ರಾಜ್ಯಸಭಾ ಸದಸ್ಯರು ಹಾಗೂ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಶುಚಿಗೊಳಿಸಿ ಹೋಮಹವನ ನಡೆಸಿ ಅಸ್ಪೃಶ್ಯತೆ ಆಚರಿಸಿದ ಜಾತಿವಾದಿಗಳ ಕೃತ್ಯ ಖಂಡಿಸಿ, ಈ ಕೃತ್ಯದಲ್ಲಿ ಭಾಗಿಯಾದ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಆಗ್ರಹಿಸಿ ಶುಕ್ರವಾರ ಬೀದರಿನಲ್ಲಿ ಡಿಎಸ್ಎಸ್ ವತಿಯಿಂದ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬೀದರ್

ರಾಜ್ಯಸಭಾ ಸದಸ್ಯರು ಹಾಗೂ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಶುಚಿಗೊಳಿಸಿ ಹೋಮಹವನ ನಡೆಸಿ ಅಸ್ಪೃಶ್ಯತೆ ಆಚರಿಸಿದ ಜಾತಿವಾದಿಗಳ ಕೃತ್ಯ ಖಂಡಿಸಿ, ಈ ಕೃತ್ಯದಲ್ಲಿ ಭಾಗಿಯಾದ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಆಗ್ರಹಿಸಿ ಶುಕ್ರವಾರ ಬೀದರಿನಲ್ಲಿ ಡಿಎಸ್ಎಸ್ ವತಿಯಿಂದ ಪ್ರತಿಭಟನೆ ನಡೆಸಿದರು.

ನಗರದ ಡಾ.ಅಂಬೇಡ್ಕರ್ ಭವನದಿಂದ ಮೆರವಣಿಗೆ ಆರಂಭಿಸಿ ವಿವಿಧ ರಸ್ತೆಗಳ ಮೂಲಕ ಸಾಗಿ ಡಾ.ಅಂಬೇಡ್ಕರ್ ವೃತ್ತದಲ್ಲಿ ಕೆಲ ಹೊತ್ತು ಮಾನವ ಸರಪಳಿ ನಡೆಸುವ ಮೂಲಕ ಆರ್‌ಎಸ್‌ಎಸ್ ಹಾಗೂ ಜಾತಿವಾದಕ್ಕೆ ಪ್ರೋತ್ಸಾಹ ನೀಡುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಡಿಎಸ್‌ಎಸ್ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ದೆ ಮಾತನಾಡಿ ಭಾರತವನ್ನು ಯಾವುದೇ ಒಂದು ಜಾತಿ ಅಥವಾ ಧರ್ಮದ ದೇಶವೆಂದು ಬಿಂಬಿಸುವ ಪ್ರಯತ್ನ ಸಲ್ಲದು. ದೇಶದ ವೈವಿಧ್ಯತೆ, ಸಮಾನತೆ ಮತ್ತು ಜಾತ್ಯತೀತ ಮೌಲ್ಯಗಳನ್ನು ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ. ಜಾತಿ, ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸುವ ರಾಜಕಾರಣವನ್ನು ತಿರಸ್ಕರಿಸಿ, ಡಾ.ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳಂತೆ ಸಾಮಾಜಿಕ ನ್ಯಾಯವನ್ನು ಸ್ಥಾಪಿಸಬೇಕು ಎಂದರು.

ವಿರೋಧ ಪಕ್ಷದ ನಾಯಕರು ಸೇರಿದಂತೆ ಸಂವಿಧಾನಬದ್ಧ ಹುದ್ದೆಗಳನ್ನು ಅಲಂಕರಿಸಿರುವ ಜನಪ್ರತಿನಿಧಿಗಳಿಗೆ ಗೌರವ ನೀಡಬೇಕು. ಯಾವುದೇ ವ್ಯಕ್ತಿ ಅಥವಾ ಸಮುದಾಯಕ್ಕೆ ಅವಮಾನವಾಗುವ ರೀತಿಯ ನಡೆಗಳನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಹಿಸಬಾರದು. ಇಂತಹ ಘಟನೆಗಳು ದಲಿತರು, ಬಹುಜನರು ಹಾಗೂ ಶೋಷಿತ ಸಮುದಾಯಗಳ ಆತ್ಮಗೌರವಕ್ಕೆ ಧಕ್ಕೆ ತರುವಂತಿವೆ ಎಂದು ಅವರು ಹೇಳಿದ್ದರು.

