ಗುಟ್ಕಾ ನಿಷೇಧ ಹೇಳಿಕೆಯಿಂದ ಅಡಕೆ ಬೆಳೆಗಾರರ ಜೀವನ ಅತಂತ್ರ

KannadaprabhaNewsNetwork |  
Published : Aug 22, 2026, 03:00 AM IST
21ಎಚ್.ಎಲ್.ಐ2  ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ನೇತೃತ್ವದಲ್ಲಿ ರಾಜ್ಯ ಸರ್ಕಾರದ ವಿರುದ್ದ ನಡೆದ ಪ್ರತಿಭಟನೆಯಲ್ಲಿ ಹಸಿರು ಸೇನೆ ರಾಜ್ಯಾಧ್ಯಕ್ಷ ಎಂ.ಪಿ.ಕರಿಬಸಪ್ಪಗೌಡ ಮಾತನಾಡಿದರು, ಗ್ರೇಡ್ -2  ತಹಶೀಕಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.  ರೈತ ಸಂಘದ ತಾಲೂಕು ಅಧ್ಯಕ್ಷ   ಸೇರಿದಂತೆ ಅನೇಕ ಮುಖಂಡರು ಇದ್ದರು.   | Kannada Prabha

ಸಾರಾಂಶ

ಗುಟ್ಕಾ ನಿಷೇಧದ ಬಗ್ಗೆ ರಾಜ್ಯ ಸರ್ಕಾರದ ಒಂದು ಬೇಜಾವಾಬ್ದಾರಿ ಹೇಳಿಕೆ ಅಡಕೆ ಬೆಳೆಗಾರರ ಜೀವನ ಅತಂತ್ರವಾಗಿಸುತ್ತಿದೆ. ಮುಂದಿನ 2028ರ ಸಾರ್ವತ್ರಿಕ ಚುನಾವಣೆಯಲ್ಲಿ ಅಡಕೆ ಬೆಳೆಗಾರರು ನಿಮ್ಮ ಪಕ್ಷಕ್ಕೆ ತಕ್ಕಪಾಠ ಕಲಿಸಲಿದ್ದಾರೆ ಎಂದು ರಾಜ್ಯ ರೈತ ಸಂಘ, ಹಸಿರು ಸೇನೆ ರಾಜ್ಯಾಧ್ಯಕ್ಷ ಎಂ.ಪಿ. ಕರಿಬಸಪ್ಪಗೌಡ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

- ಹೊನ್ನಾಳಿ ಪ್ರತಿಭಟನೆಯಲ್ಲಿ ರೈತ ಸಂಘ, ರೈತ ಸೇನೆ ರಾಜ್ಯಾಧ್ಯಕ್ಷ ಕರಿಬಸಪ್ಪಗೌಡ ಆಕ್ರೋಶ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಗುಟ್ಕಾ ನಿಷೇಧದ ಬಗ್ಗೆ ರಾಜ್ಯ ಸರ್ಕಾರದ ಒಂದು ಬೇಜಾವಾಬ್ದಾರಿ ಹೇಳಿಕೆ ಅಡಕೆ ಬೆಳೆಗಾರರ ಜೀವನ ಅತಂತ್ರವಾಗಿಸುತ್ತಿದೆ. ಮುಂದಿನ 2028ರ ಸಾರ್ವತ್ರಿಕ ಚುನಾವಣೆಯಲ್ಲಿ ಅಡಕೆ ಬೆಳೆಗಾರರು ನಿಮ್ಮ ಪಕ್ಷಕ್ಕೆ ತಕ್ಕಪಾಠ ಕಲಿಸಲಿದ್ದಾರೆ ಎಂದು ರಾಜ್ಯ ರೈತ ಸಂಘ, ಹಸಿರು ಸೇನೆ ರಾಜ್ಯಾಧ್ಯಕ್ಷ ಎಂ.ಪಿ. ಕರಿಬಸಪ್ಪಗೌಡ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಶುಕ್ರವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ದೇಶದ ಒಟ್ಟು ಉತ್ಪಾದನೆಯಲ್ಲಿ ಕರ್ನಾಟಕ ಶೇ.70ರಷ್ಟು ಅಡಕೆ ಬೆಳೆಯುತ್ತಿದೆ. ರಾಜ್ಯದಲ್ಲಿ 15 ಲಕ್ಷ ಹೆಕ್ಟೇರ್‌ನಷ್ಟು ಅಡಕೆ ಬೆಳೆಯುತ್ತಾರೆ. ಹವಾ ನಿಯಂತ್ರಿತ ಕಚೇರಿಯಲ್ಲಿ ಕುಳಿತು ಆರೋಗ್ಯ ಸಚಿವ ಯು.ಟಿ.ಖಾದರ್ ಗುಟ್ಕಾ ನಿಷೇಧ ಎಂದು ಹೇಳಿಕೆ ಕೊಟ್ಟರೆ ಅಡಕೆ ಬೆಳೆಗಾರರ ಗತಿ ಏನಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾವು ಸರ್ಕಾರದ ಹೇಳಿಕೆಗೆ ಇನ್ನು ಒಂದು ವಾರ ಕಾಯುತ್ತೇವೆ. ಸರ್ಕಾರ ನೀಡಿರುವ ಹೇಳಿಕೆ ಹಿಂಪಡೆಯದಿದ್ದರೆ ಪ್ರತಿ ಮನೆಗೆ ಮನೆಗೆ ಸರ್ಕಾರದ ಈ ನಿಲುವಿನ ಬಗ್ಗೆ ಮನವರಿಕೆ ಮಾಡಿಕೊಟ್ಟು ಸುಮಾರು 10 ಸಾವಿರಕ್ಕೂ ಹೆಚ್ಚು ಅಡಕೆ ಬೆಳೆಗಾರರು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ, ಹೇಳಿಕೆ ಹಿಂಪಡೆಯುವರೆಗೂ ನಾವು ಅಹೋರಾತ್ರಿ ಧರಣಿ ನಡೆಸುತ್ತೇವೆ ಎಂದು ಹೇಳಿದರು.

ರಾಶಿ ಅಡಕೆಗೆ 60 ಸಾವಿರ ನಿಗದಿ ಮಾಡಿ:

ಅಡಕೆ ಬೆಳೆಗಾರರು ಇಂತಹ ಹೇಳಿಕೆಗಳು ಅಕಾಲಿಕ ಮಳೆಯಿಂದ ಜರ್ಜರಿತರಾಗಿದ್ದಾರೆ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಪ್ರತಿ ಕ್ವಿಂಟಲ್‌ಗೆ ₹60 ಸಾವಿರ ಬೆಂಬಲ ಬೆಲೆ ನಿಗದಿ ಮಾಡಲಿ. ಆಗ ಮಾತ್ರ ಅಡಕೆ ಬೆಳೆಗಾರರು ಉಸಿರಾಡಬಹುದು ಎಂದರು.

ಶಾಸಕರು ಸಿಎಂ ಜತೆ ಚರ್ಚಿಸಲಿ:

ಅಡಕೆ ಮಂಡಳಿ ರಚನೆ ಒಳಗೊಂಡಂತೆ ಬೆಳೆಗಾರರ ಅನೇಕ ಸಮಸ್ಯೆ ಕುರಿತು ಶಾಸಕ ಡಿ.ಜಿ.ಶಾಂತನಗೌಡ ತಮ್ಮ ಪಕ್ಷದ ಶಾಸಕರ ನಿಯೋಗ ಕರೆದುಕೊಂಡು ಹೋಗಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಸಚಿವರ ಬಳಿ ಚರ್ಚಿಸಲಿ ಎಂದು ಕರಿಬಸಪ್ಪಗೌಡ ಅವರು ತಮ್ಮ ಮನವಿ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು ಎಂದು ಶಾಸಕ ಡಿ.ಜಿ.ಶಾಂತನಗೌಡರಿಗೆ ಮನವಿ ಮಾಡಿದರು.

ಸಿಎಂ ಬಳಿ ಚರ್ಚೆಗೆ ಸಮಯ:

ಆರೊಗ್ಯ ಸಚಿವ ಯು.ಟಿ.ಖಾದರ್ ಅವರ ಗುಟ್ಕಾ ನಿಷೇಧ ಹೇಳಿಕೆಯನ್ನು ಹಿಂಪಡೆಯುತ್ತೇವೆ ಎಂದು ಸಿ.ಎಂ.. ಡಿ.ಕೆ.ಶಿವಕುಮಾರ್ ಹೇಳಿದ ಮೇಲೆಯೂ ನಿಷೇಧ ಹಿಂಪಡೆಯುವ ಮಾತೇ ಇಲ್ಲ ಎಂದು ಹೇಳಿಕೆ ನೀಡಿರುವ ಸಚಿವ ಯು.ಟಿ. ಖಾದರ್ ಒಂದು ರೀತಿ ಹಠಕ್ಕೆ ಬಿದ್ದವರಂತೆ ವರ್ತಿಸುತ್ತಿದ್ದಾರೆ. ಈ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಬಳಿ ರೈತ ಸಂಘ ವತಿಯಿಂದ ಸಮಯ ಕೇಳಿದ್ದೇವೆ. ಚರ್ಚೆ ಬಳಿಕ ಗುಟ್ಕಾ ನಿಷೇಧ ವಾಪಸ್ ಪಡೆದರೆ ಸರಿ. ಇಲ್ಲವಾದರೆ 2028ರ ಚುನಾವಣೆಯಲ್ಲಿ ರಾಜ್ಯದ ರೈತರು, ಜನರು ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದಾಗಿ ನೇರವಾಗಿ ಹೇಳಿ ಬರುತ್ತೇವೆ ಎಂದು ರೈತ ಮುಖಂಡ ಕರಿಬಸಪ್ಪ ಗೌಡ ಹೇಳಿದರು.

ಅಡಕೆ ಬೆಳೆಗಾರ ಅರಬಗಟ್ಟೆ ರಮೇಶ್ ಮಾತನಾಡಿ, ರಾಜ್ಯದಲ್ಲಿ ರೈತರು ಅಡಕೆ ಕೃಷಿಯಿಂದಲ್ಲೇ ಆರ್ಥಿಕವಾಗಿ ಸದೃಢರಾಗಿದ್ದಾರೆ. ಅದನ್ನು ಮನಗಂಡು ಆರೋಗ್ಯ ಸಚಿವರು ಕೂಡಲೇ ತಮ್ಮ ಹೇಳಿಕೆ ಹಿಂಪಡೆಯಬೇಕು ಎಂದು ಆರೋಗ್ಯ ಸಚಿವರಿಗೆ ತಾಕೀತು ಮಾಡಿದರು.

ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಸಿ.ಬಸಪ್ಪ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎ. ಗದ್ದಿಗೇಶ್, ಮುಖಂಡರಾದ ದಿಡಗೂರು ಎ.ಜಿ.ಪ್ರಕಾಶ್, ಚನ್ನವೀರಪ್ಪ ಗೌಡ, ಶಿವನಗೌಡ, ವಿನಯ್ ವಗ್ಗರ್ ಮುಂತಾದವರು ಮಾತನಾಡಿದರು.

ನಂತರ ಗ್ರೇಡ್ -2 ತಹಸೀಲ್ದಾರ್ ಸುರೇಶ್ ಅವರಿಗೆ ಮನವಿ ಸಲ್ಲಿಸಿದರು. ಇದಕ್ಕೂ ಮೊದಲು ಸಹಸ್ರಾರು ರೈತರು ಸಂಗೊಳ್ಳಿ ರಾಯಣ್ಣ ವೃತ್ತದಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ತಾಲೂಕು ಆಡಳಿತ ಬಗ್ಗೆ ಆಕ್ರೋಶ:

ರೈತ ಸಂಘ, ಹಸಿರು ಸೇನೆ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲು ತಾಲೂಕು ಕಚೇರಿಗೆ ಆಗಮಿಸಿದ ಪ್ರತಿಭಟನಾನಿರತರು ತಹಸೀಲ್ದಾರ್ ಇಲ್ಲದೇ ಗ್ರೇಡ್-2 ತಹಸೀಲ್ದಾರ್ ಸುರೇಶ್ ಮನವಿ ಪತ್ರ ಸ್ವೀಕರಿಸಲು ಆಗಮಿಸಿದರು. ಈ ವೇಳೆ ಗ್ರೇಡ್-1 ತಹಸೀಲ್ದಾರ್ ಇಲ್ಲವೇ ಎಂದು ಕೇಳಿದಾಗ ಅವರು ದಾವಣಗೆರೆಗೆ ಮೀಟಿಂಗ್‌ಗೆ ಹೋಗಿದ್ದಾರೆಂದು ಹೇಳಿದರು. ಇದರಿಂದ ಅಸಮಾಧಾನಗೊಂಡ ರೈತ ಮುಖಂಡ ಕರಿಬಸಪ್ಪ ಗೌಡ, ತಾಲೂಕಿನಲ್ಲಿ ಸಂಘ ಸಂಸ್ಥೆಗಳವರು ಸಾರ್ವಜನಿಕರು ಅಹವಾಲುಗಳ ಬಗ್ಗೆ ಮನವಿ ಕೊಡಲು ಯಾವಾಗ ಬಂದರೂ ತಹಸೀಲ್ದಾರ್ ಲಭ್ಯವಿರಲ್ಲ. ಪ್ರತಿ ಬಾರಿಯೂ ಮೀಟಿಂಗ್‌ಗೆ ಹೋಗಿದ್ದಾರೆ ಎನ್ನುವ ಸಿದ್ಧಉತ್ತರ ಸಿಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು. ತಾಲೂಕಿನಲ್ಲಿ ಇಡೀ ಆಡಳಿತ ವ್ಯವಸ್ಥೆ ಕೆಟ್ಟುಹೋಗಿ ಜನರ ಸಮಸ್ಯೆಗಳನ್ನು ಕೇಳುವವರೇ ಇಲ್ಲದಂತಾಗಿದೆ. ತಾಲೂಕು ಮಟ್ಟದ ಅಧಿಕಾರಿಗಳು ಜನರ ಕೈಗೆ ಸಿಗುವುದೇ ದುಸ್ತರವಾಗಿದೆ. ಸ್ಥಳೀಯ ಶಾಸಕರು ಈ ಬಗ್ಗೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭ ಹಿರೇಕಲ್ಮಠದ ಬಸವರಾಜಪ್ಪ, ಸಾಸ್ವೇಹಳ್ಳಿ ರಾಜಪ್ಪ, ತಕ್ಕನಹಳ್ಳಿ ಸುರೇಶ್, ಶಿವಮೂರ್ತಿ, ಗಜೇಂದ್ರಪ್ಪ, ಆರುಂಡಿ ಜಯಪ್ರಕಾಶ್ ಹಾಗೂ ರೈತ ಸಂಘದ ಮುಖಂಡರು ಇದ್ದರು.

- - -

-21ಎಚ್.ಎಲ್.ಐ2:

ರಾಜ್ಯ ರೈತ ಸಂಘ, ಹಸಿರು ಸೇನೆ ನೇತೃತ್ವದಲ್ಲಿ ರಾಜ್ಯ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಹಸಿರು ಸೇನೆ ರಾಜ್ಯಾಧ್ಯಕ್ಷ ಎಂ.ಪಿ.ಕರಿಬಸಪ್ಪಗೌಡ ಮಾತನಾಡಿದರು. ಗ್ರೇಡ್ -2 ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು. ಸಂಘದ ತಾಲೂಕು ಅಧ್ಯಕ್ಷ ಮತ್ತಿತರ ಮುಖಂಡರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೋಟೆಲ್, ರೆಸ್ಟೋರೆಂಟ್‌ಗಳ ಮೇಲೆ ದಿಢೀರ್ ದಾಳಿ
ಖರ್ಗೆಗೆ ಅಪಮಾನ ಖಂಡಿಸಿ ಬೀದರಲ್ಲಿ ಡಿಎಸ್ಎಸ್ ಪ್ರತಿಭಟನೆ