಸಹ ಸಂಶೋಧನಾ ನಿರ್ದೇಶಕ ಡಾ.ಪ್ರದೀಪ್ ಹಾಜರಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