ದಲಿತ ಮುಖಂಡರಾದ ಬಾಬು ಪಾಸ್ವಾನ್‌ ಮಾತನಾಡಿ, ಭಾರತವು ಸರ್ವ ಜಾತಿ, ಸರ್ವಧರ್ಮದ ಜನರು ಸಮಾನವಾಗಿ ಬದುಕುವ ಪ್ರಜಾಪ್ರಭುತ್ವ ರಾಷ್ಟ್ರ ವಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನವು ಸಮಾನತೆ, ಸ್ವಾತಂತ್ರ್ಯ, ಸಹೋದರತ್ವ ಹಾಗೂ ಸಾಮಾಜಿಕ ನ್ಯಾಯದ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ. ಆದರೆ, ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸುವ ಪ್ರಯತ್ನಗಳು ನಡೆಯುತ್ತಿ ರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.

ಸಿಪಿಎಂ ಮುಖಂಡ ಬಾಬುರಾವ್‌ ಹೊನ್ನಾ ಮಾತನಾಡಿ ಡಾ.ಅಂಬೇಡ್ಕರ್ ಅವರು ದೇಶದ ಸ್ವಾತಂತ್ರ್ಯ, ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಮಹತ್ವದ ಕೊಡುಗೆ ನೀಡಿದ್ದಾರೆ. ಸಂವಿಧಾನದ ಮೂಲಕ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸ್ವಾತಂತ್ರ್ಯ, ಸಮಾನತೆ ಮತ್ತು ನ್ಯಾಯದ ಹಕ್ಕುಗಳನ್ನು ಕಲ್ಪಿಸಿದ್ದಾರೆ. ಮಹಿಳೆಯರ ಹಕ್ಕುಗಳಿಗಾಗಿ ಅಂಬೇಡ್ಕರ್ ಅವರು ಮಂಡಿಸಿದ ಹಿಂದೂ ಕೋಡ್ ಬಿಲ್‌ಗೆ ವಿರೋಧ ವ್ಯಕ್ತವಾದ ಸಂದರ್ಭದಲ್ಲಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ಅರುಣ ಪಟೇಲ್, ರಾಜಕುಮಾರ ವಾಘಮಾರೆ, ವಿಠಲದಾಸ್ ಪ್ಯಾಗೆ, ಬಾಬು ಟೈಗರ್‌, ರಮೇಶ ಉಮಾಪೂರೆ, ರಮೇಶ ಬೆಲ್ದಾರ್, ಅಶೋಕ ಗಾಯಕವಾಡ, ಶಿವರಾಜ ತಡಪಳ್ಳಿ, ವಾಮನ ಮೈಸಲಗೆ, ಶಿರೋಮಣಿ ಹಲಗೆ, ವಿಜಯಕುಮಾರ ಬಾವಿಕಟ್ಟಿ. ಝರೆಪ್ಪಾ ವರ್ಮಾ, ಶಿವಕುಮಾರ ನಿಲಿಕಟ್ಟೆ, ಭರತ ಕಾಂಬ್ಳೆ, ಸುಬ್ಬಣ್ಣ ಕರಕನಳ್ಳಿ, ಶ್ರೀಪತರಾವ್ ದೀನೆ, ಸತೀಶ ರತ್ನಾಕರ, ಜಗದೀಶ ಬೀರಾದಾರ, ಪವನ ಮಿಠಾರೆ ಸೇರಿದಂತೆ ದಲಿತ ಸಂಘರ್ಷ ಸಮಿತಿಯ ನೂರಾರು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

--

ಚಿತ್ರ 21ಬಿಡಿಆರ್54:

ಬೀದರಿನಲ್ಲಿ ಡಿಎಸ್‌ಎಸ್ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಿದರು.